ಸಾರಾಂಶ
ಈಗ ಡೆಂಗೀ ರೋಗ ಸಾಕಷ್ಟು ಪ್ರಮಾಣದಲ್ಲಿ ಹರಡುತ್ತಿದ್ದು ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಿ ಸೊಳ್ಳೆ ಉತ್ಪಾದನೆ ಆಗದಂತೆ ಎಚ್ಚರವಹಿಸಿದರೆ ಡೆಂಗೀ ರೋಗದಿಂದ ಮುಕ್ತಿ ಪಡೆಯಬಹುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಚಂದ್ರಶೇಖರ್ ಹೇಳಿದರು. ಮಾಗಡಿಯಲ್ಲಿ ಪುರಸಭಾ ವತಿಯಿಂದ ಶುಕ್ರವಾರ ಡೆಂಘೀ ವಿರೋಧಿ ಮಾಸಾಚರಣೆ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
-ಡೆಂಘೀ ವಿರೋಧಿ ಮಾಸಾಚರಣೆ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಮಾಗಡಿಈಗ ಡೆಂಗೀ ರೋಗ ಸಾಕಷ್ಟು ಪ್ರಮಾಣದಲ್ಲಿ ಹರಡುತ್ತಿದ್ದು ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಿ ಸೊಳ್ಳೆ ಉತ್ಪಾದನೆ ಆಗದಂತೆ ಎಚ್ಚರವಹಿಸಿದರೆ ಡೆಂಗೀ ರೋಗದಿಂದ ಮುಕ್ತಿ ಪಡೆಯಬಹುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಚಂದ್ರಶೇಖರ್ ಹೇಳಿದರು.
ಪಟ್ಟಣದ ಪುರಸಭೆ ಮುಂಭಾಗದಲ್ಲಿ ತಾಲೂಕು ಆರೋಗ್ಯ ಇಲಾಖೆ ಹಾಗೂ ಪುರಸಭಾ ವತಿಯಿಂದ ಶುಕ್ರವಾರ ಡೆಂಘೀ ವಿರೋಧಿ ಮಾಸಾಚರಣೆ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡೆಂಘೀ ಪ್ರಕರಣದಲ್ಲಿ ತಾಲೂಕಿನಲ್ಲಿ ಯಾವುದೇ ಸಾವು ಸಂಭವಿಸಿಲ್ಲ. 14 ಪ್ರಕರಣಗಳಿದ್ದು, ಎಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸಾರ್ವಜನಿಕರು ಮಳೆಗಾಲದಲ್ಲಿ ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ನೀಡಬಾರದು. ಆಗ ಮಾತ್ರ ಈ ರೋಗದಿಂದ ಮುಕ್ತಿ ಹೊಂದಬಹುದು. ಸೊಳ್ಳೆಗಳು ಹೆಚ್ಚದಂತೆ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಾಗ ಮಾತ್ರ ಡೆಂಘೀಯಿಂದ ನಿಯಂತ್ರಣ ಮಾಡಬಹುದು. ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.ಪುರಸಭೆ ಮುಖ್ಯ ಅಧಿಕಾರಿ ಶಿವರುದ್ರಯ್ಯ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ ಚರಂಡಿ, ಒಳಚರಂಡಿಗಳು ಕಟ್ಟಿಕೊಂಡು ನೀರು ನಿಲ್ಲುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ತಂದರೆ ಕೂಡಲೇ ಸ್ವಚ್ಛಗೊಳಿಸುತ್ತೇವೆ. ಸಾರ್ವಜನಿಕರು ತಮ್ಮ ಮನೆ ಸುತ್ತ ನೀರು ನಿಲ್ಲದಂತೆ ಸ್ವಚ್ಛವಾಗಿಟ್ಟುಕೊಂಡು ಆರೋಗ್ಯದ ಕಡೆ ಗಮನ ಹರಿಸಬೇಕು. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಾರ್ವಜನಿಕರು ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.
ಮಾಗಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪುರಸಭೆ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಪೌರಕಾಮಿಕರ ಜೊತೆ ಡೆಂಘೀ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.