ಸಿಎನ್‌ಸಿ 29ನೇ ವರ್ಷದ ‘ಕೈಲ್ ಪೊಳ್ದ್’ ಆಚರಣೆ

| Published : Sep 02 2024, 02:02 AM IST

ಸಾರಾಂಶ

29ನೇ ವರ್ಷದ ಕೈಲ್‌ ಪೊಳ್ದ್‌ ಹಬ್ಬ ಆಚರಣೆ ನಡೆಯಿತು. ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವರ ಪರವಾಗಿ ನಡೆಸುತ್ತಿರುವ ಹೋರಾಟದ ಕುರಿತು ದೇಶದ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲು ನ.1ರಂದು ದೆಹಲಿ ಚಲೋ ರ‍್ಯಾಲಿ ನಡೆಸಲು ನಿರ್ಧರಿಸಿರುವುದಾಗಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ 29ನೇ ವರ್ಷದ ಸಾರ್ವತ್ರಿಕ ‘ಕೈಲ್ ಪೊಳ್ದ್’ ಹಬ್ಬ ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡವ ಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸುವ 34ನೇ ವರ್ಷದ ‘ಕೊಡವ ನ್ಯಾಷನಲ್ ಡೇ’ ಕಾರ್ಯಕ್ರಮವನ್ನು ನ.26 ರಂದು ಕ್ಯಾಪಿಟಲ್ ವಿಲೇಜ್‌ನಲ್ಲಿ ಆಚರಿಸಲಾಗುವುದು ಎಂದು ಘೋಷಿಸಿದರು.

ಕೊಡವ ಕುಲದ ಉದ್ಭವ, ವಿಕಾಸ ಮತ್ತು ಕೊಡವ ತಾಯಿನೆಲದ ಸೃಷ್ಟಿ ಈ ಮಣ್ಣಿನಲ್ಲಿ ಆರ್ವಿಭವಿಸಿದೆ. ಯುದ್ಧ ಮತ್ತು ಬೇಟೆಯ ಕೌಶಲ್ಯಗಳು ಬುಡಕಟ್ಟು ಜನಾಂಗದ ಕೊಡವರಲ್ಲಿ ಹುಟ್ಟಿನಿಂದಲೂ ಅಂತರ್ಗತವಾಗಿದೆ. ಶಸ್ತ್ರಾಸ್ತ್ರಗಳನ್ನು ಹೊಂದುವುದು ಯೋಧ ಪರಂಪರೆಯ ಕೊಡವರ ಶಾಶ್ವತ ಹಕ್ಕಾಗಿದೆ. ಕೊಡವವರಲ್ಲಿ ಯೋಧ ಪ್ರವೃತ್ತಿ ಅನುವಂಶಿಕವಾಗಿ ಬಂದಿದ್ದು, ಅದನ್ನು ಜತನದಿಂದ ಕಾಯ್ದುಕೊಳ್ಳುತ್ತಾ ಬರಲಾಗಿದೆ. ತೋಕ್/ಬಂದೂಕು ಮತ್ತು ಭೂಮಿಯೊಂದಿಗೆ ಕೊಡವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗವು ಶಾಸನಬದ್ಧ ರಕ್ಷಣೆ ಪಡೆಯಬೇಕು. ಇದಕ್ಕಾಗಿ ‘ಕೈಲ್ ಪೊಳ್ದ್’ ಹಬ್ಬ ಆಚರಣೆಯ ಈ ಶುಭ ಸಂದರ್ಭದಲ್ಲಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಸೇರಿದಂತೆ ರಾಜ್ಯಾಂಗದತ್ತ ನಿರ್ಣಯಗಳನ್ನು ಮಂಡಿಸುತ್ತಿರುವುದಾಗಿ ಹೇಳಿದರು.

ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಿರುವ ವಿಶೇಷ ರಾಜಕೀಯ ಪ್ರಾತಿನಿಧ್ಯವಾದ ‘ಸಂಘ’ ಅಮೂರ್ತ ಮತ ಕ್ಷೇತ್ರದಂತೆ ಕೊಡವ ಜನಾಂಗಕ್ಕೆ ಪ್ರತ್ಯೇಕವಾಗಿ ಒಂದು ಅಮೂರ್ತ/ಅದೃಶ್ಯ ಕೊಡವ ಸಂಸದೀಯ ಮತ್ತು ಅಸೆಂಬ್ಲಿ ಕ್ಷೇತ್ರವನ್ನು ಸ್ಥಾಪಿಸಿ, ಭಾರತದ ಪಾರ್ಲಿಮೆಂಟ್ ಸೆಂಟ್ರಲ್ ವಿಸ್ತಾ ಮತ್ತು ಕರ್ನಾಟಕದ ಶಾಸಕಾಂಗಗಳಲ್ಲಿ ಪ್ರತಿನಿಧಿಸಲು ಅವಕಾಶ ನೀಡಬೇಕು ಎಂದರು.

ಆದಿಮಸಂಜಾತ ಕೊಡವ ಬುಡಕಟ್ಟು ಜನರ ಹಬ್ಬಗಳಾದ ಎಡಮ್ಯಾರ್, ಕಕ್ಕಡ ಪದ್ನೆಟ್, ಕಾರೋಣ್ ಕೊಡ್ಪ ಆಚರಣೆ, ಕೈಲ್ ಪೌಳ್ದ್, ಕಾವೇರಿ ಚಂಗ್ರಾಂದಿ, ಪಾಥೋಲೋಧಿ ಮತ್ತು ಪುತ್ತರಿ, ಕೊಡವರ ಪವಿತ್ರ ರತ್ನಗಳಾದ ಕೊಡವ ತಾಯ್ನಾಡು, ಕೊಡವ ಭೂಪ್ರದೇಶ, ಜಲಸಂಪನ್ಮೂಲವಾದ ದೈವಿಕ ವಸಂತ ಕಾವೇರಿ, ಕೊಡವರ ಪವಿತ್ರ ಯಾತ್ರಾಕೇಂದ್ರ ತಲಕಾವೇರಿ, ಮಂದ್ ಗಳು, ಸಮಾಧಿಗಳು, ಯುದ್ಧ ಸ್ಮಾರಕಗಳು, ನರಮೇಧದ ಸ್ಮಾರಕಗಳು, ದೇವರಕಾಡುಗಳು, ಸಸ್ಯರಾಶಿ, ವನ್ಯಜೀವಿ, ಪರ್ವತಗಳು, ಜಲಪಾತಗಳು, ಕೊಡವರ ಸಾಂಪ್ರದಾಯಿಕ ಆಭರಣಗಳಾದ ಪೀಚೆಕತ್ತಿ, ವೇಷಭೂಷಣಗಳು, ಸಾಂಪ್ರದಾಯಿಕ ಪಾಕಪದ್ಧತಿ, ಕೊಡವ ಜಾನಪದ ಕಲೆ, ಕೊಡವ ಥಕ್, ವಿಶಿಷ್ಟ ಸಾಂಸ್ಕೃತಿಕ ಪರಂಪರೆ, ಸಮರ ಕಲೆ, ಯೋಧ ಪರಂಪರೆ, ಕೃಷಿ ಬದ್ಧತೆ ಮತ್ತಿತರ ಕೊಡವ ಪದ್ಧತಿಗಳನ್ನು ಸೂರ್ಯ ಚಂದ್ರರಿರುವವರೆಗೆ ಉಳಿಸಿಕೊಳ್ಳಲು ಸಿಎನ್‌ಸಿ ಸಭೆ ನಿರ್ಣಯ ಕೈಗೊಂಡಿತು.

ಕಲಿಯಂಡ ಮೀನಾ, ಬೊಪ್ಪಂಡ ಬೊಳ್ಳಮ್ಮ, ಪಟ್ಟಮಾಡ ಲಲಿತಾ, ಪುಲ್ಲೇರ ಸ್ವಾತಿ, ಅಪ್ಪಚ್ಚೀರ ರೀನಾ, ನಂದೇಟಿರ ಕವಿತಾ, ಚೋಳಪಂಡ ಜ್ಯೋತಿ, ಬೊಟ್ಟಂಗಡ ಸವಿತಾ, ಅರೆಯಡ ಸವಿತಾ, ಮಂದಪಂಡ ರಚನ, ನಂದಿನೆರವಂಡ ನಿಶಾ, ಪಾಲಂದಿರ ಲೀಲ, ನಂದಿನೆರವಂಡ ಬೀನಾ, ಅಜ್ಜಿನಿಕಂಡ ಇನಿತಾ, ಅಪ್ಪಾರಂಡ ವಿನ್ಸಿ, ನಂದಿನೆರವಂಡ ಸೋನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತೋಕ್ ಪೂವ್‌ನಿಂದ ಪೂಜೆ:

ಸಭಾ ಕಾರ್ಯಕ್ರಮಕ್ಕೂ ಮೊದಲು ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ‘ಕೈಲ್ ಪೊಳ್ದ್’ ಪ್ರಯುಕ್ತ ‘ತೋಕ್ ಪೂವ್’ನಿಂದ ಬಂದೂಕುಗಳನ್ನು ಸಿಂಗರಿಸಿ ಪ್ರಾರ್ಥಿಸಲಾಯಿತು. ಪೂಜ್ಯ ಸ್ಥಾನದಲ್ಲಿರುವ ಗುರುಕಾರೋಣರಿಗೆ ಮೀದಿ ಇಟ್ಟು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಕೋರಲಾಯಿತು. ಕೊಡವರು ಹಾಗೂ ಕೊಡವತಿಯರು ಶಸ್ತ್ರಾಸ್ತ್ರಗಳ ಸಾಮೂಹಿಕ ಆರಾಧನೆಯಲ್ಲಿ ಬಂದೂಕು ಮತ್ತು ಒಡಿಕತ್ತಿಯೊಂದಿಗೆ ಪಾಲ್ಗೊಂಡರು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕೋವಿಯ ಹಕ್ಕನ್ನು ಪ್ರತಿಪಾದಿಸಿದರು.

ಹಬ್ಬದ ಪ್ರಯುಕ್ತ ನಡೆದ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ರುಚಿಕರವಾದ ‘ಕೈಲ್ ಪೊಳ್ದ್’ ಖಾದ್ಯ ಸಹಿತ ಊಟದೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಳ್ಳಲಾಯಿತು.