ಸಂವಿಧಾನದ ಆಶಯದಂತೆ ನಡೆದರೇ ಸದೃಢ ಭಾರತ ನಿರ್ಮಾಣ: ಜಿಲ್ಲಾಧಿಕಾರಿ ವಿದ್ಯಾಕುಮಾರಿ

| Published : Feb 19 2024, 01:34 AM IST

ಸಾರಾಂಶ

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಕ್ರಿಕೆಟ್ ಪಂದ್ಯಾಟ ಹಾಗೂ ಬೈಕ್ ರ್‍ಯಾಲಿ ನಡೆಯಿತು. ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಸಂವಿಧಾನದ ಬಗ್ಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿದೇಶದ ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ನಾಗರಿಕರು ನಡೆದುಕೊಂಡು, ಅದರ ಶ್ರೇಷ್ಠತೆಯನ್ನು ಎತ್ತಿ ಹಿಡಿದಾಗ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಅವರು ಹೇಳಿದರು.ಅವರು ಭಾನುವಾರ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಆಯೋಜಿಸಿದ ಕ್ರಿಕೆಟ್ ಪಂದ್ಯಾಟ ಹಾಗೂ ಬೈಕ್ ರ್‍ಯಾಲಿ ಉದ್ಘಾಟಿಸಿ ಮಾತನಾಡುತ್ತಿದ್ದರು

ಸಂವಿಧಾನ ರಚನೆಗೊಂಡು 75 ವರ್ಷ ತುಂಬಿದ ಹಿನ್ನೆಲೆ ಇಡೀ ರಾಜ್ಯದ್ಯಂತ ಹೆಮ್ಮೆಯಿಂದ ನಮ್ಮ ಸಂವಿಧಾನದ ಮಹತ್ವ ಸಾರಲು ಸಂಭ್ರಮ ಸಡಗರ ದೊಂದಿಗೆ ಆಂದೋಲದ ರೀತಿಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜಾಗೃತಿ ನಡೆಯುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಉಪಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಎಸ್.ಟಿ., ಪೌರಾಯುಕ್ತ ರಾಯಪ್ಪ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಇದ್ದರು.ಪೌರಕಾರ್ಮಿಕರಿಗೆ ಜಯ: ಇದೇ ಸಂದರ್ಭದಲ್ಲಿ ನಡೆದ ನಗರದ ಬೀಡಿನಗುಡ್ಡೆ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಪೌರಕಾರ್ಮಿಕರ ತಂಡ ಟ್ರೋಫಿಯನ್ನು ಗೆದ್ದುಕೊಂಡಿತು. ಪತ್ರಕರ್ತರ ತಂಡ ರನ್ನರ್ ಪ್ರಶಸ್ತಿಯನ್ನು ಪಡೆಯಿತು.

ಈ ಪಂದ್ಯಾಟದಲ್ಲಿ ಡಿಸಿ ಇಲೆವೆನ್, ಎಸ್‌ಪಿ ಇಲೆವೆನ್, ವಕೀಲರು, ಅರಣ್ಯ ಇಲಾಖೆ, ಸಿಇಓ ಇಲೆವೆನ್, ಅಬಕಾರಿ, ಪತ್ರಕರ್ತರು, ಪೌರ ಕಾರ್ಮಿಕರು ಸೇರಿದಂತೆ ಒಟ್ಟು 8 ತಂಡಗಳು ಭಾಗವಹಿಸಿದ್ದವು.

ಉಡುಪಿ ಪತ್ರಕರ್ತರ ತಂಡವು ಮೊದಲ ಸುತ್ತಿನಲ್ಲಿ ಎಸ್ಪಿ ಇಲೆವೆನ್ ತಂಡವನ್ನು ಮಣಿಸಿ, ಬಳಿಕ ಸೆಮಿ ಫೈನಲ್ ನಲ್ಲಿ ಡಿಸಿ ಇಲೆವೆನ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯಾಟದಲ್ಲಿ ಪೌರಕಾರ್ಮಿಕರ ತಂಡವು ಪತ್ರಕರ್ತರ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಾಗೂ ಆಲ್ ರೌಂಡರ್ ಪ್ರಶಸ್ತಿಯನ್ನು ಪೌರಕಾರ್ಮಿಕರ ತಂಡದ ನಾಗಾರ್ಜುನ ಮತ್ತು ಉತ್ತಮ ದಾಂಡಿಗ ಪ್ರಶಸ್ತಿಯನ್ನು ಪತ್ರಕರ್ತರ ತಂಡದ ಪ್ರತೀಶ್ ಪಡೆದುಕೊಂಡರು.