ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸವಾಲು ಮತ್ತು ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಸಂವಿಧಾನ ಒಂದೇ ದಾರಿ ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನದ ಅರಿವು ಅಗತ್ಯವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ತಿಳಿಸಿದರು.ಸಂವಿಧಾನ ಓದು ಅಭಿಯಾನ-ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳು ಚಾಮರಾಜನಗರ ಜಿಲ್ಲೆ, ಜಂಟಿಯಾಗಿ ನಗರದ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನದ ಎರಡು ದಿನನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಯುತ ಸಮಾಜದೆಡೆಗೆ ಮುನ್ನಡೆಯಲು ನಮಗುಳಿದಿರುವ ಏಕೈಕ ಹದಿಯಾಗಿರುವ ಸಂವಿಧಾನದ ಪರವಾದ ಧ್ವನಿ ಮೊಳಗಿದಾಗ ಮಾತ್ರ ಸಮಾನತೆ ಮತ್ತು ಭ್ರಾತೃತ್ವ ಉಳಿಸಲು ಸಾಧ್ಯ, ಕ್ಲಿಷ್ಟಕರ ಸನ್ನಿವೇಶಗಳಿಗೆ ಸರಿಯಾದ ನಿರ್ಧಾರಗಳನ್ನು ತಳೆಯಲು ಸಂವಿಧಾನದ ಅರಿವು ನಮಗೆ ಬೇಕಾಗಿದೆ, ಈ ನಿಟ್ಟಿನಲ್ಲಿ ೨೦೧೮ ರಿಂದ ಸಂವಿಧಾನದ ಓದು ಅಧ್ಯಯನ ಶಿಬಿರವನ್ನು ಪ್ರತಿ ಜಿಲ್ಲೆಯಲ್ಲೂ ಹಮ್ಮಿಕೊಳ್ಳಲಾಗುತ್ತದೆ. ಈ ಜಿಲ್ಲೆಯಲ್ಲಿ ೧೧ನೇ ಕಾರ್ಯಕ್ರಮವಾಗಿದೆ ಪ್ರತಿ ಜಿಲ್ಲೆಯಲ್ಲೂ ಸಂವಿಧಾನದ ಮೂಲ ಆಶಯಗಳ ಬಗ್ಗೆ ಗ್ರಾಮೀಣ ಮತ್ತು ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವುದೇ ಈ ಶಿಬಿರದ ಮೂಲ ಉದ್ದೇಶ ಎಂದರು.ಸ್ವಾತಂತ್ರ್ಯ ಭಾರತದ ಆಶಯದಂತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಜಾತ್ಯಾತೀತತೆ, ಒಕ್ಕೂಟ ವ್ಯವಸ್ಥೆ, ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳಿಗೆ ಭದ್ರ ಬುನಾದಿಯಾಗಿದ್ದ ನಮ್ಮ ಸಂವಿಧಾನದ ಆಶಯಗಳನ್ನೇ ಬುಡ ಮೇಲು ಮಾಡುತ್ತಿರುವ ಈ ಸಂದರ್ಭದಲ್ಲಿ, ಸಂವಿಧಾನದ ಅರಿವು ಅತ್ಯಗತ್ಯವಾಗಿ ಜನ ಸಾಮಾನ್ಯರಿಗೆ ತಿಳಿಯುವುದು ತುರ್ತು ಅಗತ್ಯವಾಗಿದೆ ಎಂದರು.ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಧರ್ಮ ಗ್ರಂಥವಿದೆ, ಅವು ಧರ್ಮಕ್ಕೆ ಸೀಮಿತವಾಗಿದೆ. ಅದರೆ ಜಾತ್ಯಾತೀತವಾಗಿ ಧರ್ಮಾತೀತವಾಗಿ ಎಲ್ಲರಿಗೂ ಬೇಕಾದ ಮಹಾನ್ ಗ್ರಂಥ ಸಂವಿಧಾನ, ಅನಕ್ಷರಸ್ಥರಿಗೂ ಸಹ ಕಾನೂನಿನ ಅರಿವಿನ ಜೊತೆಗೆ, ಸಂವಿಧಾನ ಆಶಯಗಳನ್ನು ಅವರಿಗೂ ಅರಿವು ಮೂಡಿಸುವ ಮೂಲಕ ಅವರನ್ನು ಕಾನೂನು ಅಕ್ಷರಸ್ಥರನ್ನಾಗಿ ಮಾಡಬೇಕಿದೆ ಎಂದರು. ಸಂವಿಧಾನ ಜಾರಿಯಾಗಿ ೭೫ ವರ್ಷವಾಗಿದೆ, ಹಲವು ಸಾಧನೆ ಮಾಡಿದ್ದೇವೆ ಆದರೂ ಇನ್ನೂ ಸಂವಿಧಾನದ ಮೂಲ ಆಶಯಗಳು ಸಾಮಾನ್ಯರಿಗೆ ಅರ್ಥವಾಗಿಲ್ಲ, ಆದ್ದರಿಂದ ಈ ಅಧ್ಯಯನ ಶಿಬಿರ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಎರಡು ದಿನದ ಕಾರ್ಯಕ್ರಮದಲ್ಲಿ ಹಲವು ನುರಿತ ಸಂಪನ್ಮೂಲ ವ್ಯಕ್ತಿಗಳಿದ್ದಾರೆ ಅವರು ಮಂಡಿಸುವ ವಿಚಾರಗಳನ್ನು ತಿಳಿದುಕೊಂಡು ಮನೆ ಮನೆಗೂ ಸಂವಿಧಾನದ ಅರಿವು ಮೂಡಿಸಿ ಎಂದರು.ಅತಿಥಿಗಳಾಗಿದ್ದ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರವಾದ) ಸಂಚಾಲಕರಾದ ಮಾವಳ್ಳಿ ಶಂಕರ್ ಮಾತನಾಡಿ, ಸಂವಿಧಾನ ಆಶಯಗಳ ಬಗ್ಗೆ ಮಾನಸಿಕ ಜಾಗೃತಿ ಮೂಡಿಸಬೇಕಿದೆ ಎಂದರು.
ಮೀಸಲಾತಿ ಎನ್ನುವುದು ಪ್ರಾತಿನಿದ್ಯ, ಇದು ಎಸ್ಸಿಗಳಿಗೆ ಮಾತ್ರ ಸೀಮಿತ ಎನ್ನುವ ಪೂರ್ವಾಗ್ರಹ ಪೀಡಿತ ಮನಸ್ಸುಗಳು ಇವೆ. ಇದನ್ನು ಹೋಗಲಾಡಿಸಿ ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ಮೀಸಲಾತಿ ಕೊಟ್ಟಿದ್ದಾರೆ ಎಂಬ ಅರಿವು ಮೂಡಿಸಬೇಕಾಗಿದೆ ಎಂದರು.ಸಂವಿಧಾನದ ಆಶಯಗಳಿಗೆ ಅನೇಕ ಬಾರಿ ದಾಳಿಯಾಗಿವೆ, ಸಂವಿಧಾನವನ್ನು ವಿಮರ್ಶಿಸಬೇಕು, ಪರಾಮಿರ್ಶಿಸಬೇಕು, ಸಂವಿಧಾನವನ್ನು ಬದಲಿಸಬೇಕು ಎನ್ನುವ ಮಾತುಗಳು ಎಂದಿಗೂ ಸಲ್ಲದು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದವರಿಗೆ, ಬಡವರಿಗೆ, ಹಾಗೂ ಶೋಷಿತ ವರ್ಗಕ್ಕೆ ಸಮಾನತೆಯನ್ನು ಒದಗಿಸಿದ್ದು ಸಂವಿಧಾನ ಎಂದರು.
ಪ್ರೊ. ಜಿ.ಎಸ್. ಜಯದೇವ್ ಮಾತನಾಡಿ, ಬಹು ವ್ಯಕ್ತಿತ್ವಕ್ಕೆ ಇಂದು ಧಕ್ಕೆಯಾಗುತ್ತಿದೆ. ಆಳುವ ಸರ್ಕಾರಗಳು ಒಂದು ಧರ್ಮಕ್ಕೆ ಸೀಮಿತವಾಗಬಾರದು, ಸಂವಿಧಾನದ ಮೂಲ ಆಶಯಗಳು ಪೂರ್ಣ ಜಾರಿಯಾಗಬೇಕು ಎಂದರು.ಅಧ್ಯಕ್ಷತೆಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ವಹಿಸಿದ್ದರು. ಸಂವಿಧಾನ ಓದು ಅಧ್ಯಯನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮೊದಲನೇ ದಿನ ಸಂವಿಧಾನದ ರಚನೆ ಮತ್ತು ಮೂಲತತ್ವಗಳ ಕುರಿತು, ಗೌ. ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ್, ಸಂವಿಧಾನ : ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆ -ಗೋವಿಂದಪ್ಪ ಪಾವಗಡ, ಸಂವಿಧಾನ ಮತ್ತು ಮಹಿಳೆ- ವಿಷಯಗಳ ಕುರಿತು ಶಾಂತಿ ನಾಗಲಾಪುರ ಮಾತನಾಡಿದರು.
ಕೇಂದ್ರ ಸಂಯೋಜಕರು ಬಿ. ರಾಜಶೇಖರಮೂರ್ತಿ ಎಚ್.ಎನ್. ಹರಿ, ಮಹದೇವ ಶಂಕನಪುರ, ಸಿ.ಎಂ. ನರಸಿಂಹಮೂರ್ತಿ, ಎಸ್. ಪಿ, ಮಹೇಶ್, ಮುನಿರಾಜು, ರವಿ ಮೌರ್ಯ, ಯೋಗಾನಂದ್, ಗೋವಿಂದರಾಜು, ಸಿದ್ದರಾಜು, ಜಯಕುಮಾರ್, ವಾಸು, ಶಾಂತಿ ನಾಗಲಾಪುರ ಇತರರು ಉಪಸ್ಥಿತರಿದ್ದರು.