ಕಡ್ಡಾಯವಾಗಿ ಚುನಾವಣೆ ನೀತಿ ಸಂಹಿತೆ ಪಾಲಿಸಿ: ಜಿಲ್ಲಾಧಿಕಾರಿ ಜಾನಕಿ ಕೆ.ಎಂ.

| Published : Mar 07 2024, 01:48 AM IST

ಕಡ್ಡಾಯವಾಗಿ ಚುನಾವಣೆ ನೀತಿ ಸಂಹಿತೆ ಪಾಲಿಸಿ: ಜಿಲ್ಲಾಧಿಕಾರಿ ಜಾನಕಿ ಕೆ.ಎಂ.
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಲೋಕಸಭಾ ಚುನಾವಣೆಗಾಗಿ ಶೀಘ್ರವೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು. ನೀತಿ ಸಂಹಿತೆ ಪಾಲನೆ ಕಡ್ಡಾಯ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲೋಕಸಭಾ ಚುನಾವಣೆಗಾಗಿ ಶೀಘ್ರವೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು, ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಡೆಸಲು ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆ ಪಾಲಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಅನಗತ್ಯವಾಗಿ ಯಾವುದೇ ರಾಜಕೀಯ ಪಕ್ಷಗಳು ಗೊಂದಲ ಹುಟ್ಟು ಹಾಕದೆ ಒಳಗೊಳ್ಳುವಿಕೆಯೊಂದಿಗೆ ಚುನಾವಣೆ ನಡೆಸಲು ಸಹಕಾರ ನೀಡಬೇಕು ಎಂದರು.

ರಾಜಕೀಯ ಪಕ್ಷಗಳು ಪಾರದರ್ಶಕ ಚುನಾವಣೆ ನಡೆಸಲು ಪಕ್ಷದ ಕಾರ್ಯಕರ್ತರಲ್ಲಿ ಅರಿವು ಮೂಡಿಸುವ, ಚುನಾವಣಾ ಚಟುವಟಿಕೆಗಳ ಕುರಿತು ಶಿಕ್ಷಣ ನೀಡುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.

ಮಾದರಿ ನೀತಿ ಸಂಹಿತೆ ಜಾರಿಯಾದ ತಕ್ಷಣ ಸಾರ್ವಜನಿಕ ಸಭೆ, ಸಮಾರಂಭ, ರ್‍ಯಾಲಿ ನಡೆಸಲು, ಸಂಚಾರಿ ವಾಹನ, ಧ್ವನಿವರ್ಧಕ, ಪಕ್ಷದ ತಾತ್ಕಾಲಿಕ ಕಚೇರಿ, ಹೆಲಿಕ್ಯಾಪ್ಟರ್‌, ಹೆಲಿಪ್ಯಾಡ್ ಹಾಗೂ ಇನ್ನಿತರ ನಿಯಮಗಳಿಗೆ ಸುವಿಧಾ ತಂತ್ರಾಂಶ ಮೂಲಕ ಅನುಮತಿ ಪಡೆಯಬೇಕು ಎಂದರು.

ಬರುವ ಲೋಕಸಭಾ ಚುನಾಣೆಯಲ್ಲಿ ಅಭ್ಯರ್ಥಿಗಳು ಒಟ್ಟು ₹ 95 ಲಕ್ಷದವರೆಗೆ ಅಧಿಕೃತವಾಗಿ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಚುನಾವಣಾ ಜಾಹಿರಾತು ನೀಡಬೇಕಾದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಎಂಸಿಎಂಸಿ ತಂಡಕ್ಕೆ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯಬೇಕು. ಪೇಡ್ ನ್ಯೂಸ್ ಕೂಡ್ ಎಂಸಿಎಂಸಿ ವ್ಯಾಪ್ತಿಯಲ್ಲಿರುತ್ತದೆ. ಅಧಿಕಾರದಲ್ಲಿರುವ ಪಕ್ಷ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ಇದ್ದರು.