ಸಾರಾಂಶ
ಕಳೆದ ಮಳೆಗಾಲದಲ್ಲಿ ನೆರೆಹಾವಳಿ ಬಂದಾಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಗರಾಭಿವೃದ್ಧಿ ಯೋಜನಾಧಿಕಾರಿ ತಂಡ ಭಟ್ಕಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅತೀ ಅಗತ್ಯವಾಗಿ ಆಗಬೇಕಾದ ಕಾಮಗಾರಿಗಳ ಬಗ್ಗೆ ವೀಕ್ಷಿಸಿ ಪಟ್ಟಿ ಮಾಡಿಕೊಂಡು ಹೋಗಿದ್ದರು.
ಭಟ್ಕಳ:
ಇಲ್ಲಿನ ಹೆದ್ದಾರಿ ಹೋರಾಟ ಸಮಿತಿ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಸಹಾಯಕ ಆಯುಕ್ತೆ ಡಾ. ನಯನಾ ಅವರನ್ನು ಭೇಟಿ ಮಾಡಿ ಮಳೆಗಾಲದ ಪೂರ್ವದಲ್ಲಿ ಆಗಬೇಕಾದ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿ ಅಗತ್ಯ ಕಾಮಗಾರಿಗೆ ಈಗಿಂದಲೇ ಚಾಲನೆ ನೀಡಬೇಕು ಎಂದು ಆಗ್ರಹಿಸಲಾಯಿತು.ಈ ವೇಳೆ ಮಾತನಾಡಿದ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸತೀಶಕುಮಾರ ನಾಯ್ಕ, ಕಳೆದ ಮಳೆಗಾಲದಲ್ಲಿ ನೆರೆಹಾವಳಿ ಬಂದಾಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಗರಾಭಿವೃದ್ಧಿ ಯೋಜನಾಧಿಕಾರಿ ತಂಡ ಭಟ್ಕಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅತೀ ಅಗತ್ಯವಾಗಿ ಆಗಬೇಕಾದ ಕಾಮಗಾರಿಗಳ ಬಗ್ಗೆ ವೀಕ್ಷಿಸಿ ಪಟ್ಟಿ ಮಾಡಿಕೊಂಡು ಹೋಗಿದ್ದರು. ಈಗ ಇನ್ನೊಂದು ಮಳೆಗಾಲ ಸಮೀಪಿಸಿದರೂ ಅವರು ಗುರುತಿಸಿದ ಒಂದು ಕಾಮಗಾರಿಯನ್ನೂ ಐಆರ್‌ಬಿ ಮಾಡಿಲ್ಲ. ಮಳೆಗಾಲದಲ್ಲಿ ಜಲಾವ್ರತಗೊಂಡ ರಂಗಿನಕಟ್ಟೆ ಹೆದ್ದಾರಿ, ಸಂಶುದ್ದೀನ್ ವೃತ್ತಕ್ಕೆ ಕನಿಷ್ಠ ಚರಂಡಿ ನಿರ್ಮಾಣ ಕಾರ್ಯವನ್ನೂ ಮಾಡಲಿಲ್ಲ. ಇನ್ನೇನು ಮಳೆಗಾಲ ಪುನಃ ಆರಂಭವಾಗಲಿದ್ದು, ಅದಕ್ಕೂ ಪೂರ್ವದಲ್ಲಿ ಐಆರ್‌ಬಿ ಹೆದ್ದಾರಿಯಿಂದ ನೆರೆಹಾವಳಿ ಉಂಟಾಗುವ ಪ್ರದೇಶದಲ್ಲಿ ಚರಂಡಿ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.ಈ ಬಗ್ಗೆ ತಾವು ಐಆರ್‌ಬಿ ಹಾಗೂ ಹೆದ್ದಾರಿ ಪ್ರಾಧಿಕಾರ ಜತೆ ಮಾತನಾಡಿ ತುರ್ತು ಕಾಮಗಾರಿಗಾಗಿ ಒತ್ತಡ ಹೇರಬೇಕು. ಇದು ಸಾಧ್ಯವಾಗದಿದ್ದಲ್ಲಿ ಭಟ್ಕಳ ನಾಗರಿಕ ಹಿತರಕ್ಷಣಾ ವೇದಿಕೆ ಮತ್ತು ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಪ್ರಸ್ತುತ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಬಂದ್ ಮಾಡಿಸಿ, ಟೋಲ್ ಬಂದ್ ಸೇರಿದಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಶ ನಾಯಕ ಮಾತನಾಡಿ, ಐಆರ್‌ಬಿ ಮತ್ತೆ ಹೆದ್ದಾರಿ ಕಾಮಗಾರಿ ಆರಂಭಿಸಿದೆ. ಕೊಟೇಶ್ವರ ರಸ್ತೆಯಲ್ಲಿ ಗುಡ್ಡ ಅಗೆದು ಮಣ್ಣು ತೆಗೆಯುತ್ತಿದ್ದಾರೆ. ಸಂಶುದ್ದೀನ್ ವೃತ್ತದ ಬಳಿ ಒಳಚರಂಡಿ ಕಾಮಗಾರಿ ನಡೆಸಲಾಗುತ್ತಿದೆ. ಐಆರ್‌ಬಿ ಒಂದು ನಿರ್ದಿಷ್ಠ ನಕ್ಷೆಯ ಪ್ರಕಾರ ಕೆಲಸ ಮಾಡುತ್ತಿಲ್ಲ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ದೂರಿದರು.ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಐಆರ್‌ಬಿ ಜನಾಭಿಪ್ರಾಯಕ್ಕೆ ಮನ್ನಣೆ ಕೊಡದೇ ತಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇವರ ಅರ್ಧಂಬರ್ಧ ಕಾಮಗಾರಿಯಿಂದ ಮೂಡಭಟ್ಕಳ ಬೈಪಾಸ್, ಕಾಯ್ಕಿಣಿ ಬಳಿ ಹೆದ್ದಾರಿಯು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ದಿನಂಪ್ರತಿ ಇಲ್ಲಿ ಅಪಘಾತ ಸಂಭವಿಸಿ ಜನರು ಸಾಯುತ್ತಿದ್ದರೂ ಅಧಿಕಾರಿಗಳು ತಲೆಕಡೆಸಿಕೊಳ್ಳುತ್ತಿಲ್ಲ. ಗೊತ್ತಿದ್ದರೂ ಸುಮ್ಮನಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಹಾಯಕ ಆಯುಕ್ತೆ ಡಾ. ನಯನಾ ಮಾತನಾಡಿ, ಭಟ್ಕಳದ ಹೆದ್ದಾರಿ ಸಮಸ್ಯೆ ಪರಿಹಾರ ಈಗ ನಮ್ಮ ಕೈಯಲ್ಲಿ ಇಲ್ಲ. ರಾಜ್ಯಮಟ್ಟದಲ್ಲಿ ಇದರ ಬಗ್ಗೆ ಚರ್ಚೆಯಾಗಿದ್ದು, ರಾಜ್ಯ ಕಾರ್ಯದರ್ಶಿ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ಅವರು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಟ್ಕಳದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಈಗಾಗಲೇ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ನೀಡಿದ್ದು, ಅವರು ಆದ್ಯತೆ ಮೇಲೆ ಕೆಲಸ ಮಾಡುವ ಭರವಸೆ ನೀಡಿದ್ದಾರೆ. ಮಳೆಗಾಲಕ್ಕೂ ಪೂರ್ವ ತುರ್ತಾಗಿ ಆಗಬೇಕಾದ ಕೆಲಸ ಬಗ್ಗೆ ಐಆರ್‌ಬಿ ಅವರಿಗೆ ಸೂಚಿಸಿ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಪ್ರಮುಖರಾದ ಈಶ್ವರ ಎನ್. ನಾಯ್ಕ, ಇಮ್ರಾನ ಲಂಕಾ, ಎಸ್.ಎಂ. ನಾಯ್ಕ, ಕೆ.ಎಂ. ಅಸ್ಪಾಕ್ ಮುಂತಾದವರಿದ್ದರು.