ಅಧಿಕಾರಿಗಳು, ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಶಾಸಕರ ಕ್ಲಾಸ್

| Published : Oct 24 2024, 12:44 AM IST

ಸಾರಾಂಶ

ತಾಲೂಕು ಆಡಳಿತ ಸೌಧಕ್ಕೆ ನಿತ್ಯ ಸಾವಿರಾರು ರೈತರು ಬರುತ್ತಾರೆ. ಇವರಿಗೆ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ನಿತ್ಯ ಅರ್ಜಿ ಹಿಡಿದು ನಿಲ್ಲುವವರಲ್ಲಿ ಸಾಕಷ್ಟು ಜನ ವಯೋವೃದ್ಧರು. ಇವರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರಿ ಸೇವೆಗೆ ಬರುವ ಅಧಿಕಾರಿಗಳು, ಸಿಬ್ಬಂದಿಯ ಕಾರ್ಯಲೋಪದಿಂದಾಗಿ ಜನ ನಿತ್ಯ ಅರ್ಜಿ ಹಿಡಿದು ಕಚೇರಿ ಮತ್ತು ಶಾಸಕರ ಬಳಿಗೆ ಅಲೆದಾಡುವ ಸ್ಥಿತಿ ಎದುರಾಗಿದೆ ಎಂದು ಶಾಸಕ ಎಚ್.ಟಿ. ಮಂಜು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಸಾರ್ವಜನಿಕರು ಸರ್ಕಾರಿ ಕಚೇರಿಗಳು ಅಥವಾ ಕ್ಷೇತ್ರದ ಶಾಸಕರ ಬಳಿಗೆ ಅರ್ಜಿ ಹಿಡಿದು ಅಲೆದಾಡುವ ಅಗತ್ಯ ಇರುವುದಿಲ್ಲ. ಸರ್ಕಾರಿ ಸೇವೆಗೆ ಬಂದವರು ಜನಪರ ಕಾಳಜಿಯಿಂದ ಕೆಲಸ ಮಾಡಬೇಕು ಎಂದು ತಿಳಿಹೇಳಿದರು.

ಕಂದಾಯ ಇಲಾಖೆ ರೈತರ ಜೀವನಾಡಿ. ಆದರೆ, ಈ ಇಲಾಖೆ ನೌಕರರು ರೈತರ ಜೀವ ಹಿಂಡುತ್ತಿದ್ದಾರೆ. ಗ್ರಾಮ ಆಡಳಿತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕುಳಿತು ಕೆಲಸ ಮಾಡುತ್ತಿಲ್ಲ. ತಹಸೀಲ್ದಾರ್ ಕಾರ್ಯಲಯದ ಸಿಬ್ಬಂದಿ ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಹಾಜರಾತಿ ಬಯೋಮೆಟ್ರಿಕ್ ವ್ಯವಸ್ಥೆ ಹಾಳಾಗಿ ವರ್ಷಗಳು ಕಳೆದಿದ್ದರೂ ಅದನ್ನು ಸರಿಪಡಿಸುವ ಕೆಲಸ ಇದುವರೆಗೂ ಆಗಿಲ್ಲ ಎಂದರು.

ತಾಲೂಕು ಆಡಳಿತ ಸೌಧಕ್ಕೆ ನಿತ್ಯ ಸಾವಿರಾರು ರೈತರು ಬರುತ್ತಾರೆ. ಇವರಿಗೆ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ನಿತ್ಯ ಅರ್ಜಿ ಹಿಡಿದು ನಿಲ್ಲುವವರಲ್ಲಿ ಸಾಕಷ್ಟು ಜನ ವಯೋವೃದ್ಧರು. ಇವರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆಡಳಿತ ಸೌಧದ ನಿರ್ವಹಣೆಗೆ ಮಾಸಿಕ 1 ಲಕ್ಷ ರು. ಹಣ ಬಿಡುಗಡೆಯಾಗುತ್ತದೆ. ಆದರೆ, ಆಡಳಿತ ಸೌಧದಲ್ಲಿ ಸ್ವಚ್ಛತೆ ಕೊರತೆಯಿದೆ. ಕಸದ ರಾಶಿ ಮೂಲೆ ಮೂಲೆಯಲ್ಲೂ ತುಂಬಿದೆ. ಸಾರ್ವಜನಿಕರಿಗೆ ಸ್ವಚ್ಛತೆಯ ಪಾಠ ಮಾಡಲು ನಿಮಗೆ ಅರ್ಹತೆ ಏನಿದೆ ಎಂದು ಪ್ರಶ್ನಿಸಿದ ಶಾಸಕರು, ಸಕಾಲದಲ್ಲಿ ಕಚೇರಿಗೆ ಆಗಮಿಸಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದರು.

ಅರ್ಜಿ ಸ್ವೀಕರಿಸಲು ಲಂಚ:

ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಟಪಾಲು ಸಿಬ್ಬಂದಿಗೆ ನೀಡಬೇಕು. ಆದರೆ, ಅರ್ಜಿ ಸ್ವೀಕರಿಸಲು ಟಪಾಲು ಸಿಬ್ಬಂದಿ ರೈತರಿಂದ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ನನ್ನ ಸಹಾಯಕನ ಮೂಲಕ ಅರ್ಜಿ ಕಳುಹಿಸಿದ್ದರೆ ಟಪಾಲು ಸಿಬ್ಬಂದಿ ಸತೀಶ್ ಹಣ ಕೇಳಿದ್ದಾನೆ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದ ನೌಕರನನ್ನು ಸಭೆ ಮುಂದೆ ಕರೆಸಿ ಛೀಮಾರಿ ಹಾಕಿದರು. ನೌಕರನ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದರು.

ತಾಲೂಕು ಮಟ್ಟದಲ್ಲಿ ಪೌತಿ ಖಾತಾ ಆಂದೋಲನ ಮಾಡಲಾಗಿದೆ. ಆದರೂ 4464 ಪೌತಿ ಖಾತೆಗಳು ಬಾಕಿ ಇವೆ. ಪೌತಿಯಾದವರ ಮರಣ ಪ್ರಮಾಣ ಪತ್ರ ಇಲ್ಲದಿದ್ದರೆ ಆಯಾ ವಿ.ಎ ಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಿ ಪೌತಿ ಖಾತೆಗಳನ್ನು ಮಾಡಬಹುದು. ಅದೇ ರೀತಿ ತಾಲೂಕಿನ ವಿವಿಧ ಭಾಗಗಳಿಂದ ವಿಲೇಗಾಗಿ 5519 ಅರ್ಜಿಗಳು ಸ್ವೀಕೃತವಾಗಿವೆ. ಕೇವಲ 2478 ಅರ್ಜಿಗಳು ಮಾತ್ರ ವಿಲೇ ಆಗಿವೆ. 3041 ಕಡತಗಳು ವಿಲೇವಾರಿಗಾಗಿ ಕಾದು ಕುಳಿತಿವೆ. ಕೂಡಲೇ ಲೋಪದೋಷಗಳನ್ನು ಸರಿಪಡಿಸಿ ಕಡತ ವಿಲೇ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಗ್ರೆಡ್-2 ತಹಸೀಲ್ದಾರ್ ಬಿ.ಆರ್.ಲೋಕೇಶ್, ಹಿರಿಯ ಶಿರಸ್ತೇದಾರ್ ರವಿ, ಸಹಾಯಕ ಭೂ ಮಾಪನ ನಿರ್ದೇಶಕ ಚಂದ್ರಶೇಖರ್ ಸೇರಿದಂತೆ ವಿವಿಧ ಹೋಬಳಿಗಳ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.