ಅಡಕೆ ಬೆಳೆಯನ್ನು ಕಾಡುವ ರೋಗ - ಪರ್ಯಾಯವಾಗಿ ಸರ್ಕಾರದಿಂದಲೇ ಪ್ರಾಯೋಗಿಕ ಬೆಳೆಗೆ ಚಿಂತನೆ

| N/A | Published : Feb 18 2025, 12:34 AM IST / Updated: Feb 18 2025, 12:01 PM IST

ಅಡಕೆ ಬೆಳೆಯನ್ನು ಕಾಡುವ ರೋಗ - ಪರ್ಯಾಯವಾಗಿ ಸರ್ಕಾರದಿಂದಲೇ ಪ್ರಾಯೋಗಿಕ ಬೆಳೆಗೆ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಡಕೆ ಬೆಳೆಯನ್ನು ಕಾಡುವ  ರೋಗ  ಮೊದಲಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ ಪರ್ಯಾಯ ಬೆಳೆಯಾಗಿ ಕಾಫಿಯನ್ನು ಬೆಳೆಸುವ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಜತೆಗೆ ತೋಟಗಾರಿಕಾ ಇಲಾಖೆಯಿಂದ ಪ್ರಾಯೋಗಿಕವಾಗಿ ಕಾಫಿಯನ್ನು ಬೆಳೆಸುವಂತೆ   ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದ್ದಾರೆ.

 ಮಂಗಳೂರು : ಅಡಕೆ ಬೆಳೆಯನ್ನು ಕಾಡುವ ಕೊಳೆ ರೋಗ, ಹಳದಿ ರೋಗ, ಎಲೆಚುಕ್ಕಿ ರೋಗ ಮೊದಲಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ ಪರ್ಯಾಯ ಬೆಳೆಯಾಗಿ ಕಾಫಿಯನ್ನು ಬೆಳೆಸುವ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಜತೆಗೆ ತೋಟಗಾರಿಕಾ ಇಲಾಖೆಯಿಂದ ಪ್ರಾಯೋಗಿಕವಾಗಿ ಕಾಫಿಯನ್ನು ಬೆಳೆಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಕೆಡಿಪಿ ತ್ರೈಮಾಸಿಕ ಮುಂದುವರಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಭರತ್‌ ಮುಂಡೋಡಿ ಅವರು ಅಡಕೆ ಬೆಳೆಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. ಅಡಕೆ ಬೆಳೆಯನ್ನು ಕಾಡುವ ರೋಗಗಳ ಬಗ್ಗೆ ಕಳೆದ 30 ವರ್ಷಗಳಿಂದ ಚರ್ಚೆಯಾಗುತ್ತಿದ್ದರೂ ಯಾವುದೇ ಸಂಶೋಧನೆ ನಡೆದು ಪರಿಹಾರ ಕಾಣುತ್ತಿಲ್ಲ ಎಂದರು.

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್‌ ಉತ್ತರಿಸಿ, ಮಡಿಕೇರಿ, ಚಿಕ್ಕಮಗಳೂರು ಮಾತ್ರವಲ್ಲದೆ, ದ.ಕ. ಜಿಲ್ಲೆಯಲ್ಲಿಯೂ ಅಡಕೆಗೆ ಪರ್ಯಾಯವಾಗಿ ಕಾಫಿ ಬೆಳೆಯಲು ಪ್ರದೇಶ ವಿಸ್ತರಣೆಯಡಿ ಅನುದಾನ ನೀಡುವ ಬೇಡಿಕೆ ವ್ಯಕ್ತವಾಗಿದೆ. ದ.ಕ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗದಲ್ಲಿ ಕಾಫಿ ಬೆಳೆಯಲು ರೈತರು ಆಸಕ್ತಿ ತೋರಿದ್ದಾರೆ. ಕಾಫಿ ಮಂಡಳಿಯೂ ಈ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದರು.

ಈ ಸಂದರ್ಭ ಶಾಸಕಿ ಭಾಗೀರಥಿ ಮುರಳ್ಯ ಪ್ರತಿಕ್ರಿಯಿಸಿ, ಪ್ರಾಯೋಗಿಕವಾಗಿ ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ ಕಾಫಿ ಬೆಳೆ ಸಾಧುವೇ ಎಂಬುದನ್ನು ಬೆಳೆದು ನೋಡುವುದು ಸೂಕ್ತ. ಜತೆಗೆ ಬೆಂಬಲವನ್ನೂ ಕೃಷಿಕರಿಗೆ ಒದಗಿಸಬೇಕು ಎಂದಾಗ ಉಸ್ತುವಾರಿ ಸಚಿವರು ಸಹಮತ ವ್ಯಕ್ತಪಡಿಸಿದರು.

ನದಿ ನೀರು ಅಧ್ಯಯನ:

ರೈತರು ತಮ್ಮ ಬೆಳೆಗಳಿಗೆ ಅಧಿಕ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸುತ್ತಿರುವುದರಿಂದ ಮಣ್ಣಿನ ಮೂಲಕ ಅಲ್ಯುಮಿನಿಯಂ ಅಂಶ ನದಿಗಳಿಗೆ ಸೇರ್ಪಡೆಯಾಗುತ್ತಿದೆ. ಈಗಾಗಲೇ ತುಂಗಾ ನದಿಯ ಅಧ್ಯಯನ ಸಂದರ್ಭ ಈ ವಿಷಯ ಪತ್ತೆಯಾಗಿದೆ. ಹಾಗಾಗಿ ರಸಗೊಬ್ಬರ ಬಳಕೆಗೆ ಸಂಬಂಧಿಸಿ ರೈತರ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸುವ ಅಗತ್ಯವಿದೆ ಎಂದು ವಿಧಾನ ಪರಿಷತ್‌ ಸದಸ್ಯಡಾ. ಧನಂಜಯ ಸರ್ಜಿ ಗಮನ ಸೆಳೆದರು.

ಕೃಷಿಭೂಮಿ ಮುಳುಗಡೆ: ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ನಿರ್ಮಿಸಲಾದ ಡ್ಯಾಂನಲ್ಲಿ 5.5 ಮೀಟರ್‌ ಬದಲಿಗೆ ಈ ಬಾರಿ 4.5 ಮೀಟರ್‌ಗೆ ನೀರು ನಿಲ್ಲಿಸಲಾಗಿದೆ. ಇದರಲ್ಲೇ ಬಂಟ್ವಾಳದ ಹಲವು ಎಕರೆ ಕೃಷಿಭೂಮಿ ಜಲಾವೃತವಾಗಿದೆ ಎಂದು ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿ ಗಮನ ಸೆಳೆದರು. ಈ ಕುರಿತು ಕೃಷಿ ಅಧಿಕಾರಿಗಳಿಗೂ ಯಾವುದೇ ಮಾಹಿತಿ ಇಲ್ಲದ ಕಾರಣ ಸ್ಥಳಕ್ಕೆ ಭೇಟಿ ನೀಡುವಂತೆ ಹಾಗೂ ಎರಡು ದಿನದೊಳಗೆ ವರದಿ ನೀಡುವಂತೆ ಸಚಿವರು ಸೂಚಿಸಿದರು.

ಎಲ್ಲೆಲ್ಲಿ ಕೃಷಿ ಭೂಮಿಗೆ ನೀರು ನುಗ್ಗುತ್ತದೆಯೋ ಆ ಭಾಗಗಳಲ್ಲಿ ರಿಟೇನಿಂಗ್‌ ವಾಲ್‌ ನಿರ್ಮಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾತನಾಡಿ, ಸಮೀಕ್ಷೆ ನಡೆಸಿ ಡ್ಯಾಂ ನಿರ್ಮಿಸಿದಾಗ ನೀರು ಕೃಷಿಭೂಮಿಗೆ ನುಗ್ಗಿದರೆ ನೀರಾವರಿ ಇಲಾಖೆಯಿಂದಲೇ ಸೂಕ್ತ ಪರಿಹಾರ ಒದಗಿಸಬೇಕಾಗುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌, ಜಿಪಂ ಸಿಇಒ ಡಾ. ಆನಂದ್‌, ಎಸ್ಪಿ ಯತೀಶ್‌ ಎನ್‌., ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಇದ್ದರು.

ಅಕ್ರಮ ಮರಳುಗಾರಿಕೆ: ಮುಗಿಯದ ಸಮಸ್ಯೆ

ದ.ಕ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಸೇರಿದಂತೆ ಮರಳುಗಾರಿಕೆ ಸಮಸ್ಯೆ ನಿವಾರಿಸುವ ಬಗ್ಗೆ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತಾದರೂ ಕೊನೆಗೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಪ್ರಸ್ತಾಪಿಸಿ, ಅವ್ಯಾಹತ ಮರಳುಗಾರಿಕೆಯಿಂದ ಸೇತುವೆಗಳ ಕಂಬವೇ ಹಾನಿಗೀಡಾಗುವಂತೆ ಆಗಿದೆ. ಪೊಲೀಸರಿಗೆ ಮಾಹಿತಿ ಇದ್ದೇ ಮರಳುಗಾರಿಕೆ ನಡೆಯುತ್ತಿದೆ. ಇದು ಹಗಲು ದರೋಡೆ ಆಗಿದೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಇದೊಂದು ಮುಗಿಯದ ಸಮಸ್ಯೆಯಾಗಿದ್ದು, ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ಸಿಆರ್‌ಝಡ್‌ ಅಧಿಕಾರಿ ಮಾತನಾಡಿ, ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶ ಕೋರಿ ಕೇಂದ್ರ ಇಲಾಖೆಗೆ ಕಳುಹಿಸಲಾಗಿದೆ. ಅಲ್ಲಿಂದ ಅನುಮತಿ ಲಭಿಸಬೇಕಾಗಿದೆ ಎಂದರು. ಮಧ್ಯಪ್ರವೇಶಿಸಿದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ, ಬೇರೆ ರಾಜ್ಯಗಳಲ್ಲಿ ಸಿಆರ್‌ಝಡ್‌ನಲ್ಲಿ ಮರಳುಗಾರಿಕೆಗೆ ಅನುಮತಿಸಲಾಗಿದೆ. ಇಲ್ಲಿಗೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ಉತ್ತರಿಸಿದರು.

ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಸ್ಪಷ್ಟ ಉತ್ತರ ನೀಡಿದ ಇಲಾಖೆ ಅಧಿಕಾರಿಯನ್ನು ಉಸ್ತುವಾರಿ ಸಚಿವರು ತರಾಟೆಗೆ ಗುರಿಪಡಿಸಿದ ವಿದ್ಯಮಾನ ನಡೆಯಿತು.