ಸಾರಾಂಶ
ಬಸವಕಲ್ಯಾಣ ನಗರದ ಪ್ರಮುಖ ಫುಟ್ಪಾತ್ ಅತಿಕ್ರಮಿಸಿದ ಶೆಡ್, ಡಬ್ಬಾ, ತಳ್ಳುಗಾಡಿ ತೆರವು ಕಾರ್ಯಾಚರಣೆ ಬಸವಕಲ್ಯಾಣ ನಗರದಲ್ಲಿ ಆರಂಭವಾಗಿದೆ.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ನಗರದ ಪ್ರಮುಖ ಫುಟ್ಪಾತ್ ಅತಿಕ್ರಮಿಸಿದ ಶೆಡ್, ಡಬ್ಬಾ, ತಳ್ಳುಗಾಡಿ ತೆರವು ಕಾರ್ಯಾಚರಣೆ ಬಸವಕಲ್ಯಾಣ ನಗರದಲ್ಲಿ ಶುಕ್ರವಾರ ಆರಂಭವಾಗಿದೆ.5 ದಿನಗಳ ಹಿಂದೆಯೇ ಸೂಚನೆ ನೀಡಿದರೂ ರಸ್ತೆ ಬದಿ ಹಾಗೂ ಫುಟ್ಪಾತ್ ಮೇಲಿನ ಅಂಗಡಿಗಳು ಹಾಗೆಯೇ ಇದ್ದವು. ಪೊಲೀಸ್ ಇಲಾಖೆ ಸಹಕಾರದೊಂದಿಗೆ ನಗರಸಭೆ ಅಧಿಕಾರಿಗಳು ಬೆಳಗ್ಗೆ ಜೆಸಿಬಿ ತಂದು ಅಂಗಡಿ ತೆರವುಗೊಳಿಸಿದರು.
ನಗರದ ತ್ರಿಪುರಾಂತದಿಂದ ಪ್ರಾರಂಭವಾದ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ನಗರದ ಮುಖ್ಯ ರಸ್ತೆಗಳಾದ ಹರಳಯ್ಯ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮುಖ್ಯ ರಸ್ತೆಗಳಲ್ಲಿ ಸಾಕಷ್ಟು ಶೆಡ್‌ಗಳು, ಡಬ್ಬಾಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು. ಸಾರ್ವಜನಿಕರಿಗೆ ಸುಗಮ ಸಂಚಾರಕ್ಕಾಗಿ ಅತಿಕ್ರಮಣ ತೆರವು ಅಗತ್ಯವಾಗಿದೆ. ಇಲ್ಲಿ ದೊಡ್ಡವರು, ಸಣ್ಣವರು ಎಂಬ ಪ್ರಶ್ನೆ ಇಲ್ಲ. ರಸ್ತೆ ಬದಿ ಹಾಗೂ ರಸ್ತೆ ಮೇಲಿರುವ ಎಲ್ಲ ಅಂಗಡಿಗಳು ತೆರವುಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ರಾಜು ಡಿ ಬಣಕಾರ್ ತಿಳಿಸಿದ್ದಾರೆ.ಮೊದಲ ಹಂತದಲ್ಲಿ ನಗರದ ತ್ರಿಪುರಾಂತದಿಂದ ಡಾ.ಅಂಬೇಡ್ಕರ್ ವೃತ್ತದ ವರೆಗೆ ಮೊದಲ ಹಂತದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಬಸವಕಲ್ಯಾಣ ನಗರದಲ್ಲಿ ಅತಿಕ್ರಮಣವಾದ ಎಲ್ಲ ಅಂಗಡಿಗಳು ತೆರವು ಮಾಡುತ್ತೇವೆ ಎಂದು ಬಣಕಾರ ತಿಳಿಸಿದ್ದಾರೆ.
ನಗರಸಭೆ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆ ಸಾಥ್ ನೀಡಿದ್ದು, ನಗರ ಠಾಣೆ ಪಿಎಸ್‌ಐ ಅಂಬರೀಶ್ ವಾಘಮೋಡೆ, ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಸುವರ್ಣ ಮಲ್ಲಶೆಟ್ಟಿ, ನಗರಸಭೆ ಎಇಇ ಶಿವಶರಣಪ್ಪ ಸಜ್ಜನಶೆಟ್ಟಿ, ಮನೋಜ್ ಕುಮಾರ್ ಕಾಂಬಳೆ ಸೇರಿ ಪೊಲೀಸ್ ಸಿಬ್ಬಂದಿ, ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.