ಸಾರಾಂಶ
ಸಿಂಧನೂರು: ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ, ತಿಮ್ಮಾಪುರ ಏತ ನೀರಾವರಿ ಯೋಜನೆ ಉದ್ಘಾಟನೆ, ಜಲಧಾರೆ ಯೋಜನೆಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆಗಾಗಿ ಡಿ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ 6 ಜನ ಸಚಿವರು ಸಿಂಧನೂರಿಗೆ ಬರಲಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಡಿ.19ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ದೆಹಲಿಯಲ್ಲಿ ಎಐಸಿಸಿ ಸಭೆ ಕಾರಣದಿಂದ ಮುಂದೂಡಲಾಗಿದ್ದ ಕಾರ್ಯಕ್ರಮ ಡಿ.30ಕ್ಕೆ ನಿಗದಿ ಮಾಡಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ಸಂಭ್ರಮ-50ರ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿಕೊಂಡು ರಾಯಚೂರು ಜಿಲ್ಲಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಸುಮಾರು 15 ಸಾವಿರ ರು. ವಿದ್ಯಾರ್ಥಿಗಳು ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಸರ್ಕಾರಿ ಮಹಾವಿದ್ಯಾಲಯದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. 12 ಗಂಟೆಗೆ ಜಿಲ್ಲೆಯ ವಿವಿಧ ಖಾಸಗಿ ಶಿಕ್ಷಣ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು, ಕೆಕೆಆರ್‌ಡಿಬಿ ಕಾರ್ಯದರ್ಶಿ, ಅಧ್ಯಕ್ಷರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಕುಂದು-ಕೊರತೆಗಳ ಸಭೆ ನಡೆಯಲಿದೆ. ನಂತರ ಸರ್ಕಾರಿ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಹಾಗೂ ಇದರ ಸಂಚಿಕೆಯ ಮುಖಪುಟ ಬಿಡುಗಡೆ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಆರ್‌ಡಿಪಿಆರ್ ಯೋಜನೆಯಡಿ 224 ಕೋಟಿ ರು. ಅನುದಾನದಲ್ಲಿ ಸಿಂಧನೂರು ತಾಲೂಕಿನ 174 ಹಳ್ಳಿಗಳು ಸೇರಿದಂತೆ ರಾಯಚೂರು ಜಿಲ್ಲೆಯ 1436 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಜಲಧಾರೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸುವರು. ಈಗಾಗಲೇ ಟೆಂಡರ್ ಆಗಿ ಕಾಮಗಾರಿ ಪ್ರಗತಿಯಲ್ಲಿದ್ದು, 30 ತಿಂಗಳು ಕಾಲಾವಧಿ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದರು.ಮಧ್ಯಾಹ್ನ 2.45ಕ್ಕೆ ತಿಮ್ಮಾಪುರ ಏತನೀರಾವರಿ ಯೋಜನೆಯ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ಸಿಎಂ, ಡಿಸಿಎಂ ನೇತೃತ್ವದಲ್ಲಿ ನಡೆಯಲಿದೆ. 109 ಕೋಟಿ ರು. ಯೋಜನೆ ನಿರ್ಮಿಸಲಾಗಿದ್ದು, ವಲಕಂದಿನ್ನಿ, ರಾಗಲಪರ್ವಿ, ಪುಲದಿನ್ನಿ, ಧುಮತಿ, ಗೋನವಾರ, ಹುಲಗುಂಚಿ, ಆಯನೂರು, ಸಿ.ಎಸ್.ಎಫ್ ಕ್ಯಾಂಪ್, ತಿಮ್ಮಾಪುರ, ಯದ್ದಲದೊಡ್ಡಿ, ಹೆಡಗಿನಾಳ, ಪುಲಮೇಶ್ವರದಿನ್ನಿ, ಚಿತ್ರಾಲಿ, ಚಿಂತಮಾನದೊಡ್ಡಿ ಸೇರಿದಂತೆ ಒಟ್ಟು 36 ಸಾವಿರ ಎಕರೆಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಿದೆ. ಮಧ್ಯಾಹ್ನ 3.45ಕ್ಕೆ ವಳಬಳ್ಳಾರಿಯಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಲಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಮುಖಂಡ ಎನ್.ಅಮರೇಶ, ಹನುಮಂತಪ್ಪ ಮುದ್ದಾಪುರ, ನಿರುಪಾದೆಪ್ಪ ಗುಡಿಹಾಳ ವಕೀಲ ಇದ್ದರು.