ಸಾರಾಂಶ
- ಆಗ ತಿರಸ್ಕಾರ ಮಾಡಿದವರು ಈಗ ಮುಂದೆ ಬಂದಿದ್ಯಾಕೆ?
- ಕೆಕೆಆರ್‌ಡಿಬಿಯಲ್ಲಿ ಮಹತ್ವದ ಚರ್ಚೆ ಇಂದು- ಶಾಸಕ ರಾಘವೇಂದ್ರ ಹಿಟ್ನಾಳ ಲೆಟರ್ ಸುತ್ತಮುತ್ತ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಹಲವಾರು ಕೈಗಾರಿಕೆಗಳು ಮತ್ತು ತೋಟಗಾರಿಕಾ ಬೆಳೆಗಳ ಕ್ರಾಂತಿಯ ಮೂಲಕ ತನ್ನದೇ ಆದ ವಾಣಿಜ್ಯ ಬೆಳವಣಿಗೆಯಲ್ಲಿ ಮುನ್ನುಗ್ಗುತ್ತಿರುವ ಜಿಲ್ಲೆಯಲ್ಲಿ ಪ್ರತ್ಯೇಕ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದು ವಿವಾದಕ್ಕೆ ಸಿಲುಕಿದೆ. ಅಷ್ಟೇ ಅಲ್ಲ, ಉಡಾನ್ ಯೋಜನೆಗೆ ಸಹಕಾರ ನೀಡಲು ನಿರಾಕರಿಸಿದ್ದ ಬಲ್ಡೋಟಾ ಕಂಪನಿ ಈಗ ಸಹಕಾರ ನೀಡಲು ಮುಂದಾಗಿದ್ದು ಅಚ್ಚರಿಗೆ ಕಾರಣವಾಗಿದೆ.ಕೊಪ್ಪಳ ಬಳಿ ಎಂಎಸ್‌ಪಿಎಲ್ ಕಂಪನಿ ಬೃಹತ್ ಸ್ಟೀಲ್ ಪ್ಲ್ಯಾಂಟ್ ಹಾಕಲು ಮುಂದಾಗಿದ್ದು, ಇದಕ್ಕೆ ಜನಪ್ರತಿನಿಧಿಗಳ ಸಹಕಾರ ಪಡೆಯಲು ಬಲ್ಡೋಟಾ ಕಂಪನಿಯ ವಿಮಾನ ತಂಗುದಾಣದಲ್ಲಿ ಉಡಾನ್ ಯೋಜನೆಯನ್ನು ಜಾರಿ ಮಾಡಲು ಸಹಕಾರ ನೀಡಲು ಮುಂದಾಗಿದೆ. ಹೀಗಾಗಿ, ಕೊಪ್ಪಳ ಬಳಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಈ ಹಿಂದಿನ ಸರ್ಕಾರದ ಪ್ರಸ್ತಾಪಕ್ಕೆ ಕೆಕೆಆರ್‌ಡಿಬಿ ಸಭೆಯಲ್ಲಿ ತಣ್ಣೀರು ಹಾಕುವ ಸಾಧ್ಯತೆ ಇದೆ.
ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ವೇಳೆಯಲ್ಲಿ ಕೊಪ್ಪಳ ಬಳಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆಗೆ ಕೆಕೆಆರ್‌ಡಿಬಿಯಲ್ಲಿ ₹39 ಕೋಟಿಯನ್ನು ಭೂ ಸ್ವಾಧೀನಕ್ಕೆ ನೀಡಿ ಆದೇಶಿಸಿದ್ದರು. ಈಗ ಅನುದಾನವನ್ನು ಬೇರೆ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಮುಂದಾಗಿದ್ದಾರೆ. ಕೊಪ್ಪಳ ವಿಮಾನ ನಿಲ್ದಾಣದ ಭೂಮಿ ಸ್ವಾಧೀನಕ್ಕೆ ಕೆಕೆಆರ್‌ಡಿಬಿಯಲ್ಲಿ ನೀಡಲಾಗಿದ್ದ ₹39 ಕೋಟಿ ಅನುದಾನ ಹಿಂದೆ ಪಡೆದು, ಬೇರೆ ಕಾಮಗಾರಿಗೆ ನೀಡುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಪತ್ರ ನೀಡಿದ್ದಾರೆ. ಹೀಗಾಗಿ, ಈ ವಿಷಯ ಜು. 1ರಂದು ಕಲಬುರಗಿಯಲ್ಲಿ ನಡೆಯುವ ಕೆಕೆಆರ್‌ಡಿಬಿ ಸಭೆಯಲ್ಲಿ ಚರ್ಚೆಗೆ ಬರಲಿದೆ. ಇದಕ್ಕೆ ಸಮ್ಮತಿ ಸಿಗುತ್ತಾ ಎನ್ನುವುದು ಸದ್ಯದ ಕುತೂಹಲ.ಹಾಗೊಂದು ವೇಳೆ ಇದಕ್ಕೆ ಸಮ್ಮತಿ ನೀಡಿದ್ದೇ ಆದರೆ ಕೊಪ್ಪಳ ಬಳಿ ನೂತನವಾಗಿ ವಿಮಾನ ನಿಲ್ದಾಣ ನಿರ್ಮಾಣ ಕನಸು ನುಚ್ಚುನೂರಾಗಲಿದೆ.
ಎಂಎಸ್ ಪಿಎಲ್ ಹುನ್ನಾರ:ಕೊಪ್ಪಳ ಬಳಿ ಬೃಹತ್ ಸ್ಟೀಲ್ ಪ್ಲ್ಯಾಂಟ್ ಹಾಕಲು ಮುಂದಾಗಿರುವ ಎಂಎಸ್‌ಪಿಎಲ್ ಕಂಪನಿ ಇದಕ್ಕೆ ಜನಪ್ರತನಿಧಿಗಳ ಸಹಕಾರ ಪಡೆಯಲು ಬಲ್ಡೋಟಾ ವಿಮಾನ ತಂಗುದಾಣದಲ್ಲಿಯೇ ಉಡಾನ್ ಯೋಜನೆಯನ್ನು ಜಾರಿ ಮಾಡುವುದಕ್ಕೆ ಸಹಕಾರ ನೀಡಲು ಮುಂದಾಗಿದ್ದು, ಈ ಮೂಲಕ ಕೊಪ್ಪಳ ಬಳಿ ನೂತನ ವಿಮಾನ ನಿಲ್ದಾಣಕ್ಕೂ ಬ್ರೇಕ್ ಹಾಕಲಿದೆ. ಆಗ ಬಲ್ಡೋಟಾ ವಿಮಾನ ನಿಲ್ದಾಣವನ್ನೇ ಖಾಸಗಿಯಾಗಿ ಮೇಲ್ದರ್ಜೇಗೇರಿಸಲು ಸರ್ಕಾರದ ಅನುದಾನ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಈ ಮೂಲಕ ಒಂದೆ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಹುನ್ನಾರು ಎಂಎಸ್‌ಪಿಎಲ್ ಕಂಪನಿಯದ್ದಾಗಿದೆ ಎಂದು ಹೇಳಲಾಗುತ್ತದೆ.ಇದರಿಂದಾಗಿ ಕೊಪ್ಪಳ ಬಳಿ ತಲೆ ಎತ್ತಬೇಕಾಗಿದ್ದ ನೂತನ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯದ ಭೂಸ್ವಾಧೀನ ಪ್ರಕ್ರಿಯೆಗೆ ನಿಗದಿಯಾಗಿದ್ದ ಅನುದಾನ ಬೇರೆ ಕಾಮಗಾರಿಗೆ ಬಳಕೆಯಾಗುವ ಸಾಧ್ಯತೆ ಇದೆ. ಹಾಗೊಂದು ವೇಳೆ ಆದರೆ ವಿಮಾನ ನಿಲ್ದಾಣ ಮಾಡುವುದಕ್ಕೆ ಇದ್ದ ಪ್ರಸ್ತಾವನೆ ಮತ್ತು ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳ್ಳುವುದು ಗ್ಯಾರಂಟಿಯಾಗುತ್ತದೆ.ವಿಮಾನ ನಿಲ್ದಾಣಕ್ಕೆ ನಿಗದಿಯಾಗಿರುವ ಅನುದಾನವನ್ನು ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಕೊಡಲಾಗಿದೆ. ಅದನ್ನು ಈಗ ಬೇರೆ ಕಾಮಗಾರಿಗೆ ವರ್ಗಾಯಿಸುವುದು ಸರಿಯಲ್ಲ. ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲು ಬಳಕೆ ಮಾಡಿಕೊಂಡರೇ ಸೂಕ್ತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಭೂ ಸ್ವಾಧೀನಕ್ಕೆ ಕಳೆದ ವರ್ಷದಲ್ಲಿ ನಿಗದಿಯಾಗಿದ್ದ ಅನುದಾನವನ್ನು ಬೇರೆ ಕಾಮಗಾರಿಗೆ ವರ್ಗಾಯಿಸುವಂತೆ ಕೋರಿದ್ದು ನಿಜ. ಅನುದಾನ ಲ್ಯಾಪ್ಸ್ ಆಗಬಾರದು ಎಂದು ಲೆಟರ್ ನೀಡಿದ್ದೇನೆ, ಭೂಸ್ವಾಧೀನಕ್ಕೆ ಈ ವರ್ಷದಲ್ಲಿ ಅನುದಾನ ನಿಗದಿ ಮಾಡಿ ಎಂದು ಕೋರಿದ್ದೇನೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.