ಲೋಕಸಭೆ ಕ್ಷೇತ್ರ ವಿಂಗಡಣೆ ದಕ್ಷಿಣಕ್ಕೆ ಅನ್ಯಾಯ ಆಗಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

| N/A | Published : Mar 10 2025, 12:17 AM IST / Updated: Mar 10 2025, 09:40 AM IST

Union Minister Pralhad Joshi (Photo/PIB)
ಲೋಕಸಭೆ ಕ್ಷೇತ್ರ ವಿಂಗಡಣೆ ದಕ್ಷಿಣಕ್ಕೆ ಅನ್ಯಾಯ ಆಗಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಕ್ಷೇತ್ರಗಳ ವಿಂಗಡಣೆಯಲ್ಲಿ ಯಾವುದೇ ಕಾರಣಕ್ಕೂ ದಕ್ಷಿಣ ಭಾರತಕ್ಕೆ ಅನ್ಯಾಯ ಆಗುವುದಿಲ್ಲ. ಕಾಂಗ್ರೆಸ್ ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಅಷ್ಟೇ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.

 ಹುಬ್ಬಳ್ಳಿ : ಲೋಕಸಭೆ ಕ್ಷೇತ್ರಗಳ ವಿಂಗಡಣೆಯಲ್ಲಿ ಯಾವುದೇ ಕಾರಣಕ್ಕೂ ದಕ್ಷಿಣ ಭಾರತಕ್ಕೆ ಅನ್ಯಾಯ ಆಗುವುದಿಲ್ಲ. ಕಾಂಗ್ರೆಸ್ ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಅಷ್ಟೇ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸಿಗರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹೀಗೆ ಏನೆಲ್ಲಾ ಹಬ್ಬಿಸುತ್ತಿದ್ದಾರೆ. ಇದು ಸರಿಯಲ್ಲ. ಕ್ಷೇತ್ರ ವಿಂಗಡಣೆ ಕೈಗೊಂಡಲ್ಲಿ ದಕ್ಷಿಣ ಭಾರತದಲ್ಲಿ ಸಂಖ್ಯೆ ಕಡಿಮೆ ಆಗುವುದಿಲ್ಲ ಎಂಬುದನ್ನು ಕೇಂದ್ರ ಗೃಹ ಸಚಿವರೂ ಹೇಳಿದ್ದಾರೆ. ನಾನೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ದಕ್ಷಿಣ ಭಾರತಕ್ಕೆ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಸಚಿವ ಜೋಶಿ ಭರವಸೆ ನೀಡಿದರು.

ಕರ್ನಾಟಕ, ತೆಲಂಗಾಣ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿ ಎಂಪಿಗಳ ಸಂಖ್ಯೆ ಸಹ ದೊಡ್ಡದಿದೆ. ಬರೀ ಕಾಂಗ್ರೆಸ್ ಅಷ್ಟೇ ಇಲ್ಲ. ನಮಗೂ ಜವಾಬ್ದಾರಿ, ಕಾಳಜಿ ಅನ್ನೋದಿದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು. ಕ್ಷೇತ್ರ ವಿಂಗಡಣೆ ಸಂಸತ್ ಮುಂದೆ ಬಂದು ಚರ್ಚೆಯಾಗಬೇಕು, ಡಿ-ಲಿಮಿಟೇಶನ್ ಕಮಿಶನ್‌ಗೆ ಶಿಫಾರಸು ಆಗಬೇಕು, ಹೀಗೆ ಅದರದ್ದೇ ಆದ ನೀತಿ-ನಿಯಮಗಳಿವೆ. ಕಾಂಗ್ರೆಸಿಗರು ಅದೆಲ್ಲ ಗೊತ್ತಿಲ್ಲದವರಂತೆ ಮಾತನಾಡುವುದು ಸರಿಯಲ್ಲ ಎಂದರು.ಗ್ಯಾರಂಟಿ ಜಾರಿ ಮುನ್ನ ಚರ್ಚೆ:

ತೆಲಂಗಾಣ ಸರ್ಕಾರದಲ್ಲಿ ದುಡ್ಡಿಲ್ಲ. ಹಾಗಾಗಿ, ಜಾರಿಗೂ ಮೊದಲು ಚರ್ಚೆಯಾಗಬೇಕು ಎಂದು ತೆಲಂಗಾಣ ಸಿಎಂ ಹೇಳಿದ್ದಾರೆ. ಇನ್ನು ತಮಿಳುನಾಡು ಸ್ಟಾಲಿನ್ ಸರ್ಕಾರ ಕಡುಭ್ರಷ್ಟವಾಗಿದೆ. ಇದನ್ನೆಲ್ಲ ಮುಚ್ಚಿಕೊಳ್ಳಲು ಕ್ಷೇತ್ರ ವಿಂಗಡಣೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಜೋಶಿ ಆರೋಪಿಸಿದರು.ಇಂದಿಗೂ ಸಿಎಂ, ಡಿಸಿಎಂ ಒಗ್ಗಟ್ಟಾಗಿಲ್ಲ:

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಇಬ್ಬರೂ ಒಗ್ಗಟ್ಟಾಗದಿದ್ದರೆ ಮುಂದೆ ಕಷ್ಟ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯಿಂದಲೇ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಒಗ್ಗಟ್ಟಾಗಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.ಓರ್ವ ರಾಷ್ಟ್ರೀಯ ಅಧ್ಯಕ್ಷರು ಈ ರೀತಿಯ ಮಾತುಗಳನ್ನು ಹೇಳಿದ್ದಾರೆ ಎಂದರೆ ಅವರಿಬ್ಬರಲ್ಲಿ ಒಗ್ಗಟ್ಟಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಹಾಗೂ ಆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ. ಸಾಕಷ್ಟು ಒಳಜಗಳ ನಡೆಯುತ್ತಿವೆ ಎಂಬುದನ್ನು ಅದೇ ಪಕ್ಷದ ನಾಯಕರೆ ಒಪ್ಪಿಕೊಂಡಿದ್ದಾರೆ ಎಂದರು.