ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ವಿಶೇಷ ಅನುದಾನ ನೀಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಖಾಲಿ ಚೊಂಬು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ವಿಶೇಷ ಅನುದಾನ ನೀಡದೆ ಅನ್ಯಾಯ ಮಾಡಿದೆ. ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಿಂದ ಚುನಾಯಿತರಾಗಿರುವ ಬಿಜೆಪಿ ಮತ್ತು ಜೆಡಿಎಸ್ ಸಂಸದರು ಹಾಗೂ ಐವರು ಕೇಂದ್ರ ಸಚಿವರು ಕರ್ನಾಟಕ ರಾಜ್ಯಕ್ಕೆ ನಿರೀಕ್ಷಿತ ಅನುದಾನ ತರವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕ ಪ್ರತಿನಿಧಿಸುವ ರಾಜ್ಯಸಭೆ ಸಂಸದೆ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರಾಜ್ಯಕ್ಕೆ ಯಾವುದೇ ನೂತನ ಕೇಂದ್ರೀಯ ಯೋಜನೆ, ನೀರಾವರಿ, ರಸ್ತೆ, ರೈಲ್ವೆ, ಇನ್ನಿತರೆಗಳ ವಿಶೇಷ ಅನುದಾನ ನೀಡದೇ ಮಲತಾಯಿ ಧೋರಣೆ ಅನುಸರಿಸಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಬಜೆಟ್ ಪೂರ್ವದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸಮಸ್ಯೆಗೆ ಸ್ಪಂದಿಸಲು ಮನವಿ ಮಾಡಿದ್ದರು. ಆದರೂ ಭದ್ರಾ ಮೇಲ್ದಂಡೆ, ಮೇಕೆದಾಟು ನೀರಾವರಿ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿಲ್ಲ. ಬಡವರು ಮತ್ತು ರೈತ ವಿರೋಧಿ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ದೂರಿದರು.ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಪಾವತಿಸುತ್ತಿರುವ ರಾಜ್ಯ ಕರ್ನಾಟಕ. ಆದರೂ ತಾರತಮ್ಯ ಮಾಡಲಾಗುತ್ತಿದೆ. ಬರ ಪರಿಹಾರ ಹಣ ನೀಡದೆ ವಿಳಂಬ ಮಾಡಿದಾಗ ಪರಿಹಾರ ಪಡೆಯಲು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕಾಯಿತು, ನ್ಯಾಯಾಲಯ ಛಿಮಾರಿ ಹಾಕಿದ ಬಳಿಕ ಇದೀಗ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುದಾನ ಹಂಚುವಲ್ಲಿ ರಾಜ್ಯದ ಜನತೆಯನ್ನು ಸಂಪೂರ್ಣ ವಂಚಿಸಿದೆ ಎಂದು ಆಪಾದಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಎಸ್ಸಿ, ಎಸ್ಟಿ ವಿಭಾಗದ ಅಧ್ಯಕ್ಷ ಎಂ.ಎನ್.ಶ್ರೀಧರ್, ಮಹಿಳಾ ಘಟಕ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಹಾಲಹಳ್ಳಿ ರುದ್ರಪ್ಪ, ಚಿಕ್ಕಬಳ್ಳಿ ಕೃಷ್ಣ, ಶಿವನಂಜು, ಸಿ.ಆರ್.ರಮೇಶ್, ಮಾಧ್ಯಮ ವಕ್ತಾರ ಟಿ.ಎಲ್.ಕೃಷ್ಣೇಗೌಡ, ಮೂಡಾ ಅಧ್ಯಕ್ಷ ನಹಿಂ, ಚಿಕ್ಕ ಮಂಡ್ಯ ಆನಂದ, ಸುಂಡಳ್ಳಿ ಮಂಜುನಾಥ್, ದೀಪಕ್, ಹರೀಶ್ ಕುಮಾರ್, ಬಸವರಾಜು, ಕರವೇ ಜಯರಾಂ ಸೇರಿದಂತೆ ಹಲವರು ಭಾಗವಹಿಸಿದ್ದರು.