ಪೌರಾಯುಕ್ತರ ವಿರುದ್ಧ ನಗರಸಭೆ ಸದಸ್ಯರ ಧರಣಿ

| Published : Mar 18 2024, 01:50 AM IST

ಸಾರಾಂಶ

ನಗರಸಭೆಯಲ್ಲಿ ಪೌರಾಯುಕ್ತರ ದುರಾಡಳಿತ ಮಿತಿಮೀರಿದ್ದು, ಖಾತೆಗೆ ಸಂಬಂಧಿಸಿದಂತೆ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ನಗರಸಭೆ ಆವರಣದಲ್ಲಿ ನಗರಸಭೆ ಅಧ್ಯಕ್ಷ ಪಿ. ಪ್ರಶಾಂತ್ ನೇತೃತ್ವದಲ್ಲಿ ಜಮಾಯಿಸಿದ ನಗರಸಭೆ ಸದಸ್ಯರು, ಪೌರಾಯುಕ್ತರ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು.

ಚನ್ನಪಟ್ಟಣ: ನಗರಸಭೆಯಲ್ಲಿ ಪೌರಾಯುಕ್ತರ ದುರಾಡಳಿತ ಮಿತಿಮೀರಿದ್ದು, ಖಾತೆಗೆ ಸಂಬಂಧಿಸಿದಂತೆ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ನಗರಸಭೆ ಆವರಣದಲ್ಲಿ ನಗರಸಭೆ ಅಧ್ಯಕ್ಷ ಪಿ. ಪ್ರಶಾಂತ್ ನೇತೃತ್ವದಲ್ಲಿ ಜಮಾಯಿಸಿದ ನಗರಸಭೆ ಸದಸ್ಯರು, ಪೌರಾಯುಕ್ತರ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷ ಪಿ. ಪ್ರಶಾಂತ್ ಮಾತನಾಡಿ, ಪೌರಾಯುಕ್ತರು ನಿಯೋಜನೆಗೊಂಡ ಬಳಿಕ ನಗರಸಭೆಯಲ್ಲಿ ಸಾವಿರಾರು ಅಕ್ರಮ ಖಾತೆಗಳನ್ನು ಮಾಡಿಕೊಡಿಕೊಟ್ಟಿದ್ದು ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ಪೌರಾಯುಕ್ತರು ಮಧ್ಯವರ್ತಿಗಳು ತರುವ ಖಾತೆಗಳನ್ನು ಮಾಡಿಕೊಡುತ್ತಿದ್ದಾರೆ. ನಗರಸಭೆ ಸದಸ್ಯರ ಯಾವುದೇ ಮಾತಿಗೆ ಬೆಲೆ ಸಿಗುತ್ತಿಲ್ಲ ಎಂದು ಅಲವತ್ತುಕೊಂಡರು.

ಕೆಲಸ ಮಾಡಿಸಿಕೊಳ್ಳಲು ಅಸಮರ್ಥರು:

ನಗರಸಭೆಯಲ್ಲಿ ಜನಹಿತ ಕೇಂದ್ರವಿದ್ದರೂ ಅಲ್ಲಿ ಅರ್ಜಿ ಸ್ವೀಕರಿಸುವುದಿಲ್ಲ. ಆದರೆ, ಮಧ್ಯವರ್ತಿಗಳ ಮೂಲಕ ಯಾರಿಗೂ ತಿಳಿಯದಂತೆ ಖಾತೆಗಳನ್ನು ಮಾಡಿಕೊಡಲಾಗುತ್ತಿದೆ. ಕೆಲ ಅಕ್ರಮ ಖಾತೆಗಳಿಗೆ ಸಂಬಂಧಪಟ್ಟಂತೆ ಅಧಿಕಾರಿಗಳನ್ನು ಮಾಹಿತಿ ಕೇಳಿದರೆ ನೀಡುವುದೇ ಇಲ್ಲ. ಜನರಿಂದ ಆಯ್ಕೆಯಾಗಿ ಬಂದಿದ್ದರೂ ನಮ್ಮ ವಾರ್ಡ್‌ನಲ್ಲಿ ಕೆಲಸ ಮಾಡಿಕೊಳ್ಳಲು ಅಸಮರ್ಥರಾಗಿದ್ದೇವೆ ಎಂದು ಈ ವೇಳೆ ಕೆಲ ನಗರಸಭೆ ಸದಸ್ಯರು ಅಸಹಾಯಕತೆ ವ್ಯಕ್ತಪಡಿಸಿದರು.

ಬಹುತೇಕರ ಸದಸ್ಯರು ಗೈರು:

ಪ್ರತಿಭಟನೆಯಲ್ಲಿ ಆಡಳಿತಾರೂಢ ಜೆಡಿಎಸ್‌ನ ಬಹುತೇಕ ನಗರಸಭೆ ಸದಸ್ಯರು ಗೈರಾಗಿದ್ದರು. ಇಲ್ಲಿನ ನಗರಸಭೆಯಲ್ಲಿ ಜೆಡಿಎಸ್‌ನ ೧೬ ಸದಸ್ಯರಿದ್ದು, ಎನ್‌ಡಿಎ ಕೂಟದಲ್ಲಿ ಗುರುಸಿಕೊಂಡಿದ್ದರೂ ಬಿಜೆಪಿ ಸದಸ್ಯರು ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಿದ್ದು ಕಂಡು ಬಂದಿತ್ತು. ಪ್ರತಿಭಟನೆಯಲ್ಲಿ ಸದಸ್ಯರಾದ ಮಂಜುನಾಥ್, ನಾಗೇಶ್, ಸತೀಶ್ ಬಾಬು, ಲೋಕೇಶ್, ಎಂ.ಜೆ. ರೇವಣ್ಣ, ಕಂಠಿ, ಮಹದೇವು, ಮತೀನ್, ಮಂಗಳವಾರಪೇಟೆ ಸತೀಶ್ ಇತರರು ಹಾಜರಿದ್ದರು.