ಸಾರಾಂಶ
ಸತತ ಬರಗಾಲ ಪೀಡಿತ ಮತ್ತು ಬಯಲು ಪ್ರದೇಶದ ರೈತರ ಜೀವನ ಉಳಿಸುವ ಕಲ್ಪವೃಕ್ಷಗಳಿಗೂ ಗರಿರೋಗ ಮತ್ತು ಕಪ್ಪು ತಲೆಹುಳು ರೋಗ ಹೆಚ್ಚಾಗುವ ಮೂಲಕ ಇಳುವರಿ ಕುಸಿದು ತಾಲೂಕಿನ ಜನ ಕಂಗಾಲಾಗಿದ್ದಾರೆ.
ಬಯಲು ಪ್ರದೇಶಗಳಲ್ಲಿ ರೈತರ ಕೈ ಹಿಡಿಯುತ್ತಿದ್ದ ತೆಂಗಿಗೆ ರೋಗ ಬಾಧೆಯಿಂದ ಇಳುವರಿ ಕ್ಷೀಣ
ಕಡೂರು ಕೃಷ್ಣಮೂರ್ತಿ.ಕನ್ನಡಪ್ರಭ ವಾರ್ತೆ, ಕಡೂರು
ಸತತ ಬರಗಾಲ ಪೀಡಿತ ಮತ್ತು ಬಯಲು ಪ್ರದೇಶದ ರೈತರ ಜೀವನ ಉಳಿಸುವ ಕಲ್ಪವೃಕ್ಷಗಳಿಗೂ ಗರಿರೋಗ ಮತ್ತು ಕಪ್ಪು ತಲೆಹುಳು ರೋಗ ಹೆಚ್ಚಾಗುವ ಮೂಲಕ ಇಳುವರಿ ಕುಸಿದು ತಾಲೂಕಿನ ಜನ ಕಂಗಾಲಾಗಿದ್ದಾರೆ. ಕಡೂರು ತಾಲೂಕು ಮತ್ತು ಪಕ್ಕದ ಅರಸೀಕೆರೆ, ತರೀಕೆರೆ ಸೇರಿದಂತೆ ಬಯಲು ಪ್ರದೇಶಗಳಲ್ಲಿ ಬರಗಾಲ ಮುಂದುವರಿದಿದ್ದರೂ ಕೂಡ ರೈತರನ್ನು ಕೈ ಹಿಡಿದು ನಡೆಸುತ್ತಿದ್ದ ತೆಂಗು ಬೆಳೆ ಇದೀಗ ಈ ರೋಗ ಬಾಧೆಯಿಂದ ಕೈ ಕೊಡುತ್ತಿದ್ದು ಇಳುವರಿ ಕ್ಷೀಣಿಸಿ ಇದನ್ನೆ ನಂಬಿದ್ದ ರೈತರಿಗೆ ಆತಂಕ ತಂದೊಡ್ಡಿದೆ. ನೀರಿಲ್ಲದೆಯೂ ಎರಡು ವರ್ಷ ಬದುಕುತ್ತದೆ ಎನ್ನುವ ತೆಂಗು ಬರಗಾಲದಲ್ಲೂ ಸಣ್ಣ ರೈತರಿಂದ ಹಿಡಿದು ಎಲ್ಲರನ್ನು ಕೈ ಹಿಡಿಯುತಿತ್ತು. ಆದರೆ ಕಳೆದ ಬಾರಿ ಮುಂಗಾರು-ಹಿಂಗಾರಿನಲ್ಲೂ ಮಳೆಯಾಗದೆ ಯಾವುದೇ ಬೆಳೆ ಕೈಗೆ ಬಾರದೆ ರೈತರು ಕೈ ಚೆಲ್ಲಿದರು. ತಾಲೂಕಿನಲ್ಲಿ 49,313 ಸಾವಿರ ಹೆಕ್ಟೇರ್ ನಲ್ಲಿ ತೆಂಗಿನ ಬೆಳೆ ಇದ್ದು ಆದರಲ್ಲಿ ಇಲಾಖೆ ಮೂಲಗಳ ಪ್ರಕಾರ ಸುಮಾರು 19000 ಹೆಕ್ಟೇರ್ ನಲ್ಲಿ ಗರಿರೋಗ, ಕಪ್ಪುತಲೆ ಹುಳದ ಕಾಟ ಹೆಚ್ಚಾಗಿದೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. 49,313ಹೆಕ್ಟೇರ್ ಪ್ರದೇಶದಲ್ಲಿರುವ ತೆಂಗಿನ ಬೆಳೆಯಲ್ಲಿ ಶೇ. 40ರಷ್ಟು ಕೊಬ್ಬರಿಗೆ, ಶೇ.40 ತೆಂಗಿನ ಕಾಯಿಗೆ ಮತ್ತು ಶೇ 20 ರಷ್ಟು ಎಳನೀರಿಗೆ ಬಳಕೆಯಾಗುತ್ತದೆ.ತೆಂಗಿನ ಕಾಂಡ ಕೊರಕ ರೋಗ, ಕಪ್ಪು ತಲೆಹುಳು, ಕೆಂಪುಮೂತಿ ಹುಳುಗಳ ಕಾಟದ ಜೊತೆ ಗರಿರೋಗ ಸೇರಿ ಸುಮಾರು.19,000 ಹೆಕ್ಟೇರ್ ನಲ್ಲಿ ರೋಗದ ಪ್ರಮಾಣ ಹೆಚ್ಚಿದೆ. ಕಡೂರು ತಾಲೂಕಿನ ಕಸಬಾ ಹೋಬಳಿ, ಸಿಂಗಟಗೆರೆ, ಯಗಟಿ, ಸಖರಾಯಪಟ್ಟಣ ಮತ್ತು ಬೀರೂರು ಹೋಬಳಿಗಳಲ್ಲಿ ರೋಗ ಬಾಧೆ ಹೆಚ್ಚಾಗಿದೆ. ಒಟ್ಟಾರೆ ಎನೇ ಮಾಡಿದರೂ ಕೂಡ ಮಳೆ ನೀರು ತೆಂಗಿಗೆ ಔಷಧಿ ಎಂಬಂತಾಗಿದ್ದು ಪ್ರಕೃತಿಯೇ ತೆಂಗಿಗೆ ಪರಿಹಾರವಾಗಿದ್ದು ರೈತನ ಕೈ ಹಿಡಿಯ ಬೇಕಾಗಿದೆ.
--- ಬಾಕ್ಸ್ ಸುದ್ದಿಗೆ----ರೈತರ ನೀರಾ ಚಳುವಳಿಗೆ 29 ವರ್ಷ1996 ರಲ್ಲಿ ಕಡೂರು ತಾಲೂಕು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ದಿಢೀರ್ ಎಂದು ಲಕ್ಷಾಂತರ ಎಕರೆಯಲ್ಲಿ ಕಾಣಿಸಿಕೊಂಡ ಕಪ್ಪು ತಲೆ ಹುಳು, ಗರಿರೋಗದಿಂದ ತೆಂಗಿನ ತೋಟಗಳು ಸುಟ್ಟಂತೆ ಆದಾಗ ರೈತ ಸಂಘಗಳು ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ ಎಂದು ಹೋರಾಟಕ್ಕೆಧುಮುಕಿದವು. ಜೊತೆಯಲ್ಲಿ ಸರ್ಕಾರ ತೆಂಗಿನ ಮರಗಳಿಂದ ನೀರಾ ಇಳಿಸುವುದನ್ನು ನಿಷೇಧಿಸಿದ್ದರೂ ರೈತರು ನೀರಾ ಇಳಿಸಿ ಮಾರಾಟ ನಡೆಸಿದರು. 28 ವರ್ಷಗಳ ಹಿಂದೆ ಸರ್ಕಾರದ ವಿರುದ್ದ ರೈತರು ದಂಗೆ ಎದ್ದು ತಮ್ಮಆಕ್ರೋಶವನ್ನು ನೀರಾ ಮಾರಾಟದ ಮೂಲಕ ತೋರಿಸಿದ್ದು ಹಿರಿಯ ರೈತರಲ್ಲಿ ಇಂದಿಗೂ ನೆನಪಾಗಿದೆ.-- ಬಾಕ್ಸ್ ಸುದ್ದಿ--ತೆಂಗಿಗೆ ಬೇಸಿಗೆಯಲ್ಲಿ ರೋಗ ಹೆಚ್ಚು ಮಳೆಗಾಲದಲ್ಲಿ ಕಡಿಮೆ. ಉಷ್ಣಾಂಶ ಕೂಡ ಈ ಬಾರಿ ಇನ್ನಷ್ಟು ಹೆಚ್ಚಾಗಿದೆ. ರೈತರು ನೀರು ಕೊಟ್ಟು ತೇವಾಂಶ ಕಾಪಾಡಿದರೆ ರೋಗ ಸುಧಾರಿಸುತ್ತದೆ. ಸಾವಯವ ಅಂಶ ಕಡಿಮೆ. ಹಸಿರೆಲೆ ಗೊಬ್ಬರ, ಬೇವಿನ ಹಿಂಡಿ ನೀಡಬೇಕು. ರೈತರು ಇವೆಲ್ಲ ಕ್ರಮವನ್ನು ಸಾಮೂಹಿಕವಾಗಿ ಮಾಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ತೋಟಗಾರಿಕೆ ಇಲಾಖೆಯಿಂದ ಕುರುಬರಹಳ್ಳಿ, ಆಲಘಟ್ಟ, ಜೀಗಣೇಹಳ್ಳಿ ಮತ್ತಿತರೆ ಗ್ರಾಮಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಿ ರೋಗಭಾಧೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿ, ಉಚಿತವಾಗಿ ರೈತರಿಗೆ ಹೊಸ ತೆಂಗಿನ ಸಸಿಗಳು, ಬೇವಿನ ಹಿಂಡಿ, ಹಸಿರೆಲೆ ಗೊಬ್ಬರ ನೀಡಲಾಗಿದೆ.ಸಿಂಗಟಗೆರೆ ಹೋಬಳಿಯಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ತೆಂಗು ರಕ್ಷಣೆ ಕಾರ್ಯಕ್ರಮ ಮಾಡಲಾಗುವುದು. ಕಪ್ಪುತಲೆ ಹುಳ ನಿಯಂತ್ರಿಸುವ ಪರೋಪ ಜೀವಿ ಗೋನಿಯಾಸ್ ನ್ನು ರೈತರಿಗೆ ಉಚಿತವಾಗಿ ನೀಡಲು ವಿಚಾರಣೆ ಮಾಡಲಾಗುತ್ತಿದೆ. ರೈತರು ಹಸಿರು ಗೊಬ್ಬರ ಹಾಕಿದಲ್ಲಿ ತೇವಾಂಶ ಹಿಡಿದಿಟ್ಟು ರೋಗ ನಿಯಂತ್ರಣ ಸಾಧ್ಯ. ರೈತರು ಇಲಾಖೆ ಕೊಡುವ ಮಾರ್ಗದರ್ಶನ ಪಾಲಿಸುವ ಜೊತೆ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದು.ಎಚ್. ಕೆ. ಜಯದೇವ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಕಡೂರು.
ಫೋಟೋ 30ಕೆಕೆಡಿಯು1, 1ಎ.