ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬರ ಪರಿಹಾರ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಂಕಷ್ಟದಲ್ಲಿದ್ದ ರಾಜ್ಯದ 875ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಸರ್ಕಾರವೇ ನೇರಹೊಣೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್ ಆರೋಪಿಸಿದರು.ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಆವರಿಸಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದರಿಂದ ಹೆಚ್ಚು ರೈತರು ಗುಳೇ ಹೋಗುತ್ತಿದ್ದಾರೆ. ಆದರೂ ಸರ್ಕಾರ ರೈತರ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ಇದು ಆಳುವ ಸರ್ಕಾರದ ನಿರ್ಲಕ್ಷ್ಯತನದ ಪ್ರತಿಬಿಂಬ ಎಂದು ದೂರಿದರು.
ತಮಿಳುನಾಡಿಗೆ ಕಾವೇರಿ ನೀರನ್ನು ಹರಿಯಬಿಟ್ಟು ಕಾವೇರಿ ಕೊಳ್ಳದ ರೈತರ ಬದುಕನ್ನು ದುರ್ಬಲಗೊಳಿಸಿದೆ. ಕಾವೇರಿಯನ್ನೇ ನಂಬಿಕೊಂಡಿರುವ ಮೈಸೂರು - ಬೆಂಗಳೂರು ಹಾಗೂ ಮಂಡ್ಯ ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ಪರದಾಡುವ ಸನ್ನಿವೇಶ ತಂದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮುಚ್ಚುತ್ತಾ ಬಂದಿದೆ. ಟ್ಯಾಂಕರ್ ನೀರಿನ ಮಾಫಿಯಾಗಳಿಗೆ ಅನುಕೂಲ ಮಾಡಿಕೊಟ್ಟಿದೆ. ನೀರಿನ ದರವನ್ನು ದುಪ್ಪಟ್ಟು ಮಾಡಿದ ಪರಿಣಾಮ ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜಾಗದಂತೆ ಮಾಡಿ ಉದ್ಯಮಗಳು ಬಾಗಿಲು ಮುಚ್ಚಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ದಲಿತರ ವಿರೋಧಿ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಮೀಸಲಿರಿಸಿದ್ದ 11 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿದೆ ಎಂದು ಕಿಡಿಕಾರಿದರು.ದಲಿತರು, ಶೋಷಿತ ವರ್ಗದವರ ಕುರಿತು ಸಿದ್ದರಾಮಯ್ಯನವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಪರೋಕ್ಷವಾಗಿ ಶೋಷಿತ, ಪೀಡಿತ, ವಂಚಿತ ತಳ ಸಮುದಾಯಗಳ ಮೇಲೆ ನಿರಂತರ ಅನ್ಯಾಯ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕಿದ್ದಾಗಲೂ ಗೌರವಿಸದ ಕಾಂಗ್ರೆಸ್ಸಿಗರು ಅವರ ನಿಧನಾನಂತರವೂ ನಿರಂತರ ಅನ್ಯಾಯ ಮಾಡಿದ್ದು, ಅವರು ಬದುಕಿದ್ದಾಗ ಚುನಾವಣೆಗೆ ನಿಂತಾಗಲೂ ಸೋಲಿಸಿದ ಪಕ್ಷ ಇದೇ ಕಾಂಗ್ರೆಸ್ ಎಂದು ಟೀಕಿಸಿದರು.ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಯಲ್ಲಿ ಒಂದು ಭಾಗವನ್ನೂ ಕೂಡ ಕಾಂಗ್ರೆಸ್ ಸರ್ಕಾರ ತನ್ನ 70 ವರ್ಷಗಳ ಆಡಳಿತದಲ್ಲಿ ಮಾಡಲಾಗಿಲ್ಲ ಎಂದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ ವರ್ಷಕ್ಕೆ 6 ಸಾವಿರ ರು. ನೀಡುತ್ತಿದೆ. ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಆರಂಭಿಸಿದ್ದ ಹೆಚ್ಚುವರಿ 4 ಸಾವಿರ ರು. ನೀಡುವ ವ್ಯವಸ್ಥೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದು ಮಾಡಿ ವಂಚಿಸಿದೆ ಎಂದು ದೂರಿದರು.ಹಾಲಿನ ದರ, ಅಬಕಾರಿ ಸುಂಕ, ಆಸ್ತಿ ನೋಂದಣಿ ಶುಲ್ಕ, ವಾಹನ ನೋಂದಣಿ ಶುಲ್ಕ ಸೇರಿ ಜನರಿಗೆ ಅಗತ್ಯವಿರುವ ಎಲ್ಲ ಸೇವೆಗಳಿಗೂ ದುಪ್ಪಟ್ಟು ದರ ಹೆಚ್ಚಿಸಿರುವ ಸರ್ಕಾರದಿಂದ ಜನಸಾಮಾನ್ಯರು ಬವಣೆ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಕಳೆದ ವಿಧಾನ ಸಭಾ ಬಜೆಟ್ ಅಧಿವೇಶನದಲ್ಲಿ ಯಾವುದೇ ಜನಪರ ಚರ್ಚೆಗಳನ್ನು ಮಾಡದೆ ಸಮಯ ವ್ಯರ್ಥ ಮಾಡಿ ಜನತೆಯ ತೆರಿಗೆ ಹಣ ಪೋಲು ಮಾಡಿದ್ದು ಈ ಸರ್ಕಾರದ ಸಾಧನೆಯಾಗಿದೆ ಎಂದು ಕಿಡಿಕಾರಿದರು.
ಸುದ್ಧಿಗೋಷ್ಠಿಯಲ್ಲಿ ರಾಜ್ಯ ಪರಿಶಿಷ್ಟ ಮೋರ್ಚಾ ಕಾರ್ಯದರ್ಶಿ ಪರಮಾನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ, ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್, ಬಾಲು, ನಾಗಾನಂದ ಉಪಸ್ಥಿತರಿದ್ದರು.