ಸಾರಾಂಶ
ಕೆ.ಎಂ.ಮಂಜುನಾಥ್ ಬಳ್ಳಾರಿ
ನಗರದಲ್ಲಿ ಬೇಸಿಗೆಯಲ್ಲಿ ಎದುರಾಗುವ ಕುಡಿವ ನೀರಿನ ಸಮಸ್ಯೆ ನೀಗಿಸಲು ಮಹಾನಗರ ಪಾಲಿಕೆ ಬಾವಿಗಳು ಹಾಗೂ ಬೋರ್‌ವೆಲ್ ಗಳ ಮೊರೆ ಹೋಗಿದೆ !ಸದ್ಯಕ್ಕೆ ಕುಡಿವ ನೀರಿನ ಸಮಸ್ಯೆಯಿಲ್ಲ. ಒಂದು ವೇಳೆ ನಿಗದಿತ ಕಾಲದಲ್ಲಿ ಎಲ್‌ಎಲ್‌ಸಿ ಕಾಲುವೆಗೆ ನೀರು ಪೂರೈಕೆಯಾಗದೆ ಹೋದಲ್ಲಿ ನಗರಕ್ಕೆ ಸಮರ್ಪಕ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಪೂರ್ವ ಸಿದ್ಧತೆಯಾಗಿ ನಗರದ ಹಳೆಯ ಬಾವಿಗಳು ಹಾಗೂ ಬೋರ್‌ವೆಲ್ ದುರಸ್ತಿಗೊಳಿಸಲು ನಿರ್ಧರಿಸಿದೆ. ಜತೆಗೆ ವಾರ್ಡ್‌ಗೆ ಎರಡು ಹೊಸ ಬೋರ್‌ವೆಲ್ ಕೊರೆಯಲು ನಿರ್ಧರಿಸಲಾಗಿದೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಕ್ರಿಯಾ ಯೋಜನೆ ಕಳಿಸಲಾಗಿದ್ದು, ಅನುಮೋದನೆಗೆ ಸಿಗುತ್ತಿದ್ದಂತೆಯೇ ಬಾವಿಗಳ ಸ್ವಚ್ಛತೆ ಹಾಗೂ ಬೊರ್‌ವೆಲ್‌ಗಳ ದುರಸ್ತಿ ಕಾರ್ಯ ಶುರುಗೊಳ್ಳಲಿದೆ. ನೀರು ನಿರ್ವಹಣೆ ಸಂಬಂಧ ಪಾಲಿಕೆ ₹1.76 ಕೋಟಿ ಕಾಯ್ದಿರಿಸಿಕೊಂಡಿದೆ.
13 ಬಾವಿಗಳ ಸ್ವಚ್ಛತೆಗೆ ನಿರ್ಧಾರ: ನಗರದ ವಿವಿಧ ಪ್ರದೇಶಗಳಲ್ಲಿರುವ 13 ಬಾವಿಗಳನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರಿಗೆ ಬಳಕೆಗೆ ನೀಡಲು ಪಾಲಿಕೆ ನಿರ್ಧರಿಸಿದೆ. ಬಾವಿಯಲ್ಲಿರುವ ತ್ಯಾಜ್ಯ ಹೊರ ಹಾಕಿ, ನೀರು ತೆರವುಗೊಳಿಸಲಾಗುವುದು. ಬಳಿಕ ನೀರನ್ನು ಪರೀಕ್ಷೆಗೆ ಕಳಿಸಿ ಬಳಕೆಗೆ ಸೂಕ್ತವಿದೆ ಎಂದು ವರದಿ ಬರುತ್ತಿದ್ದಂತೆಯೇ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು. ಈಗಾಗಲೇ ಬಾವಿಗಳ ಸ್ವಚ್ಛತೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತಾ ಕ್ರಮ ಕೈಗೊಳ್ಳುವಂತೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಫೆಬ್ರವರಿ ಅಂತ್ಯದೊಳಗೆ ಬಾವಿಗಳು ಜನ ಬಳಕೆಗೆ ನೀಡಲಾಗುವುದು. ಬಳ್ಳಾರಿ ನಗರದಲ್ಲಿ 411 ವಿದ್ಯುತ್ ಪಂಪ್‌ಗಳಿವೆ. ಈ ಪೈಕಿ 327 ಸುಸ್ಥಿತಿಯಲ್ಲಿವೆ.ಉಳಿದವುಗಳನ್ನು ದುರಸ್ತಿಗೊಳಿಸಲಾಗುವುದು. ನಗರದಲ್ಲಿ ಒಟ್ಟು 248 ಕೈ ಪಂಪ್‌ಗಳಿವೆ. ಇದರಲ್ಲಿ 186 ಸಕ್ರೀಯವಾಗಿವೆ. ಉಳಿದವುಗಳ ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ ಪಾಲಿಕೆ ಆಯುಕ್ತರು ಕನ್ನಡಪ್ರಭಕ್ಕೆ ತಿಳಿಸಿದರು.80 ದಿನಕ್ಕಾಗುವಷ್ಟು ನೀರಿದೆ: ಬಳ್ಳಾರಿ ಮಹಾನಗರಕ್ಕೆ ಕುಡಿವ ನೀರು ಪೂರೈಸುವ ಅಲ್ಲೀಪುರ ಕೆರೆ ಹಾಗೂ ಶಿವಪುರ ಕೆರೆಗಳಲ್ಲಿ ಸದ್ಯ ಸಂಗ್ರಹದಲ್ಲಿರುವ ನೀರನ್ನು ನಗರಕ್ಕೆ 80 ದಿನಗಳವರೆಗೆ ಸರಬರಾಜು ಮಾಡಬಹುದು. ಎಲ್‌ಎಲ್‌ಸಿ ಕಾಲುವೆಗೆ ನೀರು ಬರದೇ ಹೋದರೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ನಗರಕ್ಕೆ ನೀರು ಪೂರೈಸುವುದು ದೊಡ್ಡ ಸವಾಲಿನ ಕೆಲಸವಾಗಲಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ನಗರದಲ್ಲಿರುವ ನೀರಿನ ಮೂಲಗಳ ಹುಡುಕಾಟ ಆರಂಭಿಸಿದ್ದಾರೆ. ಒಂದು ವೇಳೆ ನೀರಿನ ಸಮಸ್ಯೆ ಉಲ್ಬಣಿಸಿದರೆ ಬಾವಿಗಳು, ಪವರ್ ಪಂಪ್‌ಗಳು ಹಾಗೂ ಕೈ ಪಂಪ್‌ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.
ಬಳ್ಳಾರಿ ನಗರದಲ್ಲಿ 63,762 ಮನೆಗಳಿಗೆ ನಳಗಳಿವೆ. 1345 ವಾಣಿಜ್ಯ ಬಳಕೆ ಹಾಗೂ 539 ಕೈಗಾರಿಕೆ ಸಂಬಂಧಿಸಿದಂತೆ ನಳಗಳ ಸಂಪರ್ಕಗಳಿವೆ. ವೈಜ್ಞಾನಿಕ ಅಂದಾಜಿನ ಪ್ರಕಾರ ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ 130 ಲೀಟರ್ ಬೇಕಾಗುತ್ತದೆ.ಸದ್ಯಕ್ಕೆ ನಗರ ನೀರು ಪೂರೈಕೆಯ ಎರಡು ಕೆರೆಗಳಲ್ಲಿ ಎರಡುವರೆ ತಿಂಗಳಿಗಾಗುಷ್ಟು ಮಾತ್ರ ನೀರಿದ್ದು, ಎಲ್‌ಎಲ್‌ಸಿ ನೀರು ಬಿಡದೇ ಹೋದರೆ ನಗರದ ನಿವಾಸಿಗಳು ನೀರಿನ ಸಮಸ್ಯೆ ಎದುರಿಸಬೇಕಾಗುವುದು.
ನಗರಕ್ಕೆ ಐದಾರು ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದೇವೆ. ಸದ್ಯಕ್ಕೆ ನೀರಿನ ಕೊರತೆ ಇಲ್ಲ. ಮುಂಬರುವ ದಿನಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆ ಅರಿತು ಬಾವಿಗಳ ಸ್ವಚ್ಛತೆ, ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದೇವೆ. ಸಾರ್ವಜನಿಕರು ನೀರು ಪೋಲು ಮಾಡದೆ ಮಿತವಾಗಿ ಬಳಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಜಿ. ಖಲೀಲ್ ಸಾಬ್ ಹೇಳಿದರು.ಬಾವಿ ಸ್ವಚ್ಛಗೊಳಿಸಿ, ಜನ ಬಳಕೆಗೆ ನೀಡಲು ಪಾಲಿಕೆ ನಿರ್ಧರಿಸಿರುವುದು ಒಳ್ಳೆಯದು. ಆಗಾಗ್ಗೆ ಬಾವಿ ನೀರು ತೆರವುಗೊಳಿಸಿ ಸ್ವಚ್ಛತೆ ಮಾಡಬೇಕು. ಆಗ ಜನರು ನಿಸ್ಸಂದೇಹವಾಗಿ ಬಳಸುತ್ತಾರೆ ಎಂದು ಮೇದಾರ ಓಣಿ ನಿವಾಸಿ ಅಂಜಿನಮ್ಮ ಹೇಳಿದ್ದಾರೆ.
ಬೇಸಿಗೆಯಲ್ಲಿ ಕುಡಿವ ನೀರಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ. ಬಾವಿಗಳ ಬಳಕೆಗೆ ಮುಂದಾಗುತ್ತಿರುವುದು ಸಂತೋಷ ತಂದಿದೆ. ಸಾರ್ವಜನಿಕರು ಬಾವಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹವಾಂಭಾವಿ ಪ್ರದೇಶದ ಶೇಖರಪ್ಪ ಹೇಳಿದರು.