ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೈಬರ್‌ ಕ್ರೈಂ, ಉಳ್ಳವರೇ ವಂಚಕರ ಟಾರ್ಗೆಟ್‌

| Published : Sep 15 2024, 01:54 AM IST

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೈಬರ್‌ ಕ್ರೈಂ, ಉಳ್ಳವರೇ ವಂಚಕರ ಟಾರ್ಗೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರಜ್ಞಾವಂತರು ಎನಿಸಿಕೊಂಡವರೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್‌ ವಂಚಕರು ಹೊಸ ಮಾರ್ಗದಲ್ಲಿ ಬಂದು ಅಮಾಯಕರಿಂದ ಹಣ ದೋಚುತ್ತಿದ್ದಾರೆ. ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್‌ ವರೆಗಿನ 8 ತಿಂಗಳಲ್ಲಿ ಸೈಬರ್‌ ವಂಚಕರಿಂದ ಜನರು ₹8.43 ಕೋಟಿ ಕಳೆದುಕೊಂಡಿದ್ದಾರೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲೆಯಲ್ಲಿ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರಜ್ಞಾವಂತರು ಎನಿಸಿಕೊಂಡವರೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್‌ ವಂಚಕರು ಹೊಸ ಮಾರ್ಗದಲ್ಲಿ ಬಂದು ಅಮಾಯಕರಿಂದ ಹಣ ದೋಚುತ್ತಿದ್ದಾರೆ. ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್‌ ವರೆಗಿನ 8 ತಿಂಗಳಲ್ಲಿ ಸೈಬರ್‌ ವಂಚಕರಿಂದ ಜನರು ₹8.43 ಕೋಟಿ ಕಳೆದುಕೊಂಡಿದ್ದಾರೆ.

ಮೆಸೇಜ್‌, ಲಿಂಕ್‌, ಫೋನ್‌ ಕರೆ, ಇಮೇಲ್‌ ಮೂಲಕ ಸಂಪರ್ಕಿಸುವ ಸೈಬರ್‌ ಕ್ರಿಮಿನಲ್‌ಗಳು ಬ್ಯಾಂಕ್‌ ಖಾತೆ ಮತ್ತು ವೈಯಕ್ತಿಕ ವಿವರಗಳಿಗೆ ಕನ್ನ ಹಾಕುತ್ತಿದ್ದರು. ಇದರಲ್ಲಿ ಅಮಾಯಕರೇ ಹಣ ಕಳೆದುಕೊಳ್ಳುತ್ತಿದ್ದರು. ತಮ್ಮ ಖಾತೆಯಿಂದ ಹಣ ಹೋಗಿದ್ದೇ ಜನರಿಗೆ ಗೊತ್ತಾಗುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸೈಬರ್‌ ಅಪರಾಧಿಗಳು ಉಳ್ಳವರನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ. ತಮ್ಮ ಖಾತೆಗೆ ಜನರಿಂದಲೇ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದಾರೆ. ಅದರಲ್ಲೂ ಷೇರು ಮಾರುಕಟ್ಟೆ ಹೆಸರಿನಲ್ಲಿ ವಂಚನೆ ಜೋರಾಗಿದೆ. ಷೇರುಗಳಲ್ಲಿ ಹಣ ತೊಡಗಿಸಿದರೆ ದುಪ್ಪಟ್ಟು ಲಾಭ ಕೊಡುವ ಆಮಿಷ ತೋರಿಸಿ ಕೋಟ್ಯಂತರ ತಮ್ಮ ಖಾತೆಗೆ ಹಾಕಿಸಿಕೊಂಡು ಕೈಕೊಡುತ್ತಿದ್ದಾರೆ.

ವೈದ್ಯರಿಗೆ ಪಂಗನಾಮ: ಜಿಲ್ಲೆಯಲ್ಲಿ ಸೆ. 13ರಂದು ಎರಡು ಸೈಬರ್‌ ಕ್ರೈಂ ಕೇಸ್‌ ದಾಖಲಾಗಿವೆ. ಹಾವೇರಿ ನಗರದ ವೈದ್ಯರೊಬ್ಬರು ತಮಗೆ ₹71.50 ಲಕ್ಷ ವಂಚನೆಯಾಗಿರುವುದಾಗಿ ಇಲ್ಲಿಯ ಸೆನ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೆ. 5ರಿಂದ ಸೆ. 13ರ ನಡುವಿನ ಅವಧಿಯಲ್ಲಿ ಫಸ್ಟ್ ಮಾರ್ಕ್‌ ಪ್ಲಾಟ್‌ಫಾರ್ಮ್ ಮೂಲಕ ₹ 75 ಲಕ್ಷ ತೊಡಗಿಸಿದರೆ ಐಪಿಒ ಖರೀದಿಸಲು ಶೇ. 100 ಮತ್ತು ಷೇರು ವ್ಯವಹಾರದಲ್ಲಿ ಶೇ. 20ರಷ್ಟು ಲಾಭ ಕೊಡುವುದಾಗಿ ನಂಬಿಸಿ ₹ 71.50 ಲಕ್ಷ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆದರೆ, ಯಾವುದೇ ಹಣವನ್ನು ವಾಪಸ್‌ ಕೊಡದೇ ಮೋಸ ಮಾಡಿದ್ದಾರೆ ಎಂದು ಡಾ. ಗೌತಮ್ ಲೋಡಾಯಾ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸವಣೂರಿನಲ್ಲಿ ಫಾರ್ಮಾಸಿಸ್ಟ್‌ ಆಗಿರುವ ರಾಮಕೃಷ್ಣ ಘಾಟಗೆ ಎಂಬವರು ಕೂಡ ಇದೇ ಮಾದರಿಯಲ್ಲಿ ವಂಚನೆಗೆ ಒಳಗಾಗಿದ್ದು, ₹17.40 ಲಕ್ಷ ಮೋಸ ಮಾಡಿರುವುದಾಗಿ ಸೈಬರ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹೀಗೆ ಸುಶಿಕ್ಷಿತರೇ ದುರಾಸೆಗೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ.3 ವರ್ಷದಲ್ಲಿ ₹12.48 ಕೋಟಿ ವಂಚನೆ: ಜಿಲ್ಲೆಯಲ್ಲಿ 2022ರಿಂದ ಪ್ರಸಕ್ತ ಆಗಸ್ಟ್‌ ವರೆಗೆ 305 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿದ್ದು, ₹ 12.48 ಕೋಟಿ ಮೊತ್ತದ ವಂಚನೆಯಾಗಿದೆ. 2022ರಲ್ಲಿ 118 ಕೇಸ್‌ ದಾಖಲಾಗಿದ್ದರೆ, 2023ರಲ್ಲಿ 107 ಪ್ರಕರಣ ದಾಖಲಾಗಿವೆ. ಈ ವರ್ಷ 8 ತಿಂಗಳಲ್ಲಿ 80 ಕೇಸ್‌ಗಳು ದಾಖಲಾಗಿವೆ. ಮೂರು ವರ್ಷಗಳಲ್ಲಿ ಇದೇ ವರ್ಷ ಹೆಚ್ಚಿನ ಪ್ರಮಾಣದ ಹಣ ವಂಚನೆಯಾಗಿದೆ. 2022ರಲ್ಲಿ ₹1.88 ಕೋಟಿ ವಂಚನೆಯಾಗಿದ್ದರೆ 2023ರಲ್ಲಿ ₹2.16 ಕೋಟಿ ವಂಚನೆಯಾಗಿತ್ತು. ಆದರೆ, ಈ ವರ್ಷ ₹8.43 ಕೋಟಿ ವಂಚನೆಯಾಗಿದೆ.

ವಾಪಸ್‌ ಸಿಕ್ಕಿದ್ದು ಬಿಡಿಗಾಸು: ಸೈಬರ್‌ ಅಪರಾಧ ಪ್ರಕರಣಗಳನ್ನು ಭೇದಿಸಲು ಪೊಲೀಸರು ಎಷ್ಟೇ ಶ್ರಮಿಸಿದರೂ ವಂಚಕರು ಸಿಕ್ಕಿಬೀಳುವುದು, ಕಳೆದುಕೊಂಡವರಿಗೆ ಹಣ ವಾಪಸ್‌ ಸಿಗುವ ಪ್ರಮಾಣ ಕಡಿಮೆ ಎನ್ನಬಹುದು. 3 ವರ್ಷಗಳಲ್ಲಿ ದಾಖಲಾದ 305 ಸೈಬರ್‌ ಕೇಸ್‌ಗಳ ಪೈಕಿ ₹1.84 ಕೋಟಿ ಮೊತ್ತವನ್ನು ಸ್ಥಗಿತಗೊಳಿಸಲಾಗಿದೆ. ಹಣ ಕಳೆದುಕೊಂಡ ದೂರುದಾರರಿಗೆ ಇದುವರೆಗೆ ಸಿಕ್ಕಿದ್ದು ₹42 ಲಕ್ಷ ಮಾತ್ರ. ಅದಕ್ಕಾಗಿ ಡಿಜಿಟಲ್ ತಂತ್ರಜ್ಞಾನ ಹೆಚ್ಚಿದಂತೆಲ್ಲ ಸೈಬರ್‌ ವಂಚಕರು ಹೊಸ ತಂತ್ರದಲ್ಲಿ ವಂಚನೆಯ ದಾರಿ ಕಂಡುಕೊಳ್ಳುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಆನ್‌ಲೈನ್‌ ಸುರಕ್ಷತೆ ಪಾಠಗಳನ್ನು ಕಲಿಯಲೇಬೇಕಿದೆ.

ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಂ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕಾಗಿ ಸಾರ್ವಜನಿಕರು ತಮ್ಮ ಮೊಬೈಲ್‌ಗೆ ಬರುವ ಸಂಶಯಾಸ್ಪದ ಲಿಂಕ್‌ ಮೇಲೆ ಕ್ಲಿಕ್‌ ಮಾಡಬಾರದು. ಅಪರಿಚಿತ ಆ್ಯಪ್ ಡೌನ್‌ಲೋಡ್ ಮಾಡಬಾರದು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವ್ಯವಹಾರ ನಡೆಸುವಾಗ ಎಚ್ಚರಿಕೆ ವಹಿಸಬೇಕು. ವಂಚನೆಯಾದರೆ ತಕ್ಷಣ ಸೈಬರ್‌ ಠಾಣೆಗೆ ದೂರು ಕೊಡಬೇಕು ಎಂದು ಎಸ್ಪಿ ಅಂಶುಕುಮಾರ್‌ ಹೇಳಿದ್ದಾರೆ.