ಕೆರೆ ಯೋಜನೆಗಳಿಗೆ ಅನುದಾನ ನೀಡಲು ಸಿಎಂ ಸ್ಪಂದನೆ

| Published : Oct 10 2024, 02:24 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಅಣೆಕಟ್ಟು ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಗುದ್ದಲಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಹಿಂದಿನ ಸರ್ಕಾರದಲ್ಲಿ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕವಾಗಿ ಮಂಜೂರು ಆಗಿದೆ. ಆದರೆ ಅನುದಾನ ಬಿಡುಗಡೆ ಆಗಿಲ್ಲ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ತಾಲೂಕಿನ ಹಾಲಹಳ್ಳಿ ಬಳಿಯ ಆಣೆಕಟ್ಟು ಹಾಗೂ ಶಿವಪುರ ಬಳಿ ಕಲ್ಕಟ್ಟೆ ಕೆರೆ ಅಭಿವೃದ್ಧಿಗೆ ತಲಾ ಒಂದು ಕೋಟಿ ರು. ವೆಚ್ಚದ ಅನುದಾನದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, 110 ಕೆರೆ ಯೋಜನೆಗಳಿಗೆ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ನಾನು ಶಾಸಕನಾದ ಬಳಿಕ ಕ್ಷೇತ್ರಕ್ಕೆ ಸರಿ ಸುಮಾರು ₹೧೫೦ ಕೋಟಿ ಅನುದಾನ ಬಂದಿದೆ. ಕೆಲವು ಟೆಂಡರ್‌ ಹಂತದಲ್ಲಿವೆ. ಆದರೂ ವಿಪಕ್ಷದವರು ವಿನಾಕಾರಣ ಟೀಕೆ ಮಾಡ್ತಾವ್ರೆ, ಕ್ಷೇತ್ರದಲ್ಲಿನ ಕೆಲಸ ಕಂಡು ಸಹಿಸದೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳು ಹಾಳಾಗಿವೆ. ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ ₹೨೫ ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಸಚಿವರು ಕೂಡ ಸ್ಪಂದಿಸಿ ಅನುದಾನ ಬಿಡುಗಡೆಗೆ ಮಾತನಾಡಿದ್ದಾರೆ ಎಂದರು.

₹೧೨ ಕೋಟಿ ಬರ್ತಿದೆ:

ತಾಲೂಕಿನಲ್ಲಿ ೬೧.೪೯೭ ಮಹಿಳೆಯಗರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಮಾಸಿಕ ಎರಡು ಸಾವಿರ ರು.ಬರುತ್ತಿದೆ. ವಾರ್ಷಿಕ ₹೧೨ ಕೋಟಿ ತಾಲೂಕಿಗೆ ಬಂದಂತಾಗಿದೆ. ಇದು ಬಡವರಿಗೆ ಅನುಕೂಲವಾಗುತ್ತಿದೆಯಲ್ಲವೇ ಎಂದು ವಿಪಕ್ಷಗಳ ಹೆಸರೇಳದೆ ವಾಗ್ದಾಳಿ ನಡೆಸಿದರು.

ಸಾಮಾನ್ಯ ಜ್ಞಾನ ಇಲ್ಲ: ಮಾಜಿ ಶಾಸಕರು ಹಿರೀಕಾಟಿ ರಸ್ತೆ ವಿಚಾರದಲ್ಲಿ ಬಂದು ನಮ್ಮೂರಿನ ವಿಚಾರ ಮಾತನಾಡಿದ್ದಾರೆ. ನಮ್ಮೂರಲ್ಲಿ ಬಂದು ಮಾತನಾಡಿ ಗ್ರಾಮಸ್ಥರ ವಿಚಾರಿಸಲಿ. ನೀವೇ ಐದು ವರ್ಷ ಶಾಸಕರಾಗಿದ್ರೀ ಆಗೇನು ಮಾಡ್ತಿದ್ರೀ? ಸಾಮಾನ್ಯ ಜ್ಞಾನ ಇಲ್ಲದವರಂತೆ ಮಾತನಾಡುತ್ತೀರಲ್ಲ ಎಂದು ನಿರಂಜನ್‌ರನ್ನು ಕಾಲೆಳೆದರು.

ಹಾಲಹಳ್ಳಿ ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಮುಖಂಡ ಹಾಲಹಳ್ಳಿ ಶಿವಪ್ಪ, ಗ್ರಾಪಂ ಸದಸ್ಯ ಸ್ವಾಮಿ, ಕಮರಹಳ್ಳಿ ಗೌಡಿಕೆ ಮಹದೇವಪ್ಪ, ಹಾಲಹಳ್ಳಿ ಗೌಡಿಕೆ ನಂಜುಂಡಸ್ವಾಮಿ, ನಿಟ್ರೆ ಪಟೇಲ್‌ ನಂಜುಂಡಸ್ವಾಮಿ, ಮರಳಾಪುರ ಅಶೋಕ್‌, ರಂಗನಾಥಪುರ ಮಹೇಶ್‌ ಸೇರಿದಂತೆ ನಿಟ್ರೆ ಗ್ರಾಪಂ ವ್ಯಾಪ್ತಿಯ ಮುಖಂಡರು ಇದ್ದರು.

ಶಿವಪುರ ಸಭೆಯಲ್ಲಿ ಪುತ್ತನಪುರ ಗ್ರಾಪಂ ಅಧ್ಯಕ್ಷೆ ಹೇಮ, ಉಪಾಧ್ಯಕ್ಷ ಪುತ್ತನಪುರ ಸುರೇಶ್‌, ಶಿವಪುರ ಗ್ರಾಪಂ ಅಧ್ಯಕ್ಷ ಸಿದ್ದರಾಜು, ತಾಪಂ ಮಾಜಿ ಅಧ್ಯಕ್ಷ ಕೆ.ಎಸ್.ಜಗದೀಶಮೂರ್ತಿ, ಗ್ರಾಪಂ ಸದಸ್ಯರಾದ ಸೋಮ, ದೊಡ್ಡರಾಜು, ಸಿದ್ದಪ್ಪ, ಮುಖಂಡರಾದ ಚಿಕ್ಕರಾಜು, ಮರಿಸಿದ್ದಶೆಟ್ಟಿ ಸೇರಿದಂತೆ ಹಲವರಿದ್ದರು.