ಮುಡಾ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಸಿಕ್ಯೂಷನ್‌ ತಕರಾರು ಅರ್ಜಿ ಭವಿಷ್ಯ ಇಂದು ನಿರ್ಧಾರ

| Published : Sep 24 2024, 01:54 AM IST / Updated: Sep 24 2024, 07:21 AM IST

ಮುಡಾ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಸಿಕ್ಯೂಷನ್‌ ತಕರಾರು ಅರ್ಜಿ ಭವಿಷ್ಯ ಇಂದು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಪೂರ್ವಾನುಮತಿ ರದ್ದುಪಡಿಸಲು ಕೋರಿ ಸಲ್ಲಿಸಿರುವ ಅರ್ಜಿಯ ತೀರ್ಪು ಇಂದು ಹೈಕೋರ್ಟ್‌ ನೀಡಲಿದೆ. ಈ ತೀರ್ಪು ಮುಖ್ಯಮಂತ್ರಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

ಬೆಂಗಳೂರು : ತೀವ್ರ ರಾಜಕೀಯ ವಾಗ್ವಾದ, ಪ್ರತಿಭಟನೆ, ಹಲವು ರೀತಿಯ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದ್ದ, ಮುಡಾ ಪ್ರಕರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಪೂರ್ವಾನುಮತಿ ರದ್ದುಪಡಿಸಲು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ತಕರಾರು ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌ ಮಂಗಳವಾರ ಪ್ರಕಟಿಸಲಿದೆ.

ಮುಖ್ಯಮಂತ್ರಿಗಳ ಅರ್ಜಿ ಕುರಿತು ಘಟಾನುಘಟಿ ಹಿರಿಯ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿರುವ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ನ್ಯಾಯಪೀಠ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲಿದೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿರುವ ಮುಡಾ ಪ್ರಕರಣ ಮತ್ತು ಮುಖ್ಯಮಂತ್ರಿಗಳನ್ನು ಕಾಡುತ್ತಿರುವ ಪ್ರಾಸಿಕ್ಯೂಷನ್‌ ಭೀತಿಯ ಭವಿಷ್ಯ ನಿರ್ಧಾರವಾಗಲಿದೆ. ಇಡೀ ದೇಶ ರಾಜಕಾರಣದ ಗಮನ ಈಗ ಹೈಕೋರ್ಟ್‌ನತ್ತ ನೆಟ್ಟಿದೆ. ಮುಖ್ಯಮಂತ್ರಿಗಳ ಅರ್ಜಿ ವಜಾಗೊಂಡರೆ ಅಥವಾ ಪುರಸ್ಕಾರವಾದರೆ ಮುಂದೇನಾಗಬಹುದು ಎಂಬ ಚರ್ಚೆ ಹಾಗೂ ಲೆಕ್ಕಾಚಾರಗಳು ಶುರುವಾಗಿದೆ.

ಹಲವು ಲೆಕ್ಕಾಚಾರ:

ಮುಖ್ಯಮಂತ್ರಿಗಳ ಸಿದ್ದರಾಮಯ್ಯ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿದರೆ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಪೂರ್ವಾನುಮತಿ ರದ್ದಾಗುತ್ತದೆ. ಇದರಿಂದ ಸಿದ್ದರಾಮಯ್ಯ ಅವರು ನಿರಾಳರಾಗಬಹುದು. ಆದರೆ, ರಾಜ್ಯಪಾಲರ ಪೂರ್ವಾನುಮತಿ ಪುರಸ್ಕಾರಗೊಂಡರೆ, ಸಿದ್ದರಾಮಯ್ಯ ಅವರಿಗೆ ಮತ್ತೆ ಪ್ರಾಸಿಕ್ಯೂಷನ್‌ ಭೀತಿ ಎದುರಾಗಲಿದೆ. ಹುದ್ದೆಗೆ ಸಂಚಕಾರ ಸಹ ಎದುರಾಗಬಹುದು.

ಅರ್ಜಿಯನ್ನು ಹೈಕೋರ್ಟ್‌ ಏಕ ಸದಸ್ಯ ಪೀಠ ವಜಾಗೊಳಿಸಿದರೆ, ಆ ತೀರ್ಪು ಪ್ರಶ್ನಿಸಿ ಸಿದ್ದರಾಮಯ್ಯ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿ ರಾಜ್ಯಪಾಲರ ಪೂರ್ವಾನುಮತಿ ಮತ್ತು ಏಕ ಸದಸ್ಯ ನ್ಯಾಯಪೀಠದ ತೀರ್ಪಿಗೆ ತಡೆಕೋರಬಹುದು.

ಜೊತೆಗೆ, ತಮ್ಮ ವಿರುದ್ಧ ತೀರ್ಪು ಬಂದರೆ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ತೀರ್ಪಿಗೆ ಮಧ್ಯಂತರ ತಡೆ ನೀಡುವಂತೆ ಏಕಸದಸ್ಯಪೀಠಕ್ಕೆ ಅರ್ಜಿ ಸಲ್ಲಿಸಬಹುದು.

ವಿಭಾಗೀಯ ಪೀಠ ರಾಜ್ಯಪಾಲರ ಪೂರ್ವಾನುಮತಿ ಮತ್ತು ಏಕ ಸದಸ್ಯ ನ್ಯಾಯಪೀಠದ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ನೀಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ರಿಲೀಫ್‌ ಸಿಗಲಿದೆ.

ಒಂದು ವೇಳೆ ಸಿದ್ದರಾಮಯ್ಯ ಅವರ ಅರ್ಜಿ ಪುರಸ್ಕಾರವಾದರೆ, ರಾಜ್ಯಪಾಲರ ಕಚೇರಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದು. ಜೊತೆಗೆ, ಏಕ ಸದಸ್ಯ ಪೀಠದ ತೀರ್ಪಿಗೆ ವಿಭಾಗೀಯ ಪೀಠದಲ್ಲಿ ರಾಜ್ಯಪಾಲರ ಕಚೇರಿ ತಡೆಯಾಜ್ಞೆ ಕೋರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಅಥವಾ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸದೇ ನೇರವಾಗಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

ರಾಜ್ಯಪಾಲರ ಅಂಗಳಕ್ಕೆ ವಾಪಸ್‌ ಸಾಧ್ಯತೆ:

ಈ ಎರಡು ಸಾಧ್ಯತೆ ಹೊರತು ಪಡಿಸಿ ಹೈಕೋರ್ಟ್‌, ಮುಖ್ಯಮಂತ್ರಿ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಮಂಜೂರಾಗಿರುವ ಅನುಮತಿ ರದ್ದುಪಡಿಸಿ, ಪುನಃ ಪ್ರಕರಣವನ್ನು ರಾಜ್ಯಪಾಲರ ಅಂಗಳಕ್ಕೆ ಮರಳಿಸಬಹುದು. ಜೊತೆಗೆ, ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿರುವ ಅರ್ಜಿಗಳನ್ನು ಹೊಸದಾಗಿ ಪರಿಗಣಿಸಿ, ಎಲ್ಲ ದಾಖಲೆ ಪರಿಶೀಲನೆ ನಡೆಸಿದ ನಂತರವೇ ಸೂಕ್ತ ಕಾರಣಗಳನ್ನು ನೀಡಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯಪಾಲರನ್ನು ಹೈಕೋರ್ಟ್‌ ಕೋರಬಹುದು. ಆಗ ಪ್ರಕರಣವು ಮತ್ತೆ ಮೊದಲಿನ ಹಂತಕ್ಕೆ ಬರಲಿದೆ. ಇಂತಹ ಸಂದರ್ಭ ಸೃಷ್ಟಿಯಾದರೆ ಮುಖ್ಯಮಂತ್ರಿಗಳ ಪ್ರಾಸಿಕ್ಯೂಷನ್‌ಗೆ ಕೋರಿರುವ ಅರ್ಜಿಗಳು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಾಜ್ಯಪಾಲರು ಮರು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವ ಅಗತ್ಯತೆ ಸೃಷ್ಟಿಯಾಗುತ್ತದೆ.

ಪ್ರಕರಣ ಸಾಗಿ ಬಂದ ಹಾದಿ:

ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಆ.19ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಅಂದೇ ಅರ್ಜಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಕೀಲ ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ತಡೆಯಾಜ್ಞೆ ನೀಡಲು ಪ್ರತಿವಾದ ಪರ ವಕೀಲರು ಆಕ್ಷೇಪಿಸಿದ್ದರು.ಕೊನೆಗೆ ಹೈಕೋರ್ಟ್‌, ಪ್ರಾಸಿಕ್ಯೂಷನ್ ಆಧರಿಸಿ ಮುಖ್ಯಮಂತ್ರಿಗಳ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಿತ್ತು.

ರಾಜ್ಯಪಾಲರ ಕಚೇರಿ ಪರ ಸುಪ್ರೀಂ ಕೋರ್ಟ್‌ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ, ಖಾಸಗಿ ದೂರುದಾರ ಟಿ.ಜೆ.ಅಬ್ರಾಹಾಂ, ಎಸ್‌.ಪಿ. ಪ್ರದೀಪ್‌ ಕುಮಾರ್‌ ಮತ್ತು ಸ್ನೇಹಮಯಿ ಕೃಷ್ಣಪರ ವಕೀಲರು ಪ್ರತಿವಾದ ಮಂಡಿಸಿದ್ದರು.ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರ ಅಡ್ವೋಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ವಾದಿಸಿದ್ದರು. ಸೆ. 12ರಂದು ವಾದ ಪೂರ್ಣಗೊಂಡ ನಂತರ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿತ್ತು.

ಸಾಧ್ಯಾಸಾಧ್ಯತೆಗಳು

1. ಸಿಎಂ ಅರ್ಜಿ ಪುರಸ್ಕೃತವಾದರೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ರದ್ದು: ಆಗ ಸಿಎಂ ನಿರಾಳ

2. ಸಿಎಂ ಅರ್ಜಿ ತಿರಸ್ಕೃತವಾದರೆ ದೂರುದಾರರಿಗೆ ಕೋರ್ಟ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಲು ಒಪ್ಪಿಗೆ

3. ತಮ್ಮ ಅರ್ಜಿ ತಿರಸ್ಕಾರದ ವಿರುದ್ಧ ವಿಭಾಗೀಯ ಪೀಠಕ್ಕೆ ಸಿಎಂ ಮೇಲ್ಮನವಿ ಸಲ್ಲಿಸಿ, ಆದೇಶಕ್ಕೆ ತಡೆ ಕೋರಬಹುದು

4. ಸಿಎಂ ಅರ್ಜಿ ತಿರಸ್ಕೃತವಾದರೆ ವಿಪಕ್ಷಗಳು ರಾಜೀನಾಮೆಗೆ ಪಟ್ಟು ಹಿಡಿಯಬಹುದು, ಸಿದ್ದು ರಾಜೀನಾಮೆ ನೀಡಬಹುದು