ಸಾರಾಂಶ
ಹುಬ್ಬಳ್ಳಿ:ಯಾವುದೇ ರಂಗವಿರಲಿ, ಜೀವನವೇ ಇರಲಿ ಯಶಸ್ಸು ಕಾಣಬೇಕಾದರೆ ನಿರಂತರ ಪರಿಶ್ರಮ ಅತ್ಯವಶ್ಯ. ಕಷ್ಟಪಟ್ಟು ದುಡಿದಾಗಲೇ ಅದಕ್ಕೆ ತಕ್ಕದಾದ ಪ್ರತಿಫಲ ದೊರೆಯಲಿದೆ ಎಂಬ ಅರಿವು ಪ್ರತಿಯೊಬ್ಬರಲ್ಲಿ ಮೂಡಲಿ ಎಂದು ಅಂತಾರಾಷ್ಟ್ರೀಯ ಲೇಖಕಿ, ರಾಜ್ಯಸಭಾ ಸದಸ್ಯೆ ಡಾ. ಸುಧಾಮೂರ್ತಿ ಹೇಳಿದರು.
ಅವರು ಭಾನುವಾರ ಸಂಜೆ ಇಲ್ಲಿನ ಕಾಯಿನ್ ರಸ್ತೆಯಲ್ಲಿರುವ ಸಪ್ನ ಬುಕ್ ಹೌಸ್‌ನಲ್ಲಿ ಕನ್ನಡಪ್ರಭ ಪುರವಣಿ ಪ್ರಧಾನ ಸಂಪಾದಕ ಜೋಗಿ ಅವರೊಂದಿಗೆ ನಡೆದ ಮಾತು-ಮಂಥನ, ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಮನದಾಳದ ಮಾತುಗಳನ್ನು ಓದುಗರು, ಸಾಹಿತ್ಯಾಭಿಮಾನಿಗಳೊಂದಿಗೆ ಹಂಚಿಕೊಂಡರು.* ಒಬ್ಬ ಲೇಖಕ ನಿಜವಾದ ಲೇಖಕನಾಗಲು ಎಷ್ಟು ವರ್ಷಗಳು ಬೇಕು?
ಒಬ್ಬ ಲೇಖಕ ಒಂದು ಪುಸ್ತಕದಿಂದ ಪ್ರಖ್ಯಾತಿಯಾಗುವುದು ತುಂಬಾ ವಿರಳ. ನಾವು ಬರೆದ ಪುಸ್ತಕ, ಕಾದಂಬರಿ ಜನರ ಮನಸ್ಸಿನ ವರೆಗೆ ಹೋಗಿ ಹೆಸರು ಪಡೆಯಬೇಕಾದರೆ ಹಲವು ವರ್ಷಗಳೇ ಬೇಕು. ನಾನು ಬರೆದ ಮೊದಲ ಪುಸ್ತಕ 10 ಬಾರಿ ತಿರಸ್ಕೃತಗೊಂಡಿತ್ತು. ನಾನು ಛಲಬಿಡದೇ ಆಗಿರುವ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ಜನರ ಮುಂದೆ ಹೋದೆ. ಆಗ ಅದು ಜನರೊಂದಿಗೆ ಬೆರೆತು ಜನಮನ್ನಣೆ ಗಳಿಸಲು ಸಾಧ್ಯವಾಯಿತು. ಒಂದು ಬಾರಿ ನಮ್ಮ ಪುಸ್ತಕ ಜನರ ಹೃದಯ ಮುಟ್ಟಿದರೆ ಸಾಕು, ಆಗ ತಾನಾಗಿಯೇ ಪ್ರಖ್ಯಾತಿ ಹೊಂದಲಿದೆ ಎಂದರು.* ಸಂಸಾರ ಮತ್ತು ಬರವಣಿಗೆ ಎರಡಕ್ಕೂ ಹೇಗೆ ಸಮಯ ಮೀಸಲಿಡುವಿರಿ?
ನಾವು ಮೊದಲು ಸಮಯಕ್ಕೆ ತಕ್ಕಂತೆ ನಮ್ಮ ಜೀವನ ಶೈಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅವಶ್ಯಕ. ವಿವಾಹ, ಜನ್ಮದಿನದ ಸಮಾರಂಭಗಳಿಂದ ನಾನು ದೂರವಿರುತ್ತೇನೆ. ಇದಕ್ಕೆ ನೀಡುವ ವೇಳೆಯನ್ನೇ ನನ್ನ ಬರವಣಿಗೆ, ಓದಲು ಮೀಸಲಿಡುತ್ತೇನೆ. ಈ ನನ್ನ ಜೀವನ ಶೈಲಿಯು ಕೆಲವರಿಗೆ ಕಟುವಾಗಿ ಕಾಣಬಹುದು. ನಾನು ಉತ್ತರ ಕರ್ನಾಟಕದವಳು. ನನ್ನ ಮಾತುಗಳು ಖಂಡತುಂಡುಗಳೇ. ಕೆಲವರಿಗೆ ಇದು ನೇರವೆನಿಸಬಹುದು. ಜೀವನದಲ್ಲಿ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಹಾಗಾಗಿ ನನ್ನ ಮನಸ್ಸಿಗೆ ತೋಚಿದಂತೆ ನಾನು ಜೀವನ ಕಳೆಯುವೆ.* ಪಾಲಕರು ಮಕ್ಕಳನ್ನು ಬೆಳೆಸುವಲ್ಲಿ ಬರುವ ಸವಾಲುಗಳೇನು?
ಇಂದಿನ ಕಾಲದಲ್ಲಿ ಮಕ್ಕಳನ್ನು ಬೆಳೆಸುವುದು ತುಂಬಾ ಕಷ್ಟದ ಕೆಲಸ. ಇಂದಿನ ಮಗುವಿನ ಮನಸ್ಸನ್ನು 8 ಸೆಕೆಂಡ್ ವರೆಗೆ ಮಾತ್ರ ಹಿಡಿದಿಟ್ಟುಕೊಳ್ಳಲು ಸಾಧ್ಯ. ಪಾಲಕರು ಮಕ್ಕಳಿಗಾಗಿಯೇ ಸಮಯ ಮೀಸಲಿಡುವುದು ಅತ್ಯವಶ್ಯ. ಒಂದು ಮಗುವಿನ ಸುಂದರ ಭವಿಷ್ಯ ರೂಪಿಸುವಲ್ಲಿ ಪಾಲಕರ, ಶಿಕ್ಷಕರ, ಸಮಾಜದ ಪಾತ್ರ ಪ್ರಮುಖವಾಗಿದೆ. ಪಾಲಕರು ಮಕ್ಕಳೊಂದಿಗೆ ಮುಕ್ತ ಸಂವಾದ ಏರ್ಪಡಿಸಿ, ಅವರ ಮನಸ್ಸಿನಲ್ಲಿರುವ ಭಾವನೆ ಅರಿತುಕೊಂಡು ಈಡೇರಿಸಲು ಶ್ರಮಿಸುವಂತೆ ಸಲಹೆ ನೀಡಿದರು. ನಮ್ಮ ಕಾಲದಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಬರುವುದು ತುಂಬಾ ವಿರಳ. ಆದರೆ, ಇಂದು ಮಹಿಳೆಯರೂ ಹೊರಬಂದು ಪುರುಷರಷ್ಟೇ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳೆಯನ್ನು ಮನೆಗೆಲಸಕ್ಕೆ ಮೀಸಲಾಗಿಡದೇ ಹೊರಜಗತ್ತಿನ ಪರಿಚಯ ಮಾಡಿಸಬೇಕು. ಹಾಗೆಯೇ ಪುರುಷರು ಮನೆಯಲ್ಲಿ ಮಹಿಳೆಯರು ಮಾಡುವ ಕೆಲಸಗಳಲ್ಲಿ ಕೈಜೋಡಿಸಿದರೆ ಅವರಿಗೂ ಕೆಲಸದ ಒತ್ತಡ ಕಡಿಮೆಯಾಗಿ ಎಲ್ಲರಂತೆ ಸಂತಸದಿಂದ ಇರಲು ಸಹಕಾರಿಯಾಗಲಿದೆ.* ವರ್ಕ್‌ಲೈಫ್ ಮತ್ತು ಬ್ಯಾಲೆನ್ಸ್ ಲೈಫ್ ಹೇಗೆ ಸರಿದೂಗಿಸಿಕೊಂಡು ಹೋಗುತ್ತೀರಿ?
ನನ್ನ ಜೀವನದಲ್ಲಿ ನನ್ನ ಪರಿವಾರಕ್ಕೆ ಆದ್ಯತೆ ನೀಡುತ್ತೇನೆ. ಪರಿವಾರಕ್ಕೆ ಅನುಗುಣವಾಗಿ ನನ್ನ ಕಲಿಕೆ, ಜೀವನ ಹೊಂದಾಣಿಕೆ ಮಾಡಿಕೊಂಡು ಮುಂದುವರಿದೆ. ಮಕ್ಕಳು ಜನಿಸಿದ ಮೇಲೆ ಪ್ರತಿಯೊಬ್ಬರ ಆದ್ಯತೆ (ಪ್ರಿಯಾರಿಟಿ) ಬದಲಾಗುತ್ತವೆ. ಪ್ರತಿಯೊಬ್ಬರ ಭವಿಷ್ಯ ನಿಮ್ಮ ಮೇಲೆಯೇ ಇರುತ್ತವೆ. ನೀವು ಕೈಗೊಳ್ಳುವ ನಿರ್ಧಾರದ ಮೇಲೆ ನಿಮ್ಮ ಏಳ್ಗೆ ಇದೆ ಎಂಬುದನ್ನು ಅರಿತುಕೊಂಡು ಜೀವನದಲ್ಲಿ ಮುಂದೆ ಸಾಗಿ ಎಂದರು.* ಕೆಲವರು ಹೆಸರು, ಹಣ ಗಳಿಸುವುದಕ್ಕಾಗಿ ಕವಿಗಳಾಗುತ್ತಾರೆಯೇ?
ನಾನು ಎಂದಿಗೂ ಹಣ, ಹೆಸರು ಗಳಿಸಲು, ಮತ್ತೊಬ್ಬರನ್ನು ಮೆಚ್ಚಿಸಲು ಪುಸ್ತಕ ಬರೆದಿಲ್ಲ. ನಾನು ಬರೆಯುವುದು ನನ್ನಲ್ಲಿರುವ ಭಾವನೆಗಳನ್ನು ಹೊರ ಜಗತ್ತಿಗೆ ತೋರಿಸುವ ಉದ್ದೇಶವೊಂದೆ. ನನ್ನ ಜೀವನದಲ್ಲಿ ಅನುಭವಿಸಿ ಬರೆಯುತ್ತೇನೆ. ನನ್ನ ಪುಸ್ತಕ, ಕಾದಂಬರಿಯಲ್ಲಿ ಒಂದು ಎಳೆ ಸತ್ಯವಿದ್ದರೆ ಮತ್ತೊಂದು ಎಳೆಯಲ್ಲಿ ನಿತ್ಯವಿರುತ್ತದೆ. ನನ್ನ ಯಾವುದೇ ಪುಸ್ತಕ, ಕಾದಂಬರಿಗಳಲ್ಲಿ ಒಂದು ವಿಷಯ ಸಾಮಾನ್ಯವಾಗಿರುತ್ತದೆ. ನನ್ನ ಕಥೆ, ಕಾದಂಬರಿಯ ಉಗಮವಾಗುವುದು ನನ್ನ ತವರೂರು ಜಿಲ್ಲೆಯಾದ ಧಾರವಾಡದಿಂದ.* ಕಾದಂಬರಿ, ಪುಸ್ತಕ ಬರೆಯಲು ವಯಸ್ಸು ಮುಖ್ಯವೇ?
ವಯಸ್ಸಿಗೂ ಬರವಣಿಗೆಗೂ ಸಂಬಂಧವಿಲ್ಲ. ನನ್ನ 29ನೇ ವಯಸ್ಸಿನಲ್ಲಿ ನಾನು ನನ್ನ ಮೊದಲ ಕನ್ನಡ ಪುಸ್ತಕ ಬರೆದಿದ್ದೇನೆ. ನನ್ನ 52ನೇ ವಯಸ್ಸಿನಲ್ಲಿ ಮೊದಲ ಆಂಗ್ಲಭಾಷೆಯ ಪುಸ್ತಕ ಬರೆದಿದ್ದೇನೆ. ಆದರೆ, ಬರೆಯುವ ಮನಸ್ಸು ಬರಬೇಕು. ಪ್ರತಿಯೊಬ್ಬರೂ ಓದುವ, ಬರೆಯುವ ಹವ್ಯಾಸ ರೂಢಿಸಿಕೊಳ್ಳಿ. ಯಾವಾಗ ಓದುವುದನ್ನು ನಿಲ್ಲಿಸುತ್ತೇವೆಯೋ ಆವಾಗ ನಿಮಗೆ ವಯಸ್ಸಾಗಿದೆ ಎಂದರ್ಥ ಎಂದು ವಿವರಿಸಿದರು.ಹೀಗೆ ಸುಮಾರು ಒಂದೂವರೆ ಗಂಟೆಯ ವರೆಗೆ ನಡೆದ ಸಂವಾದದಲ್ಲಿ ಸಾರ್ವಜನಿಕರು, ಮಕ್ಕಳು, ಹಿರಿಯರು ಡಾ. ಸುಧಾಮೂರ್ತಿ ಅವರೊಂದಿಗೆ ಮುಕ್ತ ಸಂವಾದದಲ್ಲಿ ಪಾಲ್ಗೊಂಡರು.
ಸಂವಾದದ ಪೂರ್ವದಲ್ಲಿ ಮಾತನಾಡಿದ ಕನ್ನಡಪ್ರಭ ಪುರವಣಿ ಪ್ರಧಾನ ಸಂಪಾದಕ ಜೋಗಿ, ನಾವು ಪ್ರಾಮಾಣಿಕತೆ ಹೊಂದಿದ್ದರೆ ನಮಗೆ ಪ್ರಾಮಾಣಿಕತೆಯೇ ಕೊಡುಗೆಯಾಗಿ ಮರಳಲಿದೆ ಎಂಬುದಕ್ಕೆ ಡಾ. ಸುಧಾಮೂರ್ತಿ ಉತ್ತಮ ನಿದರ್ಶನ. ಅವರು ಬರೆದ ಪುಸ್ತಕಗಳು 60 ಲಕ್ಷಕ್ಕೂ ಅಧಿಕ ಮಾರಾಟವಾಗಿವೆ. ಮರಾಠಿ ಭಾಷೆಯೊಂದರಲ್ಲಿಯೇ 8 ಲಕ್ಷಕ್ಕೂ ಅಧಿಕ ಪುಸ್ತಕಗಳು ಮಾರಾಟವಾಗಿರುವುದು ವಿಶೇಷ ಎಂದರು.ನಂತರ ಹಲವು ಸಾಹಿತ್ಯಾಭಿಮಾನಿಗಳು ಡಾ. ಸುಧಾಮೂರ್ತಿ ಹಾಗೂ ಜೋಗಿ ಅವರ ಆಟೋಗ್ರಾಫ್ ಪಡೆದರು. ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ, ಶಾಖೆಯ ಮುಖ್ಯಸ್ಥ ರಘು, ಆರ್. ದೊಡ್ಡೇಗೌಡ, ಕಾಶಿನಾಥ ಚಟ್ನಿ ಸೇರಿದಂತೆ ಹಲವರಿದ್ದರು.