ಸಾರಾಂಶ
ವಿದ್ಯಾರ್ಥಿಗಳಿಗೆ ಕಿವಿಮಾತು । ಬ್ರಿಲಿಯಂಟ್ ಪಿಯು ಕಾಲೇಜಲ್ಲಿ ದಶಮಾನೋತ್ಸವ ಸಂಭ್ರಮಕನ್ನಡಪ್ರಭ ವಾರ್ತೆ ಹಾಸನ
ಇತರರಿಂದ ಸುಲಿಗೆ ಮಾಡಿ, ಮೋಸ ಮಾಡಿ, ಹೆದರಿಸಿ ಬೆದರಿಸಿ ಭ್ರಷ್ಟಾಚಾರದಿಂದ ಅನ್ಯಾಯ ಮಾಡಿ ಸಂಪಾದಿಸಿದ ಸಂಪತ್ತಿನಿಂದ ಯಾವತ್ತಿಗೂ ನೆಮ್ಮದಿಯ ಜೀವನ ಪಡೆಯಲು ಸಾಧ್ಯವೇ ಇಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಡಾ.ಎನ್. ಸಂತೋಷ್ ಹೆಗ್ಡೆ ತಿಳಿಸಿದರು.ನಗರದ ಹಾಸನಾಂಬ ಕಲಾಭವನದಲ್ಲಿ ಬ್ರಿಲಿಯಂಟ್ ಪಿಯು ಕಾಲೇಜಿನಿಂದ ಬುಧವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶ ನೋಡಿದರೆ ಜೈಲಿಗೆ ಹೋಗಿ ಜಾಮೀನು ಪಡೆದುಕೊಂಡು ವಾಪಸ್ ಬರುವಂತಹವರಿಗೆ ಅದ್ಧೂರಿ ಸ್ವಾಗತ ಮತ್ತು ಅಧಿಕಾರದಲ್ಲಿ ಇದ್ದಾರೆ ಎಂದು ರಾಜಕೀಯ ಸನ್ನಿವೇಶದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
‘ತೃಪ್ತಿ ಮತ್ತು ಮೌಲ್ಯಗಳಿದ್ದರೆ ಮಾತ್ರ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯವಾಗುತ್ತದೆ. ನಾನು ಲೋಕಾಯುಕ್ತಕ್ಕೆ ಬರುವವರೆಗೆ ಸಮಾಜದಲ್ಲಿ ಆಗುವ ಅನ್ಯಾಯದ ಬಗ್ಗೆ ಅಷ್ಟೊಂದು ಅರಿವು ಇರಲಿಲ್ಲ. ಹಿಂದಿನ ದಿನಗಳಲ್ಲಿ ಗ್ರಾಮದೊಳಗೆ ಯಾರಾದರೂ ಜೈಲಿಗೆ ಹೋಗಿದ್ದರೇ ಆತನ ಮನೆ ಹತ್ತಿರ ನೀನು ಹೋಗಬೇಡ ಎಂದು ಪೋಷಕರು ಹೇಳುತ್ತಿದ್ದರು. ಅಂದಿನ ಸಮಾಜ ಸಾಮಾಜಿಕವಾಗಿ ತಪ್ಪು ಮಾಡಿದವರನ್ನು ಬಹಿಷ್ಕರಿಸುತ್ತಿತ್ತು. ಇದರಿಂದಲೇ ಅಂದು ಜನರು ತಪ್ಪು ಮಾಡಲು ಹೆದರುತ್ತಿದ್ದರು. ತಪ್ಪು ಮಾಡುವವರು ಇದ್ದರೂ ಕೂಡ ಸಂಖ್ಯೆ ಬಹಳ ಕಡಿಮೆ ಇತ್ತು. ಆದರೆ ಪ್ರಸ್ತುತ ಸಮಾಜದಲ್ಲಿ ಜನರ ಭಾವನೆ ನೋಡಿದರೆ ಶ್ರೀಮಂತಿಕೆ, ಅಧಿಕಾರವನ್ನು ಪೂಜಿಸುವಂತಹ ಸಮಾಜದಲ್ಲಿದ್ದೇವೆ. ಈ ಸಮಾಜದ ಬದಲಾವಣೆ ಆಗದೇ ಶಾಂತಿ, ನೆಮ್ಮದಿ ಸಿಗಲು ಸಾಧ್ಯವಿಲ್ಲ. ಮೊದಲು ಸಮಾಜದ ಬದಲಾವಣೆ ಆದರೇ ಮಾತ್ರ ಜನರು ಕೂಡ ತಮ್ಮ ಭಾವನೆಯನ್ನು ಬದಲಾಯಿಸಬಹುದು ಎಂದು ಅಭಿಪ್ರಾಯಪಟ್ಟರು.‘ಇಂದಿನ ಪರಿಸ್ಥಿತಿಗೆ ಮೂಲಕ ಕಾರಣ ದುರಾಸೆ ಎನ್ನುವುದು. ಇಂದಿನ ಪರಿಸ್ಥಿತಿಯಲ್ಲಿ ಸಾವಿರಾರು ಹಗರಣಗಳು ನಡೆಯುತ್ತಿದೆ. ಹೊರದೇಶದಿಂದ ನಮ್ಮ ಯೋಧರಿಗೆ ಆಯುಧವನ್ನು ಖರೀದಿ ಮಾಡುವ ಗುತ್ತಿಗೆಯಲ್ಲಿ ೬೪ ಕೋಟಿ ರು. ಕೊಳ್ಳೆ ಹೊಡೆದಿದ್ದಾರೆ. ಕಾಮನ್ ವೆಲ್ತ್ ಗೇಮ್‌ನಲ್ಲಿ ೭೦ ಸಾವಿರ ಕೋಟಿ ರು. ದೇಶಕ್ಕೆ ಅನ್ಯಾಯವಾಗಿದೆ. ೨ಜಿ ಹಗರಣದಲ್ಲಿ ೧ ಲಕ್ಷದ ೭೬ ಸಾವಿರ ಕೋಟಿ ರು. ನಷ್ಟವಾಗಿದೆ. ಇಷ್ಟೊಂದು ಹಗರಣ ಒಂದು ವರ್ಷದಲ್ಲಿ ನಡೆದರೇ ಯಾವ ರೀತಿ ದೇಶ ಅಭಿವೃದ್ಧಿಯಾಗುತ್ತದೆ? ೧೯೮೫ ರಲ್ಲಿ ಅಂದಿನ ಪ್ರಧಾನ ಮಂತ್ರಿ ದಿವಂಗತ ರಾಜೀವ್ ಗಾಂಧಿ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಸರ್ಕಾರ ಕೊಟ್ಟಂತಹ ಒಂದು ರುಪಾಯಿ ಕೊನೆ ಹಂತಕ್ಕೆ ಹೋಗುವುದು ೧೫ ಪೈಸೆ ಮಾತ್ರ ಎಂದು ಹೇಳಿದ್ದರು. ಅನೇಕರಲ್ಲಿ ದುರಾಸೆ ಕಡಿಮೆ ಆಗಿಲ್ಲ. ಇವತ್ತು ಪರ್ಸೆಂಟ್ ವಿಚಾರವನ್ನು ಅಧಿಕಾರದಲ್ಲಿರುವವರೆ ಮಾತಾಡಿಕೊಂಡು ಲೆಕ್ಕ ಹಾಕುತ್ತಿದ್ದಾರೆ. ಇದರಿಂದ ಯಾವ ರೀತಿ ಅಭಿವೃದ್ಧಿ ಆಗಲು ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.
‘ಈ ದುರಾಸೆಗೆ ಇಲ್ಲಿ ಯಾವ ಮದ್ದು ಇಲ್ಲ. ದುರಾಸೆಗೆ ಒಳಗಾದವರು ಯಾವ ಕಾನೂನಿಗೆ ಹೆದರುವುದಿಲ್ಲ. ನನ್ನ ಅನಿಸಿಕೆಯಲ್ಲಿ ದುರಾಸೆಗೆ ಒಂದೆ ಒಂದು ಮದ್ದು ಇದ್ದು, ಹಿರಿಯರು ಕಟ್ಟಿದಂತಹ ಮೌಲ್ಯ ಮತ್ತು ತೃಪ್ತಿ ಇರಬೇಕು. ತೃಪ್ತಿ ಇದ್ದರೇ ದುರಾಸೆ ಬರುವುದಿಲ್ಲ. ದುರಾಸೆ ಇದ್ದರೇ ತೃಪ್ತಿ ಇರುವುದಿಲ್ಲ. ಆದರೇ ಇದನ್ನು ಹೇಳಿಕೊಡುವವರು ಯಾರು?’ ಎಂದು ಪ್ರಶ್ನೆ ಮಾಡಿದರು.ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಪಿಯು ಕಾಲೇಜು ಶಿಕ್ಷಣ ಸಂಸ್ಥೆ ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಬ್ರಿಲಿಯೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್. ಅನೀಲ್ ಕುಮಾರ್, ಶ್ರಿ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಪ್ರೊ. ಡಾ. ಗುರುಬಸವರಾಜು, ಬೆಂಗಳೂರಿನ ಗೌರ್‍ನೆಸ್ ರೆಫಾರ್ಮ್ ಅಡೈಸರಿ ಫಾರಂ ಅಧ್ಯಕ್ಷ ಬಿ.ಎಚ್. ಸುರೇಶ್, ಪ್ರಾಂಶುಪಾಲ ಜವರೇಗೌಡ, ರಘು ಇದ್ದರು.
ಹಾಸನ ನಗರದ ಕಲಾಭವನದಲ್ಲಿ ಬ್ರಿಲಿಯಂಟ್ ಕಾಲೇಜಿನ ದಶಮಾನೋತ್ಸವವನ್ನು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಉದ್ಘಾಟಿಸಿದರು.