ಸಾಂಸ್ಕೃತಿಕ ಮೇಳ, ಆರೋಗ್ಯ ಮೇಳದಂತಹ ಸಾಮಾಜಿಕ ಚಟುವಟಿಕೆಗಳ ಮೂಲಕ ಸುತ್ತೂರು ಜನಮನ್ನಣೆ: ಜಗದೀಶ್‌ ಶೆಟ್ಟರ್‌

| Published : Feb 10 2024, 01:45 AM IST

ಸಾಂಸ್ಕೃತಿಕ ಮೇಳ, ಆರೋಗ್ಯ ಮೇಳದಂತಹ ಸಾಮಾಜಿಕ ಚಟುವಟಿಕೆಗಳ ಮೂಲಕ ಸುತ್ತೂರು ಜನಮನ್ನಣೆ: ಜಗದೀಶ್‌ ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವ ಹಿತದೃಷ್ಟಿಯಿಂದ ಕೃಷಿಗೆ ಸಂಬಂಧಿಸಿದಂತೆ ಕೃಷಿ ಮೇಳ ಆಯೋಜಿಸಿ ರೈತರಿಗೆ ಅರಿವು ಮೂಡಿಸುವ ಜೊತೆಗೆ ದೇಸಿ ಆಟಗಳು ಅವಸಾನದ ಅಂಚಿಗೆ ತಲುಪುತ್ತಿರುವ ಕಾಲಘಟ್ಟದಲ್ಲಿ ದೇಸಿ ಆಟಗಳ ಆಯೋಜಿಸಿ ಉತ್ತೇಜಿಸುವ ಕಾರ್ಯವನ್ನು ಜಾತ್ರಾ ಮಹೋತ್ಸವದ ಮೂಲಕ ಮಾಡುತ್ತಿದೆ. ಅಲ್ಲದೇ, ಸಾಂಸ್ಕೃತಿಕ ಮೇಳ, ಆರೋಗ್ಯ ಮೇಳದಂತಹ ಸಾಮಾಜಿಕ ಚಟುವಟಿಕೆಗಳ ಮೂಲಕ ಜನಮನ್ನಣೆ ಗಳಿಸಿದೆ.

ಎಚ್.ಡಿ. ರಂಗಸ್ವಾಮಿಕನ್ನಡಪ್ರಭ ವಾರ್ತೆ ನಂಜನಗೂಡು

ಸುತ್ತೂರು ಜಾತ್ರಾ ಮಹೋತ್ಸವ ಸಾಂಸ್ಕೃತಿಕ ಮೇಳ, ಆರೋಗ್ಯ ಮೇಳದಂತಹ ಸಾಮಾಜಿಕ ಚಟುವಟಿಕೆಗಳ ಮೂಲಕ ಜನಮನ್ನಣೆ ಗಳಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ತಿಳಿಸಿದರು.

ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಹಾಗೂ ಜೈವಿಕ ಪೀಡೆನಾಶಕಗಳ ಉತ್ಪಾದನಾ ಪ್ರಯೋಗಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವ ಹಿತದೃಷ್ಟಿಯಿಂದ ಕೃಷಿಗೆ ಸಂಬಂಧಿಸಿದಂತೆ ಕೃಷಿ ಮೇಳ ಆಯೋಜಿಸಿ ರೈತರಿಗೆ ಅರಿವು ಮೂಡಿಸುವ ಜೊತೆಗೆ ದೇಸಿ ಆಟಗಳು ಅವಸಾನದ ಅಂಚಿಗೆ ತಲುಪುತ್ತಿರುವ ಕಾಲಘಟ್ಟದಲ್ಲಿ ದೇಸಿ ಆಟಗಳ ಆಯೋಜಿಸಿ ಉತ್ತೇಜಿಸುವ ಕಾರ್ಯವನ್ನು ಜಾತ್ರಾ ಮಹೋತ್ಸವದ ಮೂಲಕ ಮಾಡುತ್ತಿದೆ. ಅಲ್ಲದೇ, ಸಾಂಸ್ಕೃತಿಕ ಮೇಳ, ಆರೋಗ್ಯ ಮೇಳದಂತಹ ಸಾಮಾಜಿಕ ಚಟುವಟಿಕೆಗಳ ಮೂಲಕ ಜನಮನ್ನಣೆ ಗಳಿಸಿದೆ ಎಂದರು.

ಇಡೀ ನಾಡಿನ, ದೇಶದ ಸಮಸ್ತ ಭಕ್ತರ ಒಟನಾಟ ಸುತ್ತೂರು ಮಠದೊಂದಿಗೆ ಇರುವುದು ಇದಕ್ಕೆ ಸ್ಪಷ್ಟ ನಿದರ್ಶನ, ಸಾಮಾಜಿಕ ರಚನಾತ್ಮಕ ಸೇವಾ ಕಾರ್ಯಗಳ ಮೂಲಕ ಎಲ್ಲಾ ವರ್ಗದ ಜನರನ್ನು ಒಟ್ಟಾಗಿಸುವ ಮೂಲಕ ಬದಲಾವಣೆ ತರುವ ಕೆಲಸವನ್ನು ಸುತ್ತೂರು ಶ್ರೀಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ನಮ್ಮ ಪೂರ್ವಜರು ಮಾಡುತ್ತಿದ್ದ ಕೃಷಿ ಪದ್ದತಿ ನಶಿಸಿ ಹೋಗುತ್ತಿದೆ. ಇದರಿಂದ ಆಹಾರ ಉತ್ಪಾದನೆ ಕಳಪೆಯಾಗಿ ಮನುಷ್ಯನಿಗೆ 70 ವರ್ಷಕ್ಕೆ ಬರುತ್ತಿದ್ದ ಕಾಯಿಲೆಗಳು 35 ವರ್ಷಕ್ಕೆ ಬರುತ್ತಿವೆ. ಆದ್ದರಿಂದ ನಮ್ಮ ಪೂರ್ವಜರ ಕೃಷಿ ಪದ್ದತಿಯನ್ನು ನಾವು ಅಳವಡಿಸಿಕೊಳ್ಳಬೇಕು, ಇಂದಿನ ವೈಜ್ಞಾನಿಕ ಪೈಪೋಟಿಯಲ್ಲಿ ರೈತರ ಬದುಕು ದಿನೇ ದಿನೇ ಸಂಕಷ್ಟಕ್ಕೆ ಸಿಲುಕುತ್ತಿದೆ. ಸರ್ಕಾರವೇ ಎಲ್ಲವನ್ನೂ ಮಾಡಬೇಕು ಎನ್ನುವುದನ್ನು ಬಿಟ್ಟು ರೈತರು ಯಾರಿಗೂ ಅವಲಂಬಿತವಾಗದೆ ಸ್ವಾವಲಂಬಿಗಳಾಗಬೇಕು ಆಗ ಮಾತ್ರ ನಮ್ಮ ರೈತರ ಬದುಕು ಹಸನಾಗಲು ಸಾಧ್ಯ ಎಂದರು.

ಎ. ರಾಜಶೇಖರ್ ಮಾತನಾಡಿ, ನೀರಿನ ಸಂರಕ್ಷಣೆ ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಜನಸಂಖ್ಯೆಯಿಂದಾಗಿ ನೀರಾವರಿ ಸೆಲೆಯ ಮೇಲೆ ಒತ್ತಡ ಹೆಚ್ಚಿದೆ. ನಿರೀನ ಸಂರಕ್ಷಣೆಗಾಗಿ ರೈತರು ಹನಿ ನಿರಾವರಿ ಪದ್ದತಿಯನ್ನು ಅಳವಡಿಕೊಳ್ಳುವುದರಿಂದ ಶೇ. 40 ರಷ್ಟು ನೀರಿನ್ನು ಸಂರಕ್ಷಿಸಬಹುದು. ಜೊತೆಗೆ ಸಂವೇದಕಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ತೇವಾಂಶಕ್ಕೆ ಅನುಗುಣವಾಗಿ ನೀರು ಬಳಸಬಹುದು ಮತ್ತು ಮೊಬೈಲ್ ಆ್ಯಪ್‌ ಬಳಕೆ ಮೂಲಕ ನೀರಿನ ವೇಳಾಪಟ್ಟಿ ಅಳವಡಿಸಿ, ವಿದ್ಯುತ್ ಇದ್ದಾ ಸ್ವಯಂಚಾಲಿತವಾಗಿ ನೀರಿನ ಯಂತ್ರಗಳನ್ನು ಆನ್ ಅಂಡ್ ಆಫ್ ಮಾಡುವಂತಹ ಕೆಲಸವನ್ನು ಮಾಡಬಹುದಾಗಿದೆ ಎಂದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ. ಸುರೇಶ್ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ 53 ಕೋಟಿ ಭಾರತೀಯರಿಗೆ ಆಹಾರ ಒದಗಿಸಲಾಗದೆ ಬೇರೆ ದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಸ್ವಾಮಿನಾಥನ್‌ ಅವರಂತಹ ವಿಜ್ಞಾನಿಗಳ ದೂರದೃಷ್ಠಿಯಿಂದಾಗಿ ಹಸಿರು ಕ್ರಾಂತಿ ನಡೆಸಿ ಇಂದು 329 ಟನ್ ಆಹಾರ ದಾನ್ಯಗಳನ್ನು ಉತ್ಪಾದಿಸಿ ಬೇರೆ ದೇಶಗಳಿಗೆ ರಫ್ತು ಮಾಡುವ ಸ್ಥಿತಿಗೆ ಬಂದಿದ್ದೇವೆ. ಭಾರತ ದೇಶದಲ್ಲಿ ಮುಂದಿನ 2030ರ ವೇಳೆಗೆ ಜನಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಾಗಲಿದ್ದು, ಈಗಿನ ಉತ್ಪಾದನೆಯಲ್ಲಿ ಶೇ. 30 ರಷ್ಟು ಹೆಚ್ಚಾಗಿ ಬೆಳೆಯಬೇಕಿದೆ ಇಲ್ಲವಾದಲ್ಲಿ ಆಹಾರ ಕ್ಷಾಮದ ಭೀತಿ ಎದುರಾಗಲಿದೆ. ದೇಶಕ್ಕೆ ಆಹಾರ ಕೊರೆತೆ ನೀಗಿಸಲು ನಿರಂತರ ಹಸಿರು ಕ್ರಾಂತಿಗಳು ನಡೆಯಬೇಕಿದೆ ಅಲ್ಲದೆ ಇಷ್ಟೊಂದು ವೈಜ್ಞಾನಿಕ ಸಂಶೋದನೆಗಳು ನಡೆದರೂ ಕೂಡ ರೈತರಿಗೆ ತಲುಪಿಸಿ ಪ್ರಗತಿಪರ ರೈತರನ್ನಾಗಿ ಮಾಡಲು ಸಾಧ್ಯವಾಗಿಲ್ಲ ಇದಕ್ಕೆ ಕಾರಣ ಕೂಡ ಕೃಷಿ ಸಂಶೋದನಾಲಯಗಳಲ್ಲಿ ನಡೆಸಿದ ಸಂಶೋಧನೆಗಳಲ್ಲಿ ಶೇ. 40 ರಷ್ಟು ಮಾತ್ರ ರೈತರಿಗೆ ತಲುಪುತ್ತಿವೆ, ಉಳಿದ ಶೇ. 60ರಷ್ಟು ಸಂಶೋಧನೆಗಳು ಸಂಶೋಧನಾ ಕೇಂದ್ರಗಳಲ್ಲೇ ಉಳಿದಿರುವುದು. ರೈತರಿಗೆ ಸಂಶೋಧನೆಗಳು ತಲುಪುವಂತೆ ವಿಸ್ತರಣಾ ಕಾರ್ಯಕ್ರಮಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳು ಮಾಡಬೇಕಿದೆ ಎಂದರು.

ರಾಸಾಯನಿಕ ಗೊಬ್ಬರ ಸಮತೋಲನ ಬಳಕೆ ಮಾಡದೆ ದುರ್ಬಳಕೆ ಮಾಡಿಕೊಂಡ ಪರಿಣಾಮ ಮಣ್ಣಿನಲ್ಲಿ ಇಂಗಾಲದ ಅಂಶ 3.5ಕ್ಕೆ ತಲುಪಿದೆ, ಇದರಿಂದ ಮಣ್ಣಿನ ಫಲವತ್ತ ಕಡಿಮೆಯಾಗಿ ಕೃಷಿ ಲಾಭದಾಯಕವಾಗದೆ ಯುವಕರು ಕೃಷಿಯಿಂದ ವಿಮುಖರಾಗುವಂತಹ ಸನ್ನಿವೇಶ ಎದುರಾಗಿದೆ. ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ ಅವಲಂಬಿಸಬೇಕು ಎಂಬ ಕೂಗು ಏಳುತ್ತಿದೆ. ಆದರೆ ಜಾನುವಾರು ಸಂಖ್ಯೆಗಳು ಕಡಿಮೆ ಮಾಡಿ ತಿಪ್ಪೆಗೊಬ್ಬರವಿಲ್ಲದೆ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಬೇಕು ಎನ್ನುವುದು ಸರಿಯಲ್ಲ. ಅದಕ್ಕೆ ಸಕಲ ಸಿದ್ದತೆಗಳನ್ನು ಕೈಗೊಳ್ಳಬೇಕು ಜೊತೆಗೆ ಕೃಷಿಯನ್ನು ಲಾಭದಾಯಕವಾಗಿಸಲು ಕೃಷಿಕರೇ ಉದ್ದಿಮೆದಾರರಾಗಿ ಬದಲಾಗಬೇಕು ಇಲ್ಲವಾದಲ್ಲಿ ರೈತ ಉತ್ಪಾದಕ ಸಂಸ್ಥೆಗಳೊಂದಿಗೆ ಕೈಜೋಡಿಸಿ ರೈತರ ಬೆಳೆಗಳನ್ನು ಮೌಲ್ಯವರ್ದನೆ ಮಾಡಿ ಬೆಲೆ ನಿಗದಿಗೊಳಿಸಿ ಮಾರಾಟ ಮಾಡಿದಲ್ಲಿ ಕೃಷಿಯನ್ನು ಲಾಭದಾಯಕವಾಗಿಸಬಹುದಾಗಿದೆ ಎಂದರು.

ಹೆಚ್ಚು ಇಳುವರಿ ಪಡೆದ ಸಾಧಕ ರೈತರನ್ನು ಸುಂದರಮ್ಮ ವೀರಭದ್ರಪ್ಪ ದುಗ್ಗಟ್ಟಿ ಪ್ರತಿಷ್ಠಾನದ ವತಿಯಿಂದ ಮತ್ತು ಪ್ರಗತಿಪರ ರೈತ ಮಹಿಳೆಯರನ್ನು ಮಹದೇವಪದ್ಪ ಸೇವಾ ಟ್ರಸ್ಟ್ ವತಿಯಿಂದ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಸುತ್ತೂರು ಶಿವರಾತ್ರಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನೀಲಗಿರಿಯ ಎಡಪಲ್ಲಿಯ ಸಿದ್ದಗಿರಿ ಸಾಯಿ ಮಠದ ಮತಾಶಕ್ತಿ ಮಾಯಿ, ಮಮತಶೇಖರ್, ಸರವಣನ್, ಬಿ.ವಿ. ವಿಠ್ಠಲ್, ಲಿಂಗರಾಜ ಗಾಂಧಿ, ಗಿರಿಜಾ ಸುದರ್ಶನ್ ಇದ್ದರು.