ಸಾರಾಂಶ
ರೈತರ ಬದುಕಿನ ಕೇಂದ್ರವಾಗಿರುವ ಹಾಗೂ ಮಹತ್ತರ ಪಾತ್ರ ನಿರ್ವಹಿಸುವ ಸಹಕಾರಿ ಸಂಘಗಳು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.
ಸಿದ್ದಾಪುರ: ರೈತರ ಬದುಕಿನ ಕೇಂದ್ರವಾಗಿರುವ ಹಾಗೂ ಮಹತ್ತರ ಪಾತ್ರ ನಿರ್ವಹಿಸುವ ಸಹಕಾರಿ ಸಂಘಗಳು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯದ ಹಿಡಿತದಲ್ಲಿ ಸಹಕಾರಿ ಸಂಘಗಳು ಇರಬಾರದು. ಸಂಘಗಳು ರೈತರ ಪರವಾಗಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನೂತನ ಸೇವೆಯಾದ ಎಲ್‌ಪಿಜಿ ಸೇವಾ ಕೇಂದ್ರ ಉದ್ಘಾಟಿಸಿ ಸಾಂಕೇತಿಕವಾಗಿ ಸಿಲಿಂಡರ್ ವಿತರಿಸಿ ಮಾತನಾಡಿ, ಸಂಘದ ಸದಸ್ಯರು ಸಂಘದಲ್ಲಿ ವ್ಯವಹಾರವನ್ನು ಮಾಡುವ ಮೂಲಕ ಸಂಘವನ್ನು ಗಟ್ಟಿ ಗೊಳಿಸುವುದರ ಜತೆಗೆ ಸಂಘದೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಇಂದು ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಲ್ಲರೂ ಒಂದಾಗಿ ಧ್ವನಿ ಎತ್ತಬೇಕು. ಸೊಪ್ಪಿನ ಬೆಟ್ಟದ ಸಮಸ್ಯೆ ರೈತರನ್ನು ಕಾಡುತ್ತಿದೆ. ಸಹಕಾರಿ ಸಂಘದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳನ್ನು ಪಡೆದುಕೊಳ್ಳಬೇಕು. ಅದರೊಂದಿಗೆ ಸಹಕಾರಿ ಸಂಘಗಳು ಸಹ ಸದಸ್ಯರಿಗಾಗಿ ಹಲವು ಸೌಲಭ್ಯಗಳನ್ನು ನೀಡುವುದಕ್ಕೆ ಮುಂದಾಗುತಿದ್ದು, ಅದರಲ್ಲಿ ಒಂದು ಎಲ್‌ಪಿಜಿ ಸೇವಾ ಕೇಂದ್ರವಾಗಿದೆ. ಇಲ್ಲಿಯ ಸೂಪರ್ ಮಾರ್ಕೆಟ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಸೇವೆ ಅತ್ಯವಶ್ಯ ಎಂದರು.ಸಹಕಾರಿ ಸಂಘಗಳ ಶಿರಸಿಯ ಸಹಾಯಕ ನಿಬಂಧಕ ಆಜಿತ್ ಶಿರಹಟ್ಟಿ ಮಾತನಾಡಿ, ಕಂದಾಯ ಸೇವೆಗಳನ್ನು ಸಿಎಸ್‌ಸಿ ಕೇಂದ್ರ ಮೂಲಕ ಸಹಕಾರಿ ಸಂಘದಲ್ಲಿ ರೈತರಿಗೆ ನೀಡಲು ಎಲ್ಲ ಸಿದ್ಧತೆಗಳು ನಡೆಯುತ್ತಿದೆ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಯ ಸಹಕಾರಿ ಸಂಘಗಳು ಅಧ್ಯಯನಕ್ಕಾಗಿ ಜಿಲ್ಲೆಯ ಸಹಕಾರಿ ಸಂಘಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.
ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಅಧ್ಯಕ್ಷತೆವಹಿಸಿ ಮಾತನಾಡಿದರು.ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ಹನುಮಕ್ಕ ಭೋವಿ, ಪಿಡಿಒ ರಾಜೇಶ ನಾಯ್ಕ, ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಅನಂತ ಹೆಗಡೆ ಹೊಸಗದ್ದೆ ವಂದಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ ಹೆಗಡೆ ಚಳ್ಳೆಹದ್ದ ಕಾರ್ಯಕ್ರಮ ನಿರ್ವಹಿಸಿದರು.ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಎಲ್‌ಪಿಜಿ ಸೇವಾ ಕೇಂದ್ರ ಉದ್ಘಾಟಿಸಲಾಯಿತು.