ಸಾರಾಂಶ
ಹನುಮಸಾಗರ: ಇಂದಿನ ದಿನಮಾನದಲ್ಲಿ ಮದುವೆ ಮಾಡಲು ಸಾಲ ಮಾಡುವ ಬಡ ಹಾಗೂ ಮಧ್ಯಮ ವರ್ಗದವರಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಸಮೀಪದ ಯಲಬುಣಚಿ ಗ್ರಾಮದಲ್ಲಿ ಭಾನುವಾರ ಬಜರಂಗಿ ಯುವ ಸೇನೆ ಉದ್ಘಾಟನೆ, ಕನಕದಾಸ ಜಯಂತಿ, ಮಾರುತೇಶ್ವರ ಹಾಗೂ ಬಸವೇಶ್ವರ ಕಾರ್ತಿಕೋತ್ಸವ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.ದುಂದುವೆಚ್ಚದ ಮದುವೆಗಳಿಂದ ಬಹಳಷ್ಟು ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಅನೇಕ ಕುಟುಂಬಗಳು ಸಾಲ ಮಾಡಿ ಮಕ್ಕಳ ಮದುವೆ ಮಾಡಿ ಗೋವಾ, ಮಂಗಳೂರು, ಬೆಂಗಳೂರು, ಶಿವಮೊಗ್ಗ, ದಾಂಡೇಲಿ ಸೇರಿ ವಿವಿಧೆಡೆ ಊರು ಬಿಟ್ಟು ಗೂಳೆ ಹೋಗುವುದನ್ನು ನಮ್ಮಲ್ಲಿ ಕಾಣುತ್ತಿದ್ದೇವೆ. ಬಡವರು ಸಾಲ ಮಾಡಿ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಬದಲು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಡಬೇಕು ಎಂದರು.ವಿವಾಹ ಬಂಧನವೆಂದರೆ ಎರಡು ಮನಸು, ಜೀವಗಳು ಒಂದಾಗಿ ಪರಸ್ಪರ ಹಾಲು-ಜೇನಿನಂತೆ ಅನ್ಯೋನ್ಯತೆಯಿಂದ ಜೀವನ ನಡೆಸಬೇಕು. ಸತಿ-ಪತಿ ಒಬ್ಬರನ್ನೊಬ್ಬರು ಅರಿತು ಸುಖ ಸಂಸಾರ ನಡೆಸಬೇಕು. ಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು.ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮೀಜಿ, ಯರನಾಳ ಶಿವಪ್ರಸಾದ ದೇವರು, ಶಿವಲಿಂಗಯ್ಯ ಗುರುವಿನ, ಚೆನ್ನವೀರಯ್ಯ ಹಿರೇಮಠ, ಅಂದಾನಯ್ಯ ಹಿರೇಮಠ, ಜಿಪಂ ಮಾಜಿ ಸದಸ್ಯ ಫಕೀರಪ್ಪ ಚಳಗೇರಿ, ಕೆ.ಮಹೇಶ, ಮಹಾಂತೇಶ ಗಣವಾರಿ, ಮಲ್ಲಣ್ಣ ಪಲ್ಲೇದ ಇದ್ದರು.