ಉತ್ತಮ ಫಲಿತಾಂಶವನ್ನು ಶಿಕ್ಷಕರಿಗೆ ಕೊಡುಗೆಯಾಗಿ ನೀಡಿ

| Published : Feb 27 2025, 02:01 AM IST

ಸಾರಾಂಶ

ಶಿವಮೊಗ್ಗ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದು ಅದನ್ನು ತಮ್ಮ ಶಿಕ್ಷಕರಿಗೆ ಕೊಡುಗೆಯಾಗಿ ನೀಡಬೇಕು ಎಂದು ಜಿಪಂ ಸಿಇಒ ಎನ್‌.ಹೇಮಂತ್ ಕರೆ ನೀಡಿದರು.

ಶಿವಮೊಗ್ಗ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದು ಅದನ್ನು ತಮ್ಮ ಶಿಕ್ಷಕರಿಗೆ ಕೊಡುಗೆಯಾಗಿ ನೀಡಬೇಕು ಎಂದು ಜಿಪಂ ಸಿಇಒ ಎನ್‌.ಹೇಮಂತ್ ಕರೆ ನೀಡಿದರು.

ನಗರದ ದುರ್ಗಿಗುಡಿ ಪ್ರೌಢಶಾಲೆಯಲ್ಲಿನ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಅತಿ ಮುಖ್ಯವಾದ ಘಟ್ಟ. ಯಾಕೆಂದರೆ ಎಸ್‌ಎಸ್‌ಎಲ್‌ಸಿಯಲ್ಲಿ ಉತೀರ್ಣರಾದ ಹೆಚ್ಚಿನ ವಿದ್ಯಾಭ್ಯಾಸ ಸಾಧ್ಯವಾಗುತ್ತದೆ. ದೇಶ ಅಭಿವೃದ್ಧಿಯಾದಂತೆ ವಿದ್ಯಾರ್ಹತೆಯು ಹೆಚ್ಚುತ್ತಾ ಹೋಗುತ್ತದೆ. ಆ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಎಲ್ಲರೂ ಉತ್ತೀರ್ಣರಾಗಬೇಕು. ಆಗ ಮಾತ್ರ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು ಸಾಧ್ಯ ಎಂದರು.

ಜೀವನದಲ್ಲಿ ಎಲ್ಲರಿಗೂ ಶಿಕ್ಷಣ ಅತಿ ಮುಖ್ಯ. ಪೋಷಕರು ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಹೋಗಬೇಕಾದರೆ ಅದಕ್ಕೆ ಶಿಕ್ಷಣ ಮಾನದಂಡವಾಗಿರುತ್ತದೆ. ಹಾಗಾಗಿ ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸುವ ಆಲೋಚನೆಯನ್ನು ತೆಗೆದು ಹಾಕಬೇಕು. ಮಕ್ಕಳಿಗೆ ಸದಾ ಪ್ರೋತ್ಸಾಹಿಸುತ್ತಾ ಅವರ ಸಾಧನೆಗೆ ಬೆನ್ನು ತಟ್ಟಬೇಕು ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನೂ 30 ದಿನ ಬಾಕಿ ಇದೆ. ವಿದ್ಯಾರ್ಥಿಗಳು ಶಿಕ್ಷಕರು ಹೇಳಿಕೊಟ್ಟಿರುವ ಪಾಠಗಳ ಮನನ ಮಾಡಿಕೊಳ್ಳಬೇಕು. ಪರೀಕ್ಷೆ ಹತ್ತಿರ ಇರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತಪ್ಪಿಸದೆ ಶಿಕ್ಷಕರ ಬಳಿ ಪರೀಕ್ಷೆಯ ಕುರಿತಾಗಿ ಚರ್ಚೆ ನಡೆಸಬೇಕು. ಈ ನಿಟ್ಟಿನಲ್ಲಿ 30 ದಿನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಬಾರಿ ಕಟ್ಟನಿಟ್ಟಾಗಿ ಪರೀಕ್ಷೆ ನಡೆಯಲಿದ್ದು, ಕಾಪಿ ಮಾಡಲು ಯಾವುದೇ ರೀತಿಯ ಅವಕಾಶ ಇರುವುದಿಲ್ಲ. ಹಾಗಾಗಿ ಎಲ್ಲರೂ ತಮ್ಮ ಪರಿಶ್ರಮದಿಂದ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಬೇಕು ಎಂದರು.

ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳೇ ಬಹುತೇಕ ಈ ಸಮಾಜ ಹಾಗೂ ದೇಶವನ್ನು ಆಳುವವರು. ಹಾಗಾಗಿ ಪೋಷಕರು ಮಕ್ಕಳ ಜೊತೆಗೆ ಸದಾ ಗಟ್ಟಿಯಾಗಿ ನಿಲ್ಲಬೇಕು. ಮನೆಯಲ್ಲಿ ಓದುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸ ಮುಗಿಯುವವರೆಗೂ ನಿಮ್ಮ ಜವಾಬ್ದಾರಿಯನ್ನು ಮರೆಯಬಾರದು. ಪೋಷಕರು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು. ನಿಮ್ಮಿಂದ ಅಸಾಧ್ಯವೆಂಬುದು ಇಲ್ಲ ಎಂಬ ವಿಶ್ವಾಸ ಮೂಡಿಸಬೇಕು ಎಂದು ಹೇಳಿದರು.

ಶಿಕ್ಷಣ, ವಿದ್ಯೆ, ನಡತೆ ಯಾರ ಬಳಿ ಇರುತ್ತದೆಯೋ ಆತ ಉನ್ನತ ಮಟ್ಟಕ್ಕೆ ತಲುಪುತ್ತಾರೆ. ಸೂರ್ಯ ಚಂದ್ರ ಹೇಗೆ ಹಗಲು ಇರುಳು ಎನ್ನದೆ ಕೆಲಸ ಮಾಡುತ್ತಾರೊ ಹಾಗೆ ವಿದ್ಯಾರ್ಥಿಗಳು ಓದಿನಲ್ಲಿ ಸಕ್ರಿಯವಾಗಿರಬೇಕು. ವಿದ್ಯೆ ಕಲಿಯುವ ಅವಕಾಶ ಮನುಷ್ಯನಿಗೆ ಮಾತ್ರ ದೊರಕಿರುವುದು ಹಾಗಾಗಿ ನಮ್ಮಲ್ಲಿರುವ ಬುದ್ಧಿ ಶಕ್ತಿ ಹಾಗೂ ಜ್ಞಾಪಕ ಶಕ್ತಿ ಬಳಸಿಕೊಂಡು ಮುಂದೆ ಬರಬೇಕು ಎಂದರು.

ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಮೋಹನ್, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.