ಸಾರಾಂಶ
ಸಿದ್ದಾಪುರ: ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಪಂಚಾಯತ, ಪಟ್ಟಣ ಪಂಚಾಯತ ಹಾಗೂ ತಾಲೂಕು ನಾಮಧಾರಿ ಸಮಾಜದ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಗೋಪಾಲ ನಾಯ್ಕ ಭಾಶಿ, ಯಕ್ಷಗಾನ ಭಾಗವತ ಎಂ.ಆರ್. ನಾಯ್ಕ ಕರ್ಸೆಬೈಲ್,ಜೇನು ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ಬೆನಕ ನಾಯ್ಕ ಬಿಳುಮನೆ, ಹಿರಿಯ ಕೃಷಿಕ ತಿಮ್ಮಣ್ಣ ನಾಯ್ಕ ಅವರನ್ನು ಗೌರವಿಸಲಾಯಿತು.ನಾರಾಯಣ ಗುರು ಜಯಂತಿ ಉದ್ಘಾಟಿಸಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಮಾತನಾಡಿ, ನಾರಾಯಣ ಗುರು ಜಾತಿ, ಮತವನ್ನು ಮೀರಿದ ಸತ್ಪುರುಷರಾಗಿದ್ದರು. ಕೆಳಸ್ತರದ ಜನರ ಶಿಕ್ಷಣಕ್ಕಾಗಿ ಶಾಲೆಯನ್ನು ತೆರೆದ ಮಹಾನ್ ವ್ಯಕ್ತಿಯಾಗಿದ್ದರು. ದೇಶದಲ್ಲಿ ಕೇರಳ ರಾಜ್ಯ ಸಾಕ್ಷರತೆಯಲ್ಲಿ ಮೊದಲ ಸ್ಥಾನ ಪಡೆಯಲು ಪ್ರಮುಖ ಕಾರಣೀಕರ್ತರು ನಾರಾಯಣ ಗುರು. ಸಾಮಾಜಿಕ ಅನಿಷ್ಟಗಳ ವಿರುದ್ಧ ಚಳವಳಿ ಸಾರಿದ ನಾರಾಯಣ ಗುರು ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದರು. ನಾರಾಯಣ ಗುರುಗಳ ಆದರ್ಶವನ್ನು ನಾವೆಲ್ಲರೂ ಪಾಲಿಸೋಣ ಎಂದರು.
ಉಪನ್ಯಾಸಕ ರತ್ನಾಕರ ನಾಯ್ಕ ಉಪನ್ಯಾಸ ನೀಡಿ, ಸಮುದಾಯದ ಸಾಮಾಜಿಕ ಬದಲಾವಣೆಗೆ ಕಾರಣರಾದ ನಾರಾಯಣಗುರು ಶಿಕ್ಷಣದಿಂದ ಸಂಘಟಿತರಾಗಿ ಎಂದು ಕರೆ ಕೊಟ್ಟವರು. ಸ್ತನ ಕತ್ತರಿಸಿ ಕೊಡುವಂತ ಸಂಪ್ರದಾಯವಿದ್ದ ಕೇರಳದಂತಹ ನಾಡಿನಲ್ಲಿ ಸಂತನಾಗಿ ಬೆಳೆದ ನಾರಾಯಣ ಗುರು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ರಾಂತಿಗೆ ಕಾರಣರಾದವರು. ಶೈಕ್ಷಣಿಕ, ಸಾಮಾಜಿಕ ಜಾಗೃತಿ ಮೂಡಿಸಬೇಕು. ಮನುಷ್ಯತ್ವವುಳ್ಳ ಎಲ್ಲ ಸಮುದಾಯಗಳು ನಾರಾಯಣ ಗುರುಗಳ ವಿಚಾರಧಾರೆ ಅಳವಡಿಸಿಕೊಳ್ಳಬೇಕು ಎಂದರು.ತಾಲೂಕು ನಾಮಧಾರಿ ಸಮಾಜದ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜಿಬೈಲ್, ವಸಂತ ನಾಯ್ಕ ಮನಮನೆ ಮಾತನಾಡಿದರು. ತಾಲೂಕು ದಂಡಾಧಿಕಾರಿ ಎಂ.ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು.
ಈ ವೇಳೆ ತಾಲೂಕು ನಾಮಧಾರಿ ಸಮಾಜದ ಗೌರವಾಧ್ಯಕ್ಷ ಆನಂದ ನಾಯ್ಕ, ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ನಾಯ್ಕ, ತಾಲೂಕು ಪಂಚಾಯತ್ ಇಒ ದೇವರಾಜ ಹಿತ್ತಲಕೊಪ್ಪ, ತಾಲೂಕು ದಂಡಾಧಿಕಾರಿ ಎಂ.ಆರ್. ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ, ಪಪಂ ಮುಖ್ಯಾಧಿಕಾರಿ ಜೆ.ಆರ್. ನಾಯ್ಕ, ತಾಲೂಕು ನಾಮಧಾರಿ ನೌಕರರ ಸಂಘದ ಅಧ್ಯಕ್ಷ ರವಿ ನಾಯ್ಕ, ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪಿ.ಬಿ. ಹೊಸೂರ ಮುಂತಾದವರು ಉಪಸ್ಥಿತರಿದ್ದರು. ಉಪತಹಶೀಲ್ದಾರ ಜಿ.ಎಲ್.ಶ್ಯಾಮಸುಂದರ ಸ್ವಾಗತಿಸಿದರು. ಅರುಣ ಸುಂಕತ್ತಿ ನಿರೂಪಿಸಿದರು. ಅಣ್ಣಪ್ಪ ನಾಯ್ಕ ಶಿರಳಗಿ ವಂದಿಸಿದರು.