ಕಾಂಗ್ರೆಸ್ ಭವಿಷ್ಯದ ದೃಷ್ಟಿಯಿಂದ ಡಿಕೆಶಿಗೆ ಸಿಎಂ ಸ್ಥಾನ ನೀಡಬೇಕು: ಕೆ.ಎಂ.ಉದಯ್

| Published : Nov 22 2025, 02:00 AM IST

ಕಾಂಗ್ರೆಸ್ ಭವಿಷ್ಯದ ದೃಷ್ಟಿಯಿಂದ ಡಿಕೆಶಿಗೆ ಸಿಎಂ ಸ್ಥಾನ ನೀಡಬೇಕು: ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ ಆಡಳಿತ, ನಾಯಕತ್ವದ ಬಗ್ಗೆ ಪ್ರಶ್ನೆಗಳಿಲ್ಲ. ಪಕ್ಷದ ಹೈಕಮಾಂಡ್‌ ಹೇಳಿದಂತೆ ನಾವೆಲ್ಲ ಕೇಳುತ್ತೇವೆ. ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ಮಾತುಕತೆ ನಮ್ಮ ಮುಂದೆ ಆಗಿಲ್ಲ. ಒಂದು ವೇಳೆ ಮಾತುಕತೆ ನಡೆದಿದ್ದರೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೋರಾಡಿದ್ದಕ್ಕೆ ಪ್ರತಿಫಲ ಸಿಗಬೇಕು. ಭವಿಷ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಡಿಕೆಶಿಗೆ ಸಿಎಂ ಸ್ಥಾನ ನೀಡಲಿ ಅನ್ನೋದು ನನ್ನ ಹಾಗೂ ಬಹಳಷ್ಟು ಜನರ ಅಭಿಪ್ರಾಯವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ತಾಲೂಕಿನ ದೇಶ ಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಆಪ್ತ ಶಾಸಕರ ದೆಹಲಿ ಪರೇಡ್ ಕೇವಲ ಮಾಧ್ಯಮ ಸೃಷ್ಟಿ. ಏನೇ ತೀರ್ಮಾನ ಆದರೂ ಹೈಕಮಾಂಡ್‌ ಮಾಡುತ್ತದೆ. ಕೆಲವು ನಾಯಕರು ತಮ್ಮ ಅನಿಸಿಕೆ ಹೇಳುತ್ತಾರೆ. ಅದನ್ನೇ ದೊಡ್ಡದಾಗಿ ಮಾಧ್ಯಮಗಳು ತೋರಿಸುತ್ತಿವೆ ಎಂದರು.

ಸಿಎಂ ಸಿದ್ದರಾಮಯ್ಯ ಆಡಳಿತ, ನಾಯಕತ್ವದ ಬಗ್ಗೆ ಪ್ರಶ್ನೆಗಳಿಲ್ಲ. ಪಕ್ಷದ ಹೈಕಮಾಂಡ್‌ ಹೇಳಿದಂತೆ ನಾವೆಲ್ಲ ಕೇಳುತ್ತೇವೆ. ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ಮಾತುಕತೆ ನಮ್ಮ ಮುಂದೆ ಆಗಿಲ್ಲ. ಒಂದು ವೇಳೆ ಮಾತುಕತೆ ನಡೆದಿದ್ದರೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ನಮ್ಮ ನಾಯಕರೇ. ಪರ, ವಿರೋಧ, ಬಣ ಗುಂಪುಗಳಿಲ್ಲ. ಇಲ್ಲಿ ಯಾರದ್ದು ವೈಯಕ್ತಿಕ ನಿರ್ಧಾರ ಅಂತಿಮವಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರ ಅಂತಿಮ. ಸಿಎಂ ಬದಲಾವಣೆ ವಿಚಾರವಾಗಿ ನಮಗಿಂತ ಹೆಚ್ಚು ವಿರೋಧ ಪಕ್ಷದವರೇ ಚರ್ಚೆ ಮಾಡುತ್ತಾರೆ. ಈ ರೀತಿಯ ಗೊಂದಲಗಳಿಗೆ ತೆರೆ ಎಳೆಯಿರಿ ಎಂಬ ಉದ್ದೇಶದಿಂದ ಶಾಸಕರು ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಶಾಸಕರ ಸಂಖ್ಯೆ ಆಧಾರದ ಮೇಲೆ ಏನು ನಿರ್ಧಾರ ಆಗಲ್ಲ. ಪಕ್ಷದ ಸಂಘಟನೆ ದೃಷ್ಟಿಯಿಂದ ಅವಕಾಶಗಳು ಸಿಗಲಿದೆ. ಊಟಕ್ಕೆ ಸೇರುವುದು ಸಾಮಾನ್ಯ, ಇದಕ್ಕೆ ಹೆಚ್ಚಿನ ವಿಶೇಷತೆ ಇಲ್ಲ. ನಮ್ಮಲ್ಲಿ ಗೊಂದಲ ಇಲ್ಲ, ಗೊಂದಲ ಸೃಷ್ಟಿಸುತ್ತಿರುವುದು ವಿರೋಧ ಪಕ್ಷ. ಗೊಂದಲಗಳಿಗೆ ತೆರೆ ಎಳೆಯುವಂತೆ ಕೇಳಿಕೊಂಡು ದೆಹಲಿಗೆ ಹೋಗಿದ್ದಾರೆ ಎಂದು ತಿಳಿಸಿದರು.