ಹವಮಾನ ವೈಪರೀತ್ಯ: ಬಾಳೆ ಫಸಲು ಕುಸಿತ

| Published : Feb 14 2025, 12:30 AM IST

ಸಾರಾಂಶ

ಮಾರುಕಟ್ಟೆಯಲ್ಲಿ ಒಂದು ತಿಂಗಳ ಹಿಂದೆ ಪ್ರತಿ ಕೆಜಿ ಬಾಳೆಹಣ್ಣು 30 ರಿಂದ 40 ರು.ಗೆ ಮಾರಾಟವಾಗುತ್ತಿತ್ತು. ಆದರೆ, ನಾನಾ ರಾಜ್ಯದಿಂದ ಬಾಳೆ ಹಣ್ಣು ಪೂರೈಕೆ ಆಗದ ಹಿನ್ನೆಲೆ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ 65 ರಿಂದ 75 ರೂ.ವರೆಗೆ ಮಾರಾಟವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹವಮಾನ ವೈಪರಿತ್ಯದಿಂದ ಬಾಳೆ ಫಸಲು ಕುಂಠಿತವಾಗಿದೆ. ಬಾಳೆ ಹಣ್ಣಿನ ದರ ಗಣನೀಯ ಏರಿಕೆ ಕಂಡಿದೆ. ಪ್ರತಿ ಕೆಜಿ ಏಲಕ್ಕಿ ಬಾಳೆಹಣ್ಣು 70 ರುಪಾಯಿ ದಾಟಿದ್ದು, ದಿನದಿಂದ ದಿನಕ್ಕೆ ಈ ದರ ಏರಿಕೆಯಾಗುತ್ತಿದೆ.

ಜಿಲ್ಲೆಯ ಸ್ಥಳೀಯ ಮಾರುಕಟ್ಟೆಯಲ್ಲಿ ಬಾಳೆಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ಒಂದು ತಿಂಗಳ ಹಿಂದೆ ಪ್ರತಿ ಕೆಜಿ ಬಾಳೆಹಣ್ಣು 30 ರಿಂದ 40 ರು.ಗೆ ಮಾರಾಟವಾಗುತ್ತಿತ್ತು. ಆದರೆ, ನಾನಾ ರಾಜ್ಯದಿಂದ ಬಾಳೆ ಹಣ್ಣು ಪೂರೈಕೆ ಆಗದ ಹಿನ್ನೆಲೆ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ 65 ರಿಂದ 75 ರೂ.ವರೆಗೆ ಮಾರಾಟವಾಗುತ್ತಿದೆ.

ಕೆಜಿಗೆ ₹100 ತಲುಪುವ ಸಾಧ್ಯತೆ

ಕೆಲವೇ ದಿನದಲ್ಲಿ 100 ರೂ. ತಲುಪುದರಲ್ಲಿ ಸಂದೇಹವಿಲ್ಲಾ, ಶಿವರಾತ್ರಿ ಹಬ್ಬ ಸಮೀಪಿಸುತ್ತಿದ್ದು, ದರವೂ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ. ಇದಲ್ಲದೆ ಪಚ್ಚಬಾಳೆ ಹಣ್ಣು ಕೂಡ ಕೆಜಿ 30 ರಿಂದ 40 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹಣ್ಣಿನ ದರ ಜತೆಗೆ ಬಾಳೆ ಎಲೆ ದರವೂ ಹೆಚ್ಚಳವಾಗಿದೆ. ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಈ ಬಾರಿ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯ ಹಾಗೂ ಮುಂಗಾರು ಮಳೆಯಲ್ಲಿ ಉಂಟಾದ ವ್ಯತ್ಯಾಸದಿಂದ ಬಾಳೆ ಇಳುವರಿ ಕುಸಿತವಾಗಿದೆ. ಕೆಲವೆಡೆ ಅಕಾಲಿಕ ಮಳೆ, ಬಿಸಿಲು ಕೂಡ ಸಮಸ್ಯೆಯಾಗಿದೆ. ಇದರಿಂದ ಬಾಳೆ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದೆರಡು- ಮೂರು ತಿಂಗಳುಗಳ ಹಿಂದೆ ಏಲಕ್ಕಿ ಬಾಳೆ ಕೆಜಿಗೆ 10 ರೂಪಾಯಿಗೂ ಕೊಳ್ಳುವವರಿಲ್ಲದೇ ಕೆಲವಡೆ ಬೇಸರಗೊಂಡ ಏಲಕ್ಕಿ ಬಾಳೆ ಬೆಳೆಗಾರರು ತೋಟಗಳನ್ನೇ ನಾಶಪಡಿಸಿದ್ದರು. ಇದೂ ಸಹ ಬಾಳೆ ಬೆಳೆ ಕಡಿಮೆಯಾಗಲು ಒಂದು ಕಾರಣ ಎನ್ನಲಾಗಿದೆ.

ಬೇರೆ ರಾಜ್ಯದಿಂದ ಬಾಳೆ ಬರುತ್ತಿಲ್ಲ

ಜೊತೆಗೆ ಜಿಲ್ಲೆಗೆ ಆಂಧ್ರಪ್ರದೇಶ, ತೆಲಾಂಗಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಸೇರಿದಂತೆ ನಾನಾ ಕಡೆಗಳಿಂದ ಬಾಳೆ ಹಣ್ಣು ಸಾಮಾನ್ಯವಾಗಿ ಈ ಅವಧಿಯಲ್ಲಿ ಪೂರೈಕೆ ಆಗಬೇಕಿತ್ತು. ಆದರೆ ಈವೆರೆಗೂ ಪೂರೈಕೆಯಾಗಿಲ್ಲ. ಇದರಿಂದ ಬೇಡಿಕೆ ಹೆಚ್ಚಿದರೂ ಕೂಡ ಪೂರೈಕೆಯಾಗದೆ ದರ ಏರಿಕೆಗೆ ಕಾರಣವಾಗಿದೆ. ಗೊನೆ ಸಮೇತ ಪ್ರತಿ ಕೆಜಿ ಬಾಳೆಹಣ್ಣು 65 ರಿಂದ 75 ರೂ.ವರೆಗೂ ಮಾರಾಟವಾಗುತ್ತಿದೆ. ಇದಲ್ಲದೆ ಚಿಲ್ಲರೆ ವ್ಯಾಪಾರದಲ್ಲಿ ಬಾಳೆ ಹಣ್ಣಿನ ದರವೂ 80ರೂ.ಗೆ ಏರಿಕೆಯಾಗಿದೆ.

ಬಾಳೆಎಲೆಗೂ ದರ ಹೆಚ್ಚಳ

ಪ್ರತಿ ಬಾಳೆಎಲೆ 2 ರಿಂದ 2.25ರೂ.ಗೆ ಸಿಗುತ್ತಿತ್ತು. ಆದರೆ ಇದೀಗ ಪ್ರತಿ ಬಾಳೆ ಎಲೆಯು 4 ರಿಂದ 5 ರುಪಾಯಿಗೆ ಮಾರಾಟವಾಗುತ್ತಿದೆ. ನವೆಂಬರ್‌, ಡಿಸೆಂಬರ್‌ನಲ್ಲಿ ಹೆಚ್ಚಾಗಿ ಸೈಕ್ಲೋನ್‌ ಪರಿಣಾಮ ಎಲೆಗಳು ಹಾಳಾಗಿದೆ. ಇದು ದರ ಏರಿಕೆಗೆ ಕಾರಣವಾಗಿದೆ.ಬೆಳೆಯಲು ಉತ್ತೇಜನ ನೀಡಲು ಪ್ರಯತ್ನಿಸಲಾಗುತ್ತಿದೆ. ನರೇಗಾದಡಿ ಬಾಳೆ ಬೆಳೆ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸಲಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಉಂಟಾದ ಹಾನಿ, ರೋಗಗಳಿಂದ ಬಾಳೆಯು ಬೇಡಿಕೆಗೆ ತಕ್ಕಂತೆ ಪೂರೈಕೆ ಆಗಿಲ್ಲ. ಈ ಹಿನ್ನೆಲೆ ದರ ಏರಿಕೆ ಕಂಡಿದೆ. ಈ ಹಿಂದೆ ಜಿಲ್ಲೆಯಲ್ಲಿ ಹೆಚ್ಚಾಗಿ ಬಾಳೆಯನ್ನು ಬೆಳೆಯುತ್ತಿದ್ದರು. ಸ್ಥಿರ ಬೆಲೆ ಸಿಗದೇ ಇರುವುದರಿಂದ ಬಾಳೆ ಬೆಳೆಯುತ್ತಿದ್ದ ಕೃಷಿಕರು ಬಾಳೆ ಕೃಷಿಯಿಂದ ವಿಮುಖರಾಗಿದ್ದು ಸಹಾ ಬೆಲೆ ಏರಿಕೆಗೆ ಕಾರಣವಾಗಿದೆ. ಇನ್ನು ಮಹಾಶಿವರಾತ್ರಿಗೆ ನಂದಿಯ ಭೋಗನಂದೀಶ್ವರ ಜಾತ್ರೆ ಇದ್ದು ಜಾತ್ರೆಯ ವೇಳೆಗೆ ದರ ಇನ್ನೂ ಹೆಚ್ಚಾಗಬಹುದು ಎಂದು ಬಾಳೆಹಣ್ಣು ಮಾರಾಟಗಾರರು ತಿಳಿಸಿದ್ದಾರೆ.

ಸಿಕೆಬಿ-1 ಸಾಂರ್ಧಭಿಕ ಚಿತ್ರ.