ಸಾರಾಂಶ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ತಾಲೂಕಿನ ದಲಿತ ಸಮುದಾಯದ ಜನರು ತಮ್ಮ ಯಾವುದೇ ಕುಂದುಕೊರತೆ ಇದ್ದರೆ ಅವುಗಳನ್ನು ತಕ್ಷಣವೇ ನಿವಾರಿಸುವ ಉದ್ದೇಶದಿಂದ ಪ್ರತಿ ತಿಂಗಳು ಸಭೆಗಳನ್ನು ನಡೆಸಲಾಗುತ್ತದೆ. ತಾವೆಲ್ಲರೂ ಆತ್ಮಸ್ಥೈರ್ಯದಿಂದ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪಿಎಸ್‌ಐ ವಿಜಯ ಪ್ರತಾಪ ಹೇಳಿದರು.ತಾಲೂಕಿನ ಕಲ್ಲೂರು ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕಾಲೋನಿಯಲ್ಲಿ ಭಾನುವಾರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಯಾವುದೇ ಸಾರ್ವಜನಿಕ ಸಮಸ್ಯೆಗಳಿದ್ದರೆ ಗಮನಕ್ಕೆ ತರಬೇಕು. ನಿಮ್ಮ ನೆರವಿಗೆ ಇಲಾಖೆ ಸದಾ ಸಿದ್ಧವಿರುತ್ತದೆ. ಯಾವುದೇ ಅನುಮಾನ ಬೇಡ ಎಂದರು.ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ರೀತಿಯಿಂದಲೂ ಸಾಕಷ್ಟು ಅನುಕೂಲಗಳನ್ನು ಕಲ್ಪಿಸಿಕೊಟ್ಟಿದೆ. ಹೀಗಾಗಿ, ಮಕ್ಕಳಿಗೆ ಶಿಕ್ಷಣ ಕೊಡಿಸುವ ಪ್ರಾಮಾಣಿಕ ಕಾರ್ಯಕ್ಕೆ ಮುಂದಾಗಬೇಕು. ಯುವಕರು ದುಶ್ಚಟಗಳ ದಾಸರಾಗಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳದೇ ಸುಂದರ ಬದುಕು ಕಟ್ಟಿಕೊಳ್ಳಬೇಕು. ಸಂವಿಧಾನ ನೀಡಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಗ್ರಾಮದಲ್ಲಿ ಯಾರಾದರೂ ಜಾತಿ ನಿಂದನೆ, ದೌರ್ಜನ್ಯ ಮಾಡಿದರ ಯಾವುದೇ ಮುಲಾಜಿಯಿಲ್ಲದೇ ನನ್ನ ಗಮನಕ್ಕೆ ತನ್ನಿ. ಅಂತಹವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬರು ಸಹೋದರತ್ವದಿಂದ ಸೌಹಾರ್ದಯುತವಾಗಿ ಕೂಡಿ ಬಾಳುವುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಲವಂತಪ್ಪ ಪೂಜಾರ, ಬಸಪ್ಪ ಬಂಗಾಳಗಿಡದ, ವೀರೇಶ ಕಡೇಮನಿ, ಬಸವರಾಜ ಪೂಜಾರ, ವೀರೇಶ ಸಂದಿಮನಿ, ಕಲ್ಲಪ್ಪ ಬಂಗಾಳಗಿಡದ, ಶೇಖರಪ್ಪ ಪೂಜಾರ, ಬಸವರಾಜ, ಶರಣಪ್ಪ ಮತ್ತಿತರರು ಇದ್ದರು.
ಯರ್ರಾಬಿರ್ರಿ ಸಂಚಾರ ತಡೆಗಟ್ಟಿಅಕ್ರಮ ಮರಳು ಸಾಗಾಟ ವಾಹನಕ್ಕೆ ಕಡಿವಾಣ ಹಾಕುವುದು, ಕಾಲೋನಿಯಲ್ಲಿ ಮದ್ಯ ಮಾರಾಟ ಮಾಡದಂತೆ ತಡೆ ಹಿಡಿಯಬೇಕು. ಉಸುಕು ತುಂಬಿದ ಟಿಪ್ಪರಗಳು ಅತಿ ವೇಗವಾಗಿ ಯರ‍್ರಾಬರ‍್ರಿಯಾಗಿ ಸಂಚರಿಸುವದರಿಂದ ರಸ್ತೆಯಲ್ಲಿ ಓಡಾಡುವ ವಯೋವೃದ್ದರಿಗೆ, ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹಲವಾರು ವಾಹನಗಳಿಂದ ಗಾಯಗಳಾದ ಘಟನೆಗಳು ನಡೆದಿವೆ. ರಸ್ತೆಯಲ್ಲಿರುವ ನಮ್ಮ ಕುರಿ, ಮೇಕೆ ಮರಿ, ಕೋಳಿ, ಪಕ್ಷಿಗಳ ಮೇಲೆ ವಾಹನ ಹರಿಸಿದ ಘಟನೆಗಳು ನಡೆದಿವೆ. ಇವುಗಳಿಗೆ ಕಡಿವಾಣ ಹಾಕಿದರೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ದಲಿತ ಮುಖಂಡರು ಪಿಎಸ್‌ಐಗೆ ಮನವಿ ಸಲ್ಲಿಸಿದರು.