ಸಮ್ಮೇಳನಗಳು ಅರಿವು, ತಿಳುವಳಿಕೆ ನೀಡುತ್ತವೆ: ಡಾ। ಗೋವಿಂದರಾಜು

| Published : Mar 21 2024, 01:45 AM IST

ಸಮ್ಮೇಳನಗಳು ಅರಿವು, ತಿಳುವಳಿಕೆ ನೀಡುತ್ತವೆ: ಡಾ। ಗೋವಿಂದರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಹೆಸರಘಟ್ಟ ಮುಖ್ಯ ರಸ್ತೆಯ ವಿಜಯಶ್ರೀ ಶಾಲಾ ಆವರಣದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ। ಟಿ.ಗೋವಿಂದರಾಜು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಸಂವಿಧಾನದ ಸ್ಮರಣೆ ನಿತ್ಯ ಸ್ಮರಣೆ ಆಗಬೇಕು. ಸಂವಿಧಾನದ ಆಶಯಗಳು, ವಿವೇಕ ಹಾಗೂ ಮಾನವೀಯವಾಗಿವೆ. ರಾಷ್ಟ್ರದ ಸಂವಿಧಾನ ವಿಶಾಲ ಕರ್ನಾಟಕದ ಭಾಗ್ಯೋದಯದ ಕಿರಣವೂ ಆಗಿದೆ ಎಂದು ಜಾನಪದ ವಿದ್ವಾಂಸ ಹಾಗೂ ಸಮ್ಮೇಳನ ಅಧ್ಯಕ್ಷ ಡಾ। ಟಿ.ಗೋವಿಂದರಾಜು ಅಭಿಪ್ರಾಯಪಟ್ಟರು.

ಹೆಸರಘಟ್ಟ ಮುಖ್ಯ ರಸ್ತೆಯ ವಿಜಯಶ್ರೀ ಶಾಲಾ ಆವರಣದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾತನಾಡಿದರು.

ಸಮ್ಮೇಳನಗಳು ಎಲ್ಲರಿಗೂ ಭವಿಷ್ಯಕ್ಕೆ ಅರಿವು, ತಿಳುವಳಿಕೆ ಬೆಳೆಸುತ್ತವೆ. ಜಾತಿ, ಧರ್ಮ, ಭಾಷೆ, ಗಡಿ ರಾಜಕೀಯದಂತಹ ಕೆಲವು ಸಂಗತಿಗಳಲ್ಲಿ ಆಗಾಗ ಕೆಲವರಿಂದಾಗಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಪಿಡುಗುಗಳಿಗೆ ಅವರು ಯಾವ ಬಗೆಯ ‘ಮುದ್ದು’ ಸಲಹೆ ಮಾಡುತ್ತಾರೆ ಎಂಬುದನ್ನು ತಿಳಿಯಲು ಪ್ರಜ್ಞಾವಂತ ನಾಗರಿಕರು ಇಂತಹ ಸಮ್ಮೇಳನಗಳಿಗೆ ಬರಲು ಉತ್ಸುಕರಾಗಿದ್ದಾರೆ. ಸಾಹಿತಿಗಳು ಅಂತಹ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಇರದೆ ಇರುತ್ತದೆ ಎಂದರು.

ದೇವರನ್ನು ಕಾಣಲು ಮತ್ತು ಪುಣ್ಯ ಸಂಪಾದನೆಗೆ ತೀರ್ಥಯಾತ್ರೆ ಮಾಡಬಹುದು. ಆದರೆ ಜನಸಾಮಾನ್ಯರಿಗೆ ನೆರವಾಗುವ ಮೂಲಕ ಪುಣ್ಯ ಸಂಪಾದನೆಯನ್ನು ಅನುಭವಿಸಬಹುದು. ಇಂತಹ ಸರಳವಾದ ಜಗತ್ತಿಗೆ ಮಾರ್ಗದರ್ಶನ ನೀಡುವ ಕತೆಗಳು ನಮ್ಮ ಜನಪದ ಕತೆಗಳಲ್ಲಿವೆ. ಜನಸಾಮಾನ್ಯರ ಮಾತುಗಳನ್ನು ಕಿವಿಗೊಟ್ಟು ಕೇಳುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು. ಆಗ ನಾಗರಿಕರು ಎನಿಸಿಕೊಂಡು ಮೆರೆಯುವ ನಾವು ನಿಜಕ್ಕೂ ಹೇಗಿದ್ದಿವಿ ಎಂಬುದರ ಅರಿವು ಮೂಡುತ್ತದೆ ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲೆ ಕಸಾಪ ಅಧ್ಯಕ್ಷ ಎಂ.ಪ್ರಕಾಶ್ ಮೂರ್ತಿ ಮಾತನಾಡಿ, ರಾಜ್ಯ ರಾಜಧಾನಿಯಲ್ಲಿ ಕನ್ನಡ ಉಳಿದರೆ ಇಡೀ ದೇಶದಲ್ಲಿ ಉಳಿದಂತೆ. ಮಹಾನಗರದ ಜೊತೆಗೆ ಬೆಂಗಳೂರು ಮಾಯ ನಗರಿಯು ಹೌದು. ಇಲ್ಲಿಗೆ ದೇಶ ವಿದೇಶದಿಂದಲೂ ಬಂದು ನೆಲೆಸಿದ್ದಾರೆ. ಕನ್ನಡಿಗರು ಬಹುಸಂಖ್ಯಾತರಾದರೂ ಅಲ್ಪಸಂಖ್ಯಾತರಂತೆ ಇದ್ದಾರೆ. ಹಾಗಾಗಿ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಕನ್ನಡ ಉಳಿಸೋಣ ಎಂದು ಸಲಹೆ ನೀಡಿದರು.

ಸರ್ಕಾರವು ಕೂಡ ಪ್ರಾಮಾಣಿಕವಾಗಿ ತನ್ನಿಂದ ತಾನೇ ಕನ್ನಡದ ಬಗ್ಗೆ ಒತ್ತು ಕೊಟ್ಟರೆ ಕನ್ನಡಿಗರು ಬೀದಿಗಿಳಿದು ಹೋರಾಡುವ ಅವಶ್ಯಕತೆ ಇಲ್ಲ. ಉದ್ಯೋಗದಲ್ಲಿ ಕನ್ನಡಿಗರ ಸ್ಥಾನ, ನಾಮಫಲಗಳಲ್ಲಿ ಕನ್ನಡ, ನೆಲ, ಜಲ, ಭಾಷೆಗೆ ಒತ್ತು ನೀಡಬೇಕು ಎಂದರು.

ಸಮ್ಮೇಳನದ ಅಧ್ಯಕ್ಷರನ್ನು ಎಂಟನೇ ಮೈಲಿಯಿಂದ ಸಾರೋಟಿನಲ್ಲಿ ತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ತರಲಾಯಿತು.

ಕತೆಗಾರ ಕಂನಾಡಿಗಾ ನಾರಾಯಣ, ಕನ್ನಡ ಜಾನಪದ ಪರಿಷತ್ ದಾಸರಹಳ್ಳಿ ಕ್ಷೇತ್ರ ಘಟಕದ ಅಧ್ಯಕ್ಷ ವೈ.ಬಿ.ಎಚ್.ಜಯದೇವ್, ಭೂಮಿಕಾ ಸೇವಾ ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ, ರಾಜೇಂದ್ರ ಕಣ್ಣೂರು, ಆಸೆಂಟ್ ಕಾಲೇಜಿನ ಸಂಸ್ಥಾಪಕ ಬಿ.ಎಂ.ವೆಂಕಟೇಶ್, ಕ್ಷೇತ್ರದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಇದ್ದರು.