ಜಿಲ್ಲೆಯಲ್ಲಿ ಪಾಲಿಲ್ಯಾಕ್ಟಿಕ್ ಆಮ್ಲ್‌ ಘಟಕ ನಿರ್ಮಾಣ

| Published : Feb 14 2025, 12:30 AM IST

ಸಾರಾಂಶ

ಪ್ಲಾಸ್ಟಿಕ್‌ಗೆ ಪರ್ಯಾಯವಾದ ಅತ್ಯುತ್ತಮ ಗುಣಮಟ್ಟದ ಪಾಲಿಲ್ಯಾಕ್ಟಿಕ್ ಆಮ್ಲ ತಯಾರಿಸುವ ವಿನೂತನ ಘಟಕವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಾರಂಭಿಸಲು ನಿರಾಣಿ ಶುಗರ್ಸ್‌ ಒಪ್ಪಿಗೆ ಸೂಚಿಸಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರೈತರು ಬೆಳೆದ ಕಬ್ಬು, ಮೆಕ್ಕೆಜೋಳ, ಭತ್ತ, ಗೋದಿ ಸ್ಟಾರ್ಷ್‌ ಮತ್ತು ನಿರುಪಯುಕ್ತ ಜೈವಿಕ ವಸ್ತುಗಳು ಹಾಗೂ ನವೀಕರಿಸಬಹುದಾದ ವಸ್ತುಗಳ ಮೂಲಕ ತಯಾರಿಸಬಹುದಾದ ಹಾಗೂ ಪ್ಲಾಸ್ಟಿಕ್‌ಗೆ ಪರ್ಯಾಯವಾದ ಅತ್ಯುತ್ತಮ ಗುಣಮಟ್ಟದ ಪಾಲಿಲ್ಯಾಕ್ಟಿಕ್ ಆಮ್ಲ ತಯಾರಿಸುವ ವಿನೂತನ ಘಟಕವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಾರಂಭಿಸಲು ನಿರಾಣಿ ಶುಗರ್ಸ್‌ ಒಪ್ಪಿಗೆ ಸೂಚಿಸಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿ ಮಾತನಾಡಿದ ನಿರಾಣಿ ಶುಗರ್ಸ್‌ ನಿರ್ದೇಶಕ ವಿಶಾಲ ನಿರಾಣಿ, ಇದು ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಮಹತ್ವದ ಪಾತ್ರ ವಹಿಸಲಿದೆ. ನಮ್ಮ ರೈತರು ಬೆಳೆದ ಬೆಳೆಯಿಂದ ಪರಿಸರ ಸ್ನೇಹಿ ಪರ್ಯಾಯ ಪ್ಲಾಸ್ಟಿಕ್ ತಯಾರಿಕೆಯು ಕೃಷಿಯ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ಬಲ ತುಂಬಲಿದೆ. ಯುರೋಪಿಯನ್ ಹಾಗೂ ಅಮೆರಿಕ ದೇಶಗಳಲ್ಲಿ ಜನಪ್ರಿಯವಾಗಿರುವ ಇದನ್ನು ಕರ್ನಾಟಕದ ಮೂಲಕ ಭಾರತದಲ್ಲಿ ಪರಿಚಯಿಸಲು ಹೆಮ್ಮೆ ಎನಿಸುತ್ತಿದೆ. ಇದು ಪರಿಸರ ಪ್ರೇಮಿಗಳಿಗೆ ಖುಷಿ ತರುವ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ನಿರಾಣಿ ಉದ್ಯಮ ಸಮೂಹವು ಸಕ್ಕರೆ ಹಾಗೂ ಎಥೆನಾಲ್ ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಅಗ್ರಗಣ್ಯ ಸಂಸ್ಥೆಯಾಗಿದೆ. ಜೈವಿಕ ಇಂಧನ ಹಾಗೂ ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪರಿಸರ ಸ್ನೇಹಿ ಹಾಗೂ ಜೈವಿಕ ಸಾಮಗ್ರಿಗಳ ಮೌಲ್ಯವರ್ಧನೆ, ತ್ಯಾಜ್ಯ ಸಂಸ್ಕರಣೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ ನಮ್ಮ ಸಂಸ್ಥೆಯಿಂದ ಈಗ ಉತ್ಕೃಷ್ಟ ಗುಣಮಟ್ಟದ ಪಾಲಿಲ್ಯಾಕ್ಟಿಕ್ ಆಮ್ಲ ನಿರ್ಮಾಣಕ್ಕೆ ತಿರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.

ನಿರಾಣಿ ಸಮೂಹದ ಈ ಮಹತ್ವದ ಹೂಡಿಕೆಯಿಂದ ಕರ್ನಾಟಕವು ಭವಿಷ್ಯದಲ್ಲಿ ಪಾಲಿ ಲ್ಯಾಕ್ಟಿಕ್ ಉತ್ಪಾದನೆಯಲ್ಲಿ ಪ್ರಾಮುಖ್ಯತೆ ಪಡೆಯಲಿದೆ. ಇದರಿಂದ ಕರ್ನಾಟಕದಲ್ಲಿ ಸಮೃದ್ಧ ಕೃಷಿ ಮತ್ತು ತ್ಯಾಜ್ಯ ವಸ್ತು ಬಳಸಿಕೊಂಡು ನವೋದ್ಯಮ ಪ್ರಾರಂಭಕ್ಕೆ ಮುನ್ನುಡಿ ಬರೆದಂತಾಗಿದೆ. ಪರಿಸರ ಸ್ನೇಹಿ ನೀತಿ ಅಳವಡಿಸಿಕೊಂಡು ಲಾಭದಾಯಕ ಉದ್ಯಮ ನಿರ್ವಹಣೆಯೊಂದಿಗೆ ನೈಸರ್ಗಿಕ ಹಾನಿಕಾರಕ ವಸ್ತುಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳನ್ನು ನಿರ್ಮಿಸಬಹುದು ಎಂದು ನಮ್ಮ ರಾಜ್ಯದ ಮೂಲಕ ಅತ್ಯುತ್ತಮ ಸಂದೇಶ ನೀಡಲು ಸಾಧ್ಯವಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರ ಹಾಗೂ ನಿರಾಣಿ ಶುಗರ್ಸ್‌ ನಡುವಿನ ಈ ಒಡಂಬಡಿಕೆಯು ಜೈವಿಕ ಹಾಗೂ ಪರಿಸರ ಸ್ನೇಹಿ ಉತ್ಪನಗಳ ನಿರ್ಮಾಣದಲ್ಲಿ ನವೋದ್ಯಮಕ್ಕೆ ಹೊಸ ಭಾಷ್ಯ ಬರೆಯಲಿದೆ. ಸರ್ಕಾರದ ಅಗತ್ಯ ಕಾರ್ಯಸೂಚಿಗಳು, ಅನುಮೋದನೆಗಳು ಹಾಗೂ ಪ್ರೋತ್ಸಾಹಕ ನೀತಿಗಳು ಈ ಕಾರ್ಯಕ್ಕೆ ಸಹಕಾರಿಯಾಗಿದ್ದು, ಎರಡು ಸಾವಿರ ಕೋಟಿ ರು. ಮೊತ್ತದ ಈ ಯೋಜನೆ 3-4 ವರ್ಷಗಳಲ್ಲಿ ಪೂರ್ಣಗೊಂಡು ಈ ಮೂಲಕ 800-1000 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಯೋಜನೆ ಜೊತೆಗೆ ಟ್ರ್ಯೂ ಆಲ್ಟ್ ಬಯೋ ಎನರ್ಜಿ ಹೊಸ ಯೋಜನೆಗಳು ಸೇರಿ ನಮ್ಮ ಸಮೂಹದಿಂದ ಇನ್ವೆಸ್ಟ್ ಕರ್ನಾಟಕದಲ್ಲಿ ಒಟ್ಟು ₹5 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತಿದೆ ಎಂದು ವಿಶಾಲ ನಿರಾಣಿ ತಿಳಿಸಿದ್ದಾರೆ.

ಏನಿದು ಪಾಲಿಲ್ಯಾಕ್ಟಿಕ್‌ ಆಮ್ಲ?

ಪಾಲಿಲ್ಯಾಕ್ಟಿಕ್ ಒಂದು ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುವಾಗಿದೆ. ಇದನ್ನು 3ಎ ಪ್ರಿಂಟಿಂಗ್, ಪ್ಯಾಕೇಜಿಂಗ್, ಸ್ಯೂಚರ್, ಇಂಪ್ಲಾಂಟ್ಸ್ ಸೇರಿದಂತೆ ವೈದ್ಯಕೀಯ ಉಪಕರಣಗಳ ತಯಾರಿಕೆ, ಪರಿಸರಸ್ನೇಹಿ ವಸ್ತ್ರಗಳು, ಕೃಷಿ ಉಪಯೋಗಿ ಬ್ಯಾಗ್, ಆಟೋಮೊಬೈಲ್ ಒಳಾಂಗಣ ಮತ್ತು ಜೈವಿಕ ನಿರುಪಯುಕ್ತ ಎಲೆಕ್ಟ್ರಾನಿಕ್ ಕೇಸಿಂಗ್‌ ತಯಾರಿಕೆಗೆ ಬಳಸಬಹುದಾಗಿದೆ.