ಸಾರಾಂಶ
ಕರಾವಳಿಯಲ್ಲಿ ಪ್ರಬಲವಾಗಿರುವ ಹಿಂದು ಸಂಘಟನೆ ಒಡೆಯಲು ಕಮ್ಯುನಿಸ್ಟ್ ವಿಚಾರಧಾರೆ ಹೆಸರಿನಲ್ಲಿ ಮಾಫಿಯಾಗಳು ಷಡ್ಯಂತರ ನಡೆಸುತ್ತಿವೆ. ಇಂತಹ ಕುಕೃತ್ಯಗಳನ್ನು ಮುಂದುವರಿಸಿದ್ದೇ ಆದಲ್ಲಿ ಹಿಂದು ಸಂಘಟನೆಗಳು ಕೂಡ ರಾಜ್ಯವ್ಯಾಪಿ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ
ಮಂಗಳೂರು : ಕರಾವಳಿಯಲ್ಲಿ ಪ್ರಬಲವಾಗಿರುವ ಹಿಂದು ಸಂಘಟನೆ ಒಡೆಯಲು ಕಮ್ಯುನಿಸ್ಟ್ ವಿಚಾರಧಾರೆ ಹೆಸರಿನಲ್ಲಿ ಮಾಫಿಯಾಗಳು ಷಡ್ಯಂತರ ನಡೆಸುತ್ತಿವೆ. ಅದರ ಭಾಗವೇ ಖಾಸಗಿ ಕಾರ್ಯಕ್ರಮದಲ್ಲಿ ಹಿಂದು ಸಂಘಟನೆ ಬಗ್ಗೆ ಮಾತನಾಡಿದ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಮೇಲೆ ಮಾಡಿರುವ ಆರೋಪ. ಇಂತಹ ಕುಕೃತ್ಯಗಳನ್ನು ಮುಂದುವರಿಸಿದ್ದೇ ಆದಲ್ಲಿ ಹಿಂದು ಸಂಘಟನೆಗಳು ಕೂಡ ರಾಜ್ಯವ್ಯಾಪಿ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹಿಂದು ಜಾಗರಣಾ ವೇದಿಕೆ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಅರುಣ್ ಉಳ್ಳಾಲ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಮಾಡಿದ ಭಾಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಕಮ್ಯುನಿಸ್ಟ್ ಪ್ರೇರಿತ ಗುಂಪುಗಳು ವೈರಲ್ ಮಾಡಿರುವುದು ನೆಪಕ್ಕೆ ಮಾತ್ರ. ವಾಸ್ತವದಲ್ಲಿ ಈ ಗುಂಪುಗಳಿಗೆ ಡಾ.ಅರುಣ್ ಉಳ್ಳಾಲ್ ನಡೆಸುತ್ತಿರುವ ಧರ್ಮ ಶಿಕ್ಷಣ ಅಭಿಯಾನವನ್ನು ಸಹಿಸಲು ಆಗುತ್ತಿಲ್ಲ. ಅವರು ಸೇರಿದಂತೆ ಹಿಂದು ಸಮಾಜದ ಉದ್ಧಾರಕ್ಕೆ ಕಾರ್ಯ ನಿರ್ವಹಿಸುತ್ತಿರುವವರನ್ನು ಮಟ್ಟಹಾಕುವುದುದೇ ಕಮ್ಯುನಿಸ್ಟ್ ಪ್ರೇರಿತರ ಹಿಡನ್ ಅಜೆಂಡಾ ಆಗಿದೆ ಎಂದು ಆರೋಪಿಸಿದರು.
ಕೇಸ್ ವಾಪಸ್ ಪಡೆಯಲಿ:
ಡಾ.ಅರುಣ್ ಉಳ್ಳಾಲ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಕ್ಕೆ ಪೊಲೀಸರು ಸ್ವಯಂ ಆಗಿ ಕೇಸು ದಾಖಲಿಸಿದ್ದಾರೆ. ಹಾಗಿರುವಾಗ ಹಿಂದು ಸಂಪ್ರದಾಯ, ನಡವಳಿಕೆಗಳ ಬಗ್ಗೆ ಡಾ.ಅರುಣ್ ಉಳ್ಳಾಲ್ ಮಾತನಾಡಿದ್ದನ್ನೇ ಅಪರಾಧ ಎಂದು ಕೇಸು ದಾಖಲಿಸಿರುವ ಪೊಲೀಸರೇ ಸ್ವಯಂ ಆಗಿ ಕೇಸ್ ವಾಪಸ್ ಪಡೆಯಬೇಕು ಎಂದು ಶ್ರೀಕಾಂತ್ ಶೆಟ್ಟಿ ಕಾರ್ಕಳ ಆಗ್ರಹಿಸಿದರು.
ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಬಂಟ್ವಾಳ್, ನಗರ ಸಂಯೋಜಕ ನಿಖಿತ್, ಗ್ರಾಮಾಂತರ ಸಂಯೋಜಕ ನರಸಿಂಹ ಮಾಣಿ ಇದ್ದರು.