ಸಾರಾಂಶ
ಗಜೇಂದ್ರಗಡ: ಸಮಾಜ ಹಾಗೂ ದೇಶದ ಕಲ್ಯಾಣಕ್ಕೆ ಮಹಿಳೆಯರ ಕೊಡುಗೆ ಅನನ್ಯವಾಗಿದೆ ಎಂದು ಅಕ್ಕನ ಬಳಗದ ಸಂಯುಕ್ತಾ ಬಂಡಿ ಹೇಳಿದರು.ಸ್ಥಳೀಯ ರೋಣ ರಸ್ತೆಯಲ್ಲಿ ಅಕ್ಕನ ಬಳಗದ ಕಾರ್ಯಾಲಯದಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಕ್ಕನ ಬಳಗದ ೬ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಮಹಿಳೆ ಸ್ವಾವಲಂಬಿ ಎನ್ನುವುದು ಈಗಾಗಲೇ ಸಾಬೀತಾಗಿದ್ದರೂ ಮಹಿಳೆಯರನ್ನು ಸಬಲೀಕರಣಗೊಳಿಸುವುದು ದೊಡ್ಡ ಜವಾಬ್ದಾರಿ. ಲಿಂಗ ಸಮಾನತೆಗೆ ಇದು ಅವಶ್ಯಕವಾಗಿದೆ. ಹಿಂದಿನಿಂದಲೂ ಮಹಿಳೆಯರು ಎಂದರೆ ನೆಲ, ನದಿ, ಪ್ರಕೃತಿ ಸೇರಿ ಇತರ ತಾಳ್ಮೆಯ ಸಂಕೇತಗಳೆಂದು ವರ್ಣಿಸಲಾಗಿದೆ. ಆದರೆ ವಾಸ್ತವದಲ್ಲಿ ಮಹಿಳೆಯರಿಗೆ ಸಿಗಬೇಕಾದ ಸಮಾನ ಅವಕಾಶಗಳನ್ನು ನೀಡಲಾಗಿದೆಯಾ ಅಥವಾ ಪಡೆಯಬೇಕಿದೆಯಾ ಎಂಬ ಅವಲೋಕ ಮಾಡಿಕೊಳ್ಳಬೇಕಿದೆ ಎಂದರು.ಅಕ್ಕನ ಬಳಗದ ಅಧ್ಯಕ್ಷೆ ಡಾ. ಅರುಣಾ ಅಕ್ಕಿ ಮಾತನಾಡಿ, ಮಹಿಳೆ ಎಂದರೆ ಸಹನಾ ಶಕ್ತಿ ಎಂದು ವರ್ಣಿಸುವವರ ನಡುವೆ ನಿಂದಿಸುವವರು ಸಹ ನಮ್ಮ ನಡುವೆ ಇದ್ದಾರೆ. ಹೀಗಾಗಿ ಹೊಗಳಿದಾಗ ಹಿಗ್ಗದೆ, ತೆಗಳಿದಾಗ ಕುಗ್ಗದೆ ನಾವು ಅಂದುಕೊಂಡ ಗುರಿಯನ್ನು ತಲುಪಲು ಶ್ರಮಿಸಬೇಕು. ಸಾಧನೆ ಎಂಬುದು ಸರಳವಲ್ಲ. ಆದರೆ ಅಸಾಧ್ಯವಲ್ಲ ಎಂಬುದನ್ನು ಈಗಾಗಲೇ ನೂರಾರು ಮಹಿಳೆಯರ ಸಾಧನೆಗಳ ಕಥೆಗಳು ನಮ್ಮ ಮುಂದಿವೆ ಎಂದರು.
ಪ್ರಾಸ್ತಾವಿಕವಾಗಿ ಶರಣಮ್ಮ ಅಂಗಡಿ ಮಾತನಾಡಿ, ಮಹಿಳೆಯರು ಅಡುಗೆ ಮನೆಯಿಂದ ಹಿಡಿದು ಆಕಾಶದೆತ್ತರಕ್ಕೆ ಹಕ್ಕಿಯಂತೆ ಹಾರುವ ಮೂಲಕ ತಾನು ಸಾಧಕಿ, ಸ್ವಾವಲಂಬಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಆದರೆ ಇಂದಿಗೂ ಸಹ ಮಹಿಳೆಯರ ದಿನ ಮಹಿಳೆಯರೇ ಆಚರಿಸಿಕೊಳ್ಳುವ ಸ್ಥಿತಿ ಇರುವುದು ವಿಪರ್ಯಾಸ. ಮಹಿಳೆಯರನ್ನು ಪೂಜಿಸುವುದು ಹಾಗೂ ಸನ್ಮಾನಿಸುವುದಕ್ಕೆ ಮಾತ್ರ ಸೀಮಿತಗೊಳಿಸದೆ ಅವರಿಗೆ ಅವಕಾಶ ನೀಡಬೇಕಿದೆ. ಅಂದಾಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥಬರಲಿದೆ ಎಂದರು.ಪುರಸಭೆ ಸದಸ್ಯರಾದ ಲೀಲಾ ಸವಣೂರ, ಉಮಾ ಮ್ಯಾಕಲ್, ಪುರಸಭೆ ಮಾಜಿ ಅಧ್ಯಕ್ಷೆ ದೇವಕ್ಕ ಬೆಳವಣಿಕೆ, ಮಾಜಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಚಟ್ಟೇರ, ಅನುಸೂಯಾ ವಾಲಿ, ಗೀತಾ ಕಂಬಳ್ಯಾಳ, ರೇಖಾ ವೀರಾಪೂರ, ಪ್ರೇಮಾ ವಸ್ತ್ರದ, ಸಂಗೀತಾ ಗಾಣಗೇರ, ಸುಕನ್ಯಾ ಹೊಗರಿ, ವಿಜಯಲಕ್ಷ್ಮೀ ಕೋಟಿ ಸೇರಿ ಇತರರು ಇದ್ದರು.