ಸಾರಾಂಶ
ಪ್ರತ್ಯೇಕ ರಾಜ್ಯ ಕೂಗು ಬೇಡ
ಬರೀ ಉತ್ತರ ಕರ್ನಾಟಕ ಅಷ್ಟೇ ಅಲ್ಲದೆ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ನೀಡುತ್ತದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯದ ಕೂಗು ಸಲ್ಲದು. ಇದಕ್ಕೆ ಅವಕಾಶ ಕೊಡದಂತೆ ಅಭಿವೃದ್ಧಿ ಮಾಡಿ ತೋರಿಸುತ್ತೇವೆ.- ಸಿದ್ದರಾಮಯ್ಯ ಮುಖ್ಯಮಂತ್ರಿ==
ಕನ್ನಡಪ್ರಭ ವಾರ್ತೆ ಸುವರ್ಣಸೌಧಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಭರ್ಜರಿ ಕೊಡುಗೆ ನೀಡಿದೆ.ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂಜುಂಡಪ್ಪ ವರದಿ ಅನುಷ್ಠಾನ ಸಂಬಂಧ ಉನ್ನತಾಧಿಕಾರ ಸಮಿತಿ ರಚನೆ, ಕೈಗಾರಿಕೆ ಸ್ಥಾಪನೆಗೆ ಒತ್ತು, ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲದ ಅಸಲು ಪಾವತಿಸಿದಲ್ಲಿ ಸಂಪೂರ್ಣ ಬಡ್ಡಿ ಮನ್ನಾ ಸೇರಿದಂತೆ ಒಟ್ಟು ಎಂಟು ಘೋಷಣೆಗಳನ್ನು ಮಾಡಿದ್ದಾರೆ.ಬರೀ ಉತ್ತರ ಕರ್ನಾಟಕ ಅಷ್ಟೇ ಅಲ್ಲದೆ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ನೀಡುತ್ತದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯದ ಕೂಗು ಸಲ್ಲದು. ಇದಕ್ಕೆ ಅವಕಾಶ ಕೊಡದಂತೆ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.
ಈ ನಡುವೆ ಪ್ರತಿಪಕ್ಷ, ಉತ್ತರ ಕರ್ನಾಟಕದ ಬೇಡಿಕೆಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಬರೀ ಈ ಭಾಗದ ಜನರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಟೀಕಿಸಿತು. ಅಲ್ಲದೆ, ಮುಖ್ಯಮಂತ್ರಿಗಳ ಭಾಷಣದ ಬಳಿಕ ಸಭಾತ್ಯಾಗ ಮಾಡಿ ತನ್ನ ಅಸಮಾಧಾನವನ್ನು ಹೊರಹಾಕಿತು.ಎಂಟು ಘೋಷಣೆಗಳ ಪೈಕಿ ಎರಡು ಘೋಷಣೆಗಳಾದ ಹಿಂದುಳಿದ, ಅತಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಕುರಿತ ನಂಜುಂಡಪ್ಪ ವರದಿ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲದ ಮೇಲಿನ ಬಡ್ಡಿ ಮನ್ನಾ ರಾಜ್ಯದ ಎಲ್ಲ ಭಾಗಗಳಿಗೂ ಅನ್ವಯವಾಗಲಿವೆ.ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಚರ್ಚೆ ನಡೆದಿತ್ತು. ಆಡಳಿತ ಹಾಗೂ ಪ್ರತಿಪಕ್ಷಗಳ 42 ಜನ ಸದಸ್ಯರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಭಾಗ ಹಿಂದುಳಿಯಲು ಕಾರಣವೇನು? ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಆಗಬೇಕಾದ ಕೆಲಸಗಳೇನು? ಎಂಬ ಬಗ್ಗೆ ಸಲಹೆ ಕೂಡ ನೀಡಿದ್ದರು. ಎಲ್ಲ ಸದಸ್ಯರ ಅಭಿಪ್ರಾಯ ಕೇಳಿದ ಬಳಿಕ ಉಭಯ ಸದನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಾಪದ ಕೊನೆಯ ದಿನವಾದ ಶುಕ್ರವಾರ ಉತ್ತರ ನೀಡಿ ಹೊಸ ಘೋಷಣೆಗಳನ್ನು ಮಾಡಿದರು.ಹೊಸ ಘೋಷಣೆಗಳು1.ಉನ್ನತಾಧಿಕಾರ ಸಮಿತಿರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಉಂಟಾಗಬಾರದೆಂಬ ಉದ್ದೇಶದಿಂದ ನಂಜುಂಡಪ್ಪ ನೇತೃತ್ವದಲ್ಲಿ ಆಯೋಗವನ್ನು ಹಿಂದೆ ರಚಿಸಲಾಗಿತ್ತು. ವರದಿ ಸಲ್ಲಿಕೆಯಾಗಿ 21 ವರ್ಷಗಳಾಗಿವೆ. 114 ತಾಲೂಕುಗಳು ಅತ್ಯಂತ ಹಿಂದುಳಿದಿವೆ ಎಂದು ವರದಿ ಹೇಳಿತ್ತು. ನಂಜುಂಡಪ್ಪ ವರದಿ ಆಧರಿಸಿ ಈವರೆಗೆ 32433.43 ಕೋಟಿ ರು. ಖರ್ಚು ಮಾಡಲಾಗಿದೆ. ಇದಲ್ಲದೇ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 61330 ಕೋಟಿ ರು. ಅನುದಾನವನ್ನು ಒದಗಿಸಲಾಗಿದೆ. ಇದರಲ್ಲಿ 42000 ಕೋಟಿ ರು. ಖರ್ಚು ಆಗಿದೆ. ಆದರೂ ಅತಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕವು ಸುಧಾರಿಸುತ್ತಿಲ್ಲ. ಶಿಕ್ಷಣ, ಆರೋಗ್ಯ, ತಲಾ ಆದಾಯ ಗಳಿಕೆಯಲ್ಲಿ ಹಿನ್ನಡೆಯನ್ನು ಈ ತಾಲೂಕುಗಳು ಅನುಭವಿಸುತ್ತಿವೆ. ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಮತ್ತಷ್ಟು ತಾಲೂಕು ಸೇರಿವೆ. ಆದಕಾರಣ ನಂಜುಂಡಪ್ಪ ವರದಿ ಅನುಷ್ಠಾನ ಹಾಗೂ ಅದರ ಫಲಶ್ರುತಿ ಅಧ್ಯಯನ ಮಾಡಲು ನುರಿತ ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲಿ ಹೈಪವರ್ (ಉನ್ನತಾಧಿಕಾರಿ ಸಮಿತಿ) ಕಮಿಟಿ ರಚಿಸಲಾಗುವುದು. ಈ ಕಮಿಟಿಗೆ 6 ತಿಂಗಳ ಕಾಲದ ಗಡುವು ನೀಡಿ ಕಾಲಮಿತಿಯಲ್ಲೇ ವರದಿ ಪಡೆಯಲಾಗುವುದು ಎಂದು ಘೋಷಿಸಿದರು.2. ಸಹಕಾರಿ ಬ್ಯಾಂಕ್ ಅಸಲು ಕಟ್ಟಿದರೆ ಬಡ್ಡಿ ಮನ್ನಾ: ರಾಜ್ಯದ ಸಹಕಾರಿ ಬ್ಯಾಂಕ್‌ಗಳಲ್ಲಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದು. ಎಷ್ಟು ಜನ ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಸದ್ಯ ಇಲ್ಲ. ಆದರೆ ಎಷ್ಟೇ ಜನ ಸಾಲ ಪಡೆದಿದ್ದರೂ ಯಾರು ಅಸಲು ಕಟ್ಟುತ್ತಾರೋ ಅವರ ಬಡ್ಡಿಯನ್ನು ಮನ್ನಾ ಮಾಡುತ್ತೇವೆ. ಅದು ಎಷ್ಟು ಬೇಕಾದರೂ ಆಗಲಿ ಎಂದು ಭರವಸೆ ನೀಡಿದರು.3.ಬೆಳಗಾವಿ ಸಮೀಪ 2000 ಎಕರೆ ಹೊಸ ಕೈಗಾರಿಕಾ ಪ್ರದೇಶ:ಉತ್ತರ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಉತ್ತೇಜನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಬೆಳಗಾವಿ ಸಮೀಪ 2000 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗುವುದು. 500 ಎಕರೆ ಪ್ರದೇಶದಲ್ಲಿ ಫೌಂಡ್ರಿ ಕ್ಲಸ್ಟರ್ ಸ್ಥಾಪಿಸಲಾಗುವುದು. ಜತೆಗೆ ಬೆಳಗಾವಿಯಲ್ಲಿ ಏರೋಸ್ಪೇಸ್ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಘೋಷಿಸಿದರು.
4. ಧಾರವಾಡ ಸಮೀಪ 3000 ಎಕರೆ ಕೈಗಾರಿಕಾ ಪ್ರದೇಶ: ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲಾಗುತ್ತಿದೆ. ಈಗಾಗಲೇ 19 ಘಟಕಗಳು 1255 ಕೋಟಿ ರು. ಬಂಡವಾಳ ಹೂಡಿಕೆ ಮಾಡುತ್ತಿವೆ. ಸುಮಾರು 2450 ಜನರಿಗೆ ಉದ್ಯೋಗ ದೊರೆಯಲಿದೆ. ಇನ್ನಷ್ಟು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಧಾರವಾಡದ ಸಮೀಪ 3000 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.5.ರಾಯಚೂರಲ್ಲಿ ಹತ್ತಿ ಆಧಾರಿತ ಕೈಗಾರಿಕೆರಾಯಚೂರು ಜಿಲ್ಲೆಯಲ್ಲಿ ಹತ್ತಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದ ಕಾರಣ ಇಲ್ಲಿ ಹತ್ತಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಇದರಿಂದ ಆರ್ಥಿಕ ಅಭಿವೃದ್ಧಿಯೂ ಆಗುತ್ತದೆ. ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶವೂ ದೊರೆಯುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.6.ವಿಜಯಪುರದಲ್ಲಿ ಉತ್ಪಾದನಾ ಕ್ಲಸ್ಟರ್
ವಿಜಯಪುರದಲ್ಲಿ 1500 ಎಕರೆ ಪ್ರದೇಶದಲ್ಲಿ ಉತ್ಪಾದನಾ ಕ್ಲಸ್ಟರ್ ಸ್ಥಾಪಿಸಲಾಗುವುದು ಎಂದು ಹೇಳಿದರು.7.ಪ್ರವಾಸೋದ್ಯಮಕ್ಕೆ ಕ್ರಿಯಾಯೋಜನೆ: ಉತ್ತರ ಕರ್ನಾಟಕವೂ ಸಮೃದ್ಧ ಪ್ರವಾಸೋದ್ಯಮ ತಾಣಗಳನ್ನು ಹೊಂದಿದೆ. ಅಂತಾರಾಷ್ಟ್ರೀಯ ಮಹತ್ವವನ್ನು ಪಡೆದಿವೆ. ಆದಕಾರಣ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಮಗ್ರ ಕ್ರಿಯಾಯೋಜನೆ ರೂಪಿಸಲಾಗುವುದು. ಇದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತದೆ. ಜತೆಗೆ ಪ್ರವಾಸೋದ್ಯಮದಲ್ಲಿ ಅನುಭವಿಸುತ್ತಿರುವ ಹಿನ್ನಡೆಯನ್ನು ಸರಿದೂಗಿಸಬಹುದಾಗಿದೆ ಎಂದರು.
8.ವಾಲ್ಮಿ ಉನ್ನತೀಕರಣಧಾರವಾಡದಲ್ಲಿ ವಾಲ್ಮಿ (ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ)ಯನ್ನು ಉನ್ನತೀಕರಿಸಲಾಗುವುದು. ಇದನ್ನು centre of excellence ಎಂದು ಬದಲಿಸಲಾಗುವುದು. ಬರೀ ಜಲ ಶಿಕ್ಷಣ ನೀಡುವುದಷ್ಟೇ ಅಲ್ಲ. ಉತ್ತರ ಕರ್ನಾಟಕದ ಮಣ್ಣಿನ ಸವಳು- ಜವಳು ಸಮಸ್ಯೆ ನಿರ್ವಹಿಸುವಂತೆ ಉನ್ನತೀಕರಿಸಲಾಗುವುದು. ಜತೆಗೆ ರೈತರ ಆದಾಯ ಹೆಚ್ಚಳದ ಕಡೆಗೆ ಒತ್ತು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಬೇಕಾದಷ್ಟು ಅನುದಾನ -ಸಿಎಂ ಭರವಸೆ:ಈ ನಡುವೆ ಪ್ರತಿಪಕ್ಷದ ನಾಯಕ ಅಶೋಕ್ ಸೇರಿದಂತೆ ಸದಸ್ಯರೆಲ್ಲರೂ ಸರ್ಕಾರ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಬರ ಇರುವ ಹಿನ್ನೆಲೆಯಲ್ಲಿ 2 ಲಕ್ಷ ರು.ವರೆಗಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕಿತ್ತು. ಜತೆಗೆ ಈಗ ಘೋಷಿಸಿರುವುದಕ್ಕೆ ಅನುದಾನ ಎಷ್ಟು ಎಂಬುದನ್ನು ತಿಳಿಸಿಲ್ಲ ಎಂದು ಟೀಕಿಸಿದರು. ಅದಕ್ಕೆ ಸಿದ್ದರಾಮಯ್ಯ, ಯಾವುದಕ್ಕೆ ಎಷ್ಟು ಅನುದಾನ ಬೇಕಾಗುತ್ತದೆಯೋ ಅದನ್ನು ಪೂರಕ ಅಂದಾಜಿನಲ್ಲಿ ಸರ್ಕಾರ ಒದಗಿಸಲಿದೆ. ಒಂದು ವೇಳೆ ಕಡಿಮೆ ಬಿದ್ದರೆ ಬಜೆಟ್‌ನಲ್ಲಿ ಮೀಸಲಿರಿಸಲಾಗುವುದು ಎಂದರು. ಬಳಿಕ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ. ಆದಕಾರಣ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಆದರೆ ಎಸ್.ಟಿ.ಸೋಮಶೇಖರ್ ಮಾತ್ರ ಪ್ರತಿಪಕ್ಷದ ಸದಸ್ಯರೊಂದಿಗೆ ಸಭಾತ್ಯಾಗ ಮಾಡದೇ ಅಲ್ಲಿಯೇ ಉಳಿದರು.----
8 ಘೋಷಣೆಗಳು
1.ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ.ಡಿ.ಎಂ.ನಂಜುಂಡಪ್ಪ ನೀಡಿರುವ ವರದಿಯ ಫಲಶ್ರುತಿ ಅಧ್ಯಯನಕ್ಕೆ ಹೈಪವರ್ ಕಮಿಟಿ ರಚನೆ2. ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಸಾಲದ ಸಂಪೂರ್ಣ ಅಸಲು ಪಾವತಿ ಮಾಡಿದರೆ ಮೇಲಿನ ಬಡ್ಡಿ ಮನ್ನಾ
3. ಬೆಳಗಾವಿ ಸಮೀಪ 2 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣ. 500 ಎಕರೆ ಪ್ರದೇಶದಲ್ಲಿ ಫೌಂಡ್ರಿ ಕ್ಲಸ್ಟರ್ ಸ್ಥಾಪನೆ4. ಧಾರವಾಡದ ಸಮೀಪ 3 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣ5. ರಾಯಚೂರಲ್ಲಿ ಹತ್ತಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಒತ್ತು
6. ವಿಜಯಪುರದಲ್ಲಿ 1500 ಎಕರೆ ಪ್ರದೇಶದಲ್ಲಿ ಉತ್ಪಾದನಾ ಕ್ಲಸ್ಟರ್ ಸ್ಥಾಪನೆ7. ಉತ್ತರ ಕರ್ನಾಟಕದ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ
8. ಧಾರವಾಡದಲ್ಲಿನ ವಾಲ್ಮೀ (ಜಲ, ನೆಲ ನಿರ್ವಹಣೆ ಸಂಸ್ಥೆ) ಉನ್ನತೀಕರಣ