ಡಿ.ಕೆ.ಸುರೇಶ್ ಸೋಲಿಗೆ ಮತಗಳ್ಳತನವೇ ಕಾರಣ

| Published : Sep 02 2025, 01:00 AM IST

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ಕೆ.ಸುರೇಶ್ ಅವರ ಸೋಲಿಗೆ ಮತಗಳ್ಳತನ ಕಾರಣ ಎಂದು ಕೆಪಿಸಿಸಿ ಸಮಿತಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಶಂಕೆ ವ್ಯಕ್ತಪಡಿಸಿದರು.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ಕೆ.ಸುರೇಶ್ ಅವರ ಸೋಲಿಗೆ ಮತಗಳ್ಳತನ ಕಾರಣ ಎಂದು ಕೆಪಿಸಿಸಿ ಸಮಿತಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಶಂಕೆ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಸಂಸತ್ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಮತಗಳ್ಳತನದ ರೀತಿಯಲ್ಲಿಯೇ ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಲ್ಲಿಯೂ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಡಿ.ಕೆ.ಸುರೇಶ್ ರವರು, ಕಳೆದ ಸಂಸತ್ ಚುನಾವಣೆಯಲ್ಲಿ ಸುಮಾರು 2 ಲಕ್ಷ 80 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಏಕಾಏಕಿ ಸುಮಾರು 4 ಲಕ್ಷಕ್ಕೂ ಅಧಿಕ ಮತಗಳು ವ್ಯತ್ಯಯವಾಗಿವೆ. ಇಲ್ಲಿಯೂ ಮತಗಳ್ಳತನ ಆಗಿರುವ ಅನುಮಾನ ಕಾಡುತ್ತಿದೆ. ಈ ಬಗ್ಗೆಯೂ ಪರಾಮರ್ಶೆ ಆಗಬೇಕು ಎಂದರು.

ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ಬಿಜೆಪಿ ಒಳಸಂಚು ರೂಪಿಸಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದೆ. ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದಿದೆ. ಈ ಕುರಿತು ಎಲ್ಲ ಜಿಲ್ಲೆಗಳಲ್ಲಿಯೂ ಜನಾಂದೋಲನ ರೂಪಿಸಿ ಮತದಾರರಲ್ಲಿ ಜಾಗತಿ ಮೂಡಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಬಿಹಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರವರು ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಹೋರಾಟ ರೂಪಿಸಲಾಗುವುದು. ಮುಂಬರುವ ತಾಲೂಕು, ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆ ಒಟ್ಟಿಗೆ ನಡೆಯುವ ಸಾಧ್ಯತೆಗಳಿವೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಮತಗಳ್ಳತನದ ವಿರುದ್ಧ ಜಾಗತರಾಗಬೇಕು ಎಂದು ತಿಳಿಸಿದರು.

ಸತ್ಯಾಸತ್ಯೆ ಅರಿಯಲು ಎಸ್‌ಐಟಿ ತನಿಖೆ:

ಧರ್ಮಸ್ಥಳ ವಿಷಯದಲ್ಲಿ ಕಾಂಗ್ರೆಸ್, ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿಯವರ ಯಾವುದೇ ಹಿತಾಸಕ್ತಿ ಇಲ್ಲ. ಕೋರ್ಟ್‌ ಆದೇಶದ ಮೇರೆಗೆ ಎಸ್‌ಐಟಿ ರಚನೆಯಾಗಿ, ತನಿಖೆಯಾಗುತ್ತಿದೆ. ವೀರೇಂದ್ರ ಹೆಗ್ಗಡೆ ಅವರೂ ಎಸ್‌ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ಶೀಘ್ರ ವಾಸ್ತವಾಂಶ ಹೊರಬರಲಿದೆ ಎಂದು ವಿನಯ್ ಕುಮಾರ್ ಸೊರಕೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಧರ್ಮಸ್ಥಳ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಪ್ರಚೋದನೆ ಕೊಟ್ಟವರು ಯಾರು ಎಂಬುದನ್ನು ಬಿಜೆಪಿಯವರೇ ಹೇಳಬೇಕು. ತಿಮರೋಡಿ ಅವರೂ ಕೂಡಾ ಸಂಘಪರಿವಾರಿದವರು. ಹಾಗಾದರೆ ಪ್ರಭಾಕರ್ ಭಟ್ ಧರ್ಮಸ್ಥಳದ ಪರವಾಗಿ ಇದ್ದಾರೆಯೇ ಅಥವಾ ವಿರುದ್ಧವೇ ಎಂದು ಪ್ರಶ್ನಿಸಿದರು.

ಕರಾವಳಿಯಲ್ಲಿ ಯಾವುದೇ ಧಾರ್ಮಿಕ ಉದ್ರೇಕಕಾರಿ ಕಾರ್ಯಕ್ರಮಗಳು ನಡೆದರೂ ಅದರ ಹಿಂದೆ ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ ಭಟ್ ಇರುತ್ತಾರೆ. ಆದರೆ, ಬಿಜೆಪಿ ಶಾಸಕರು ಮೊನ್ನೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಬಂದಾಗ ಕಲ್ಲಡ್ಕ ಪ್ರಭಾಕರ ಭಟ್ ಏಕೆ ಇರಲಿಲ್ಲ ಎಂದು ಪ್ರಶ್ನೆ ಮಾಡಿದರು.

ಎಸ್ ಐಟಿ ತನಿಖೆಯನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರೂ ಸಹ ಸ್ವಾಗತ ಮಾಡಿದ್ದರೂ. ಅಸ್ಥಿಪಂಜರಗಳು ದೊರೆಯಲಿಲ್ಲ ಎಂಬುದು ಖಚಿತವಾದ ಮೇಲೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಎಸ್‌ಐಟಿ ರಚನೆ ಮಾಡಿದಾಗ ಏನೂ ಮಾತನಾಡಲಿಲ್ಲ. ಈಗ ರಾಜಕೀಯ ಲಾಭಕ್ಕೆ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟರ್ ಅವರು ಏಕೆ ಮಾತನಾಡುತ್ತಿಲ್ಲ. ಈಗ ಸಮಾವೇಶ ಮಾಡುತ್ತಿರುವುದು ಬಿ.ಎಲ್.ಸಂತೋಷ್ ಅವರ ಬಣ. ಸಮಾವೇಶದ ಕುರಿತು ಬಿಜೆಪಿಯಲ್ಲಿಯೇ ಗೊಂದಲವಿದೆ ಎಂದು ವಿನಯ್ ಕುಮಾರ್ ಸೊರಕೆ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಗಂಗಾಧರ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಡಿ.ಕೆ.ಕಾಂತರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ಜಿಲ್ಲಾ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಮುಖಂಡರಾದ ರಾಜಶೇಖರ್, ಪಿ.ಡಿ.ರಾಜು, ಕೆ.ರಮೇಶ್, ಸುನಿಲ್, ಕೋಕಿಲ, ದೇವರಾಜು, ರಘು, ರಾಜಶೇಖರ್ ಇತರರಿದ್ದರು.

1ಕೆಆರ್ ಎಂಎನ್ 1.ಜೆಪಿಜಿ

ಕೆಪಿಸಿಸಿ ಸಮಿತಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.