ಎಂಬಿಬಿಎಸ್‌ ವಿದ್ಯಾಭ್ಯಾಸಕ್ಕೆ ಸಂತೋಷ್‌ಗೆ ಬೇಕಿದೆ ನೆರವಿನ ಹಸ್ತ

| Published : Oct 10 2024, 02:23 AM IST

ಎಂಬಿಬಿಎಸ್‌ ವಿದ್ಯಾಭ್ಯಾಸಕ್ಕೆ ಸಂತೋಷ್‌ಗೆ ಬೇಕಿದೆ ನೆರವಿನ ಹಸ್ತ
Share this Article
  • FB
  • TW
  • Linkdin
  • Email

ಸಾರಾಂಶ

ಕಡು ಬಡತನದ ನಡು­ವೆಯೂ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾ­ರ್ಥಿ­ಯೊಬ್ಬನಿಗೆ ಈಗ ವೈದ್ಯಕೀಯ ಸೀಟು ಲಭ್ಯವಾಗಿದ್ದು, ಶಿಕ್ಷಣ ಮುಂದುವರಿಸಲು ನೆರವಿನ ಹಸ್ತ ಬೇಕಿದೆ.

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ಕಡು ಬಡತನದ ನಡು­ವೆಯೂ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾ­ರ್ಥಿ­ಯೊಬ್ಬನಿಗೆ ಈಗ ವೈದ್ಯಕೀಯ ಸೀಟು ಲಭ್ಯವಾಗಿದ್ದು,

ಶಿಕ್ಷಣ ಮುಂದುವರಿಸಲು ನೆರವಿನ ಹಸ್ತ ಬೇಕಿದೆ.

ತಾಲೂಕಿನ ಚಂದಾಪುರ ಕೆಳಗಿನ ತಾಂಡಾದ ನಿವಾಸಿ ಸಂತೋಷ್ ತಂದೆ ರೇವು ಚವ್ಹಾಣ ಸಂಕಷ್ಟದಲ್ಲಿರುವ ವಿದ್ಯಾರ್ಥಿ. ಬಾಲ್ಯದ­ಲ್ಲಿಯೇ ತಂದೆ ಕಳೆದುಕೊಂಡ ವಿದ್ಯಾರ್ಥಿಗೆ ತಾಯಿಯೇ ಆಸರೆ. ಕೂಲಿ ಕೆಲಸ ಮಾಡುವ ತಾಯಿಗೆ ಮಗನಿಗೆ ಉತ್ತಮ ಶಿಕ್ಷಣ ಕೊಡಿಸುವ ಆಸಕ್ತಿ ಇದ್ದರೂ ಕಡು ಬಡತನ ಅಡ್ಡಿ ಬಂದಿದೆ. ಹಣಕಾಸಿನ ನೆರವು ದೊರೆತರೆ ಉನ್ನತ ಶಿಕ್ಷಣ ಪಡೆಯಲು ನೆರವವಾಗಲಿದೆ.

ಓದಲು ದುಡ್ಡಿಲ್ಲ :

ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ವಿಭಾ­ಗ­ದಲ್ಲಿ 2,32,014 ನೇ ರ‍್ಯಾಂಕಿಂಗ್‌ ಗಳಿಸಿ ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ 60 ಸಾವಿರ ರು.ಗಳು ಶುಲ್ಕ ಪಾವತಿಸಿ ಸಂತೋಶ್‌ ಪ್ರವೇಶ ಪಡೆದುಕೊಂಡಿದ್ದಾರೆ. ಜೊತೆಗೆ 1.50 ಲಕ್ಷ ರು. ಕಾಲೇಜು ಶುಲ್ಕ ಹಾಗೂ 1.20 ಲಕ್ಷ ರು. ಹಾಸ್ಟೆಲ್ ಶುಲ್ಕ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ 25 ಸಾವಿರ ರು.ಗಳ ಕಿಟ್ ತೆಗೆದುಕೊಳ್ಳಬೇಕು. ಶುಲ್ಕ ಕಟ್ಟಲು ಕುಟುಂಬದಿಂದ ಸಾಧ್ಯವಿಲ್ಲ ಎಂದು ಸಂತೋಷ್ ಚಿಂತಾಕ್ರಾಂತರಾಗಿದ್ದಾರೆ.

ತಾಯಿಯೊಂದಿಗೆ ಕೆಲಸ:

ಶಾಲೆಗೆ ರಜಾ ಸಮಯದಲ್ಲಿ ತಾಯಿ, ಅಣ್ಣನ ಜತೆ ಸಂತೋಷ್‌ ಹೊಲದ ಕೆಲಸಕ್ಕೆ ಹೋಗುತ್ತಾರೆ. ಅಣ್ಣ ದಿನ ನಿತ್ಯ ಹೊಲದಲ್ಲಿ ಕೂಲಿ ಕೆಲಸ ಮಾಡಿ ಸಂಸಾರ ಗಾಡಿ ಸಾಗಿಸುತ್ತಾರೆ. ತಾಯಿ ಶಾಲೆಯ ಮುಖವನ್ನೆ ನೋಡದ ತಾವು ಕಲಿದೆಯಿದ್ದರೂ ನಮ್ಮ ಮಕ್ಕಳು ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಕೂಲಿ ಮಾಡಿ ಮಗನಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.

ಎಂಬಿಬಿಎಸ್ ಶಿಕ್ಷಣ ಪಡೆಯಲು ಅವರು ಈಗ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ನೆರವು ನೀಡಲು ಮೊ: 6360909080 ಸಂಪರ್ಕಿಸಬಹುದು. ಹಾಗೂ ಎಸ್.ಬಿ.ಐ ಬ್ಯಾಂಕ್ ಗೋಗಿ ಶಾಖೆಯ ಅವರ ಎಸ್‌ಬಿ ಖಾತೆ ಸಂಖ್ಯೆ : 36256692436 ಇದೆ. ಐ.ಎಫ್.ಎಸ್. ಸಿ. SBI N 0005979 ಆರ್ಥಿಕ ಸಹಾಯ ಸಂದಾಯ ಮಾಡಬಹುದಾಗಿದೆ.

ಮಾನವೀಯತೆ ಮೆರೆದ ದಂಪತಿ:

ತಾಲೂಕಿನ ದರ್ಶನಾಪುರ ಗ್ರಾಮದ ಬಸಮ್ಮ ಶೇಖರಗೌಡ ಎನ್ನುವ ಕೃಷಿಕ ದಂಪತಿಗಳಿಗೆ ಬಡ ಹುಡುಗ ಎಂ.ಬಿ.ಬಿ.ಎಸ್ ಓದಲು ಹಣಕಾಸಿನ ತೊಂದರೆ ಇರುವುದನ್ನು ತಿಳಿದು ತನ್ನ ತಾಳಿ ಸರ ಬ್ಯಾಂಕಿನಲ್ಲಿ ಅಡವಿಟ್ಟು 1.50 ಲಕ್ಷ ರು.ಗಳು ಸಹಾಯ ಮಾಡಿದ್ದಾರೆ. ನಮಗೆ ಮಕ್ಕಳಿಲ್ಲ. ಇಂಥ ವಿದ್ಯಾರ್ಥಿಗೆ ಸಹಾಯ ಮಾಡಿದರೆ ಈತನಿಂದ ಸಮಾಜಕ್ಕೆ ಒಳ್ಳೆಯದಾದರೆ ಅಷ್ಟೇ ಸಾಕು ಎಂದಿರುವ ಅವರು, ಯಾವುದಾದರೂ ಹಣ ಬಂದರೆ ತಾಳಿಸರ ಬಿಡಿಸಿಕೊಡಿ ಎಂದು ತಿಳಿಸಿದ್ದಾರೆ. ಕಷ್ಟದ ಕಾಲಕ್ಕೆ ಸಹಾಯಕ್ಕೆ ಬಂದ ದಂಪತಿಗಳನ್ನು ಸಂತೋಷ್ ಕುಟುಂಬ ವನಮ್ರತೆಯಿಂದ ನೆನೆಯುತ್ತಿದೆ.

ನನ್ನ ಮಗ ಒಂದು ವರ್ಷದ ಕೂಸಿರುವಾಗ ಗಂಡ ತೀರಿಕೊಂಡಿದ್ದಾರೆ. ಕೂಲಿ ಮಾಡಿ ಮಗನನ್ನು ಓದಿಸಿದ್ದೇನೆ. ನಮ್ಮ ಮಗ ಡಾಕ್ಟರ್ ಓದುತ್ತಾನೆ ಎಂದು ತಿಳಿದು ತುಂಬಾ ಸಂತೋಷವಾಗಿದೆ. ಆದರೆ, ಈಗ ದುಡಿದು ಮಗನ ಫೀಸ್ ಕಟ್ಟುವ ಶಕ್ತಿ ನಮ್ಮಲ್ಲಿ ಇಲ್ಲ. ಏನಾರಾ ಮಾರಿ ಕೊಡೋಣ ಎಂದರೆ ಏನು ಇಲ್ಲ. ಹಳೆಯ ಒಂದು ಮನೆ, ಒಂದು ಎಕರೆ ಹೊಲ ಇದ್ದು, ಅದು ಮಾರಿದರೂ ಮಗನ ಓದು ಪೂರ್ತಿ ಆಗುವುದಿಲ್ಲ. ಏನು ಮಾಡಬೇಕೆಂದು ಚಿಂತೆಯಾಗಿದೆ. ಪುಣ್ಯಾತ್ಮರು ನನ್ನ ಮಗನ ಓದಿಗೆ ಸಹಾಯ ಮಾಡಿದರ ಪುಣ್ಯ ಬರುತ್ತದೆ.

ಜಮುನಾ ಬಾಯಿ, ಎಂ.ಬಿ.ಬಿ.ಎಸ್. ವಿದ್ಯಾರ್ಥಿಯ ತಾಯಿ.

ಬಡತನದಲ್ಲಿರುವ ಈ ವಿದ್ಯಾರ್ಥಿಗೆ ಸಹಾಯ ಮಾಡಿದರೆ ಆತ ಮುಂದೆ ಡಾಕ್ಟರ್ ಆಗಿ ಈ ಸಮಾಜಕ್ಕೆ ಒಳ್ಳೆ ಸೇವೆ ಸಲ್ಲಿಸುತ್ತಾನೆ. ಅಲ್ಲದೆ ಫೀಸ್ ಕಟ್ಟಲು ಶಕ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಸಹಾಯಕ್ಕೆ ನಿಲ್ಲುತ್ತಾನೆ. ಬಡತನದ ಸಂಕಷ್ಟ ಅರಿತ ವಿದ್ಯಾರ್ಥಿಗೆ ಸಹಾಯ ಮಾಡಿದರೆ ಉಪಕಾರವಾಗುತ್ತದೆ.

- ಅನಿಲ್ ವಿ. ಪವಾರ, ಸಾಮಾಜಿಕ ಕಾರ್ಯಕರ್ತ, ರಬ್ನಳ್ಳಿ ತಾಂಡಾ.