ಸರ್ಕಾರಿ ಶಾಲೆಗಳ ಉಳಿವಿಗೆ ಸಮುದಾಯದ ಸಹಭಾಗಿತ್ವ ಅಗತ್ಯ: ಘಾಟೆ

| Published : Feb 13 2024, 12:47 AM IST

ಸಾರಾಂಶ

ಔರಾದ್ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಔರಾದ್

ಸರ್ಕಾರಿ ಶಾಲೆಗಳು ಸಮಾಜದಲ್ಲಿ ಸದೃಢವಾಗಿ ಬೆಳೆದು ಮಾದರಿಯಾಗಿ ನಿಲ್ಲಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ಕಮಲನಗರ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.

ತಾಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಈ ಬಗ್ಗೆ ಪೋಷಕರು ಗಮನ ಹರಿಸಬೇಕು. ಎಕಲಾರ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯವೈಖರಿ ಅನುಕರಣೀಯ ಮತ್ತು ಆದರ್ಶಪ್ರಾಯವಾಗಿದೆ. ಇದರಿಂದ ಶಾಲೆಯ ಹೆಸರು ಜಿಲ್ಲೆ ಅಲ್ಲದೇ ರಾಜ್ಯದಲ್ಲಿ ಗುರುತಿಸುವಂತಾಗಿದೆ ಇದು ಎಕಲಾರ ಗ್ರಾಮಕ್ಕೆ, ಪೋಷಕರಿಗೆ ಅಭಿಮಾನದ ವಿಷಯ ಎಂದರು.

ಜಿಲ್ಲೆಗೆ ಮಾದರಿ ಪ್ರಾಥಮಿಕ ಶಾಲೆ:

ಡಯಟ ಉಪನ್ಯಾಸಕ ಲಕ್ಷ್ಮಣ ತುರೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಖಾಸಗಿ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಮೇಲೆ ವ್ಯಾಮೋಹ ಹೆಚ್ಚಾಗಿದ್ದು ಇದರಿಂದ ಮಕ್ಕಳಿಗೆ ಅಂಕ ಪಡೆಯುವ ಯಂತ್ರಗಳಾಗಿ ಮಾಡುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಮೌಲ್ಯ ಕಲಿಸಿ ಕೊಡುವ ಕೆಲಸ ಶಿಕ್ಷಕ ಮತ್ತು ಪೋಷಕರಿಂದ ಆಗಬೇಕು. ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಬೆಳೆಸಬೇಕಾಗಿದ್ದು, ಈ ನಿಟ್ಟಿನಲ್ಲಿ ಎಕಲಾರ ಪ್ರಾಥಮಿಕ ಶಾಲೆ ಜಿಲ್ಲೆಗೆ ಮಾದರಿಯಾಗಿದೆ ಎಂದರು.

ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷ ಪಂಡರಿ ಆಡೆ ಮಾತನಾಡಿ, ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡುವ ಇಲ್ಲಿಯ ಶಿಕ್ಷಕರು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದು, ಇನ್ನಿತರ ಸರ್ಕಾರಿ ಶಾಲೆಗಳಿಗೆ ಪ್ರೇರಣೆಯಾಗಿದೆ ಎಂದರು.

ಶಿಕ್ಷಕ ಬೀರಪ್ಪ ಕಡ್ಲಿಮಟ್ಟಿ ಮಾತನಾಡಿ, ಈ ಗ್ರಾಮ, ಇಲ್ಲಿಯ ಶೈಕ್ಷಣಿಕ ವಾತಾವರಣ ಸದಾ ಸ್ಮರಣೆಯಲ್ಲಿರುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ಸುನೀತಾ ಶಿವಶಂಕರ, ಗ್ರಾಪಂ ಸದಸ್ಯ ಬಕ್ಕಪ್ಪ, ಪಿಕೆಪಿಎಸ್ ಅಧ್ಯಕ್ಷ ಗಣಪತರಾವ ಜೀರ್ಗೆ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಮಣಿಗೆಂಪೂರೆ, ಶಿವಕುಮಾರ ಪಾಟೀಲ್, ಧನರಾಜ ಮಾನೆ, ಮಲ್ಲಿಕಾರ್ಜುನ ಹಿಪ್ಪಳಗಾವೆ, ರಾಮಚಂದ್ರ, ಶರಣಪ್ಪ ನೌಬಾದೆ, ಬಸವರಾಜ ನಾಗರಾಳೆ, ರಾಜಕುಮಾರ ಮೇತ್ರೆ, ಗಣಪತಿ ಬೇಡಕುಂದೆ, ರಮೇಶ ಹಿಪ್ಪಳಗಾವೆ, ವೀರಶೆಟ್ಟಿ ಗಾದಗೆ ಪ್ರಶಿಕ್ಷಣಾರ್ಥಿ ನಿಖೀತಾ, ಅಂಬಿಕಾ, ನಾಗಜ್ಯೋತಿ ಸೇರಿದಂತೆ ಇನ್ನಿತರರಿದ್ದರು.

ಶಿಕ್ಷಕ ಬಾಲಾಜಿ ಅಮರವಾಡಿ ವಾರ್ಷಿಕ ವರದಿ ಮಂಡಿಸಿದರು. ಅಂಕುಶ ಪಾಟೀಲ್ ಸ್ವಾಗತಿಸಿದರು. ಕಿರಣ ಹಿಪ್ಪಳಗಾವೆ ನಿರೂಪಿಸಿದರು. ಜೈಸಿಂಗ್ ಠಾಕೂರ್ ವಂದಿಸಿದರು.

ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆ:

ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು, ಒಂದೇ ತಾಯಿ ಮಕ್ಕಳು ನಾವುಗಳು, ಮುದುಕಿ ಆದರೆನಂತೆ, ಬಳಪ ಹಿಡಿದ ಭಗವಂತ ನೃತ್ಯಗಳು ಹಾಗೂ ಯಾತಕ್ಕಾಗಿ ಶಿಕ್ಷಣ ನಾಟಕ ಎಲ್ಲರ ಗಮನ ಸೆಳೆದವು. ವಿವಿಧ ತರಗತಿಯ ಎಲ್ಲ ಮಕ್ಕಳಿಂದ ಸುಮಾರು 25ಕ್ಕೂ ಅಧಿಕ ಕಾರ್ಯಕ್ರಮಗಳು ನಡೆದವು.