ಸಾರಾಂಶ
ಇಂದು ಎಲ್ಲ ಮನೆಗಳಲ್ಲಿ ಕೇವಲ ಹಿರಿಯರು ಮಾತ್ರವೇ ಉಪಸ್ಥಿತರಿರುವ ಸನ್ನಿವೇಶ ಕಂಡುಬರುತ್ತಿದೆ. ಹಿರಿಯರನ್ನು ತೊರೆದು ಯುವಕರು ಪಟ್ಟಣದೆಡೆಗೆ ದೌಡಾಯಿಸುತ್ತಿರುವುದು ಪ್ರಸ್ತುತ ವಿದ್ಯಮಾನವಾಗಿದೆ. ಇಂತಹ ಸ್ಥಿತಿಯಲ್ಲಿ ಹೈನುಗಾರಿಕೆ ನಿರ್ವಹಣೆ ಬಲು ಕಷ್ಟದಾಯಕವಾಗಿದೆ.
ಯಲ್ಲಾಪುರ:
ರೈತರಿಗೆ ಕೃಷಿ ಅಗತ್ಯವಿದೆ ಎಂದಾದರೆ, ಹೈನುಗಾರಿಕೆಯೂ ಅತ್ಯಗತ್ಯ, ಅನಿವಾರ್ಯ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಹೇಳಿದರು.ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ತಾಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ವತಿಯಿಂದ ಮುಖ್ಯ ಕಾರ್ಯನಿರ್ವಾಹಕರಾಗಿ, ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಹಿತ್ಲಳ್ಳಿಯ ರಾಮಚಂದ್ರ ಹೆಗಡೆ ಅವರನ್ನು ಸನ್ಮಾನಿಸಿ, ಕಲ್ಯಾಣ ಸಂಘದ ವತಿಯಿಂದ ನೀಡಲಾದ ₹ ೭೦,೦೦೦ ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.
ಅನೇಕ ಗೊಂದಲ ಮತ್ತು ಸಮಸ್ಯೆಗಳ ನಡುವೆ ಇರುವ ಹೈನುಗಾರಿಕೆ ನಶಿಸದಂತೆ ನಾಗರಿಕರು ಮನೆಗೆ ಒಂದಾದರು ಆಕಳು ಸಾಕಬೇಕು ಎಂದ ಅವರು, ಇಂದು ಎಲ್ಲ ಮನೆಗಳಲ್ಲಿ ಕೇವಲ ಹಿರಿಯರು ಮಾತ್ರವೇ ಉಪಸ್ಥಿತರಿರುವ ಸನ್ನಿವೇಶ ಕಂಡುಬರುತ್ತಿದೆ. ಹಿರಿಯರನ್ನು ತೊರೆದು ಯುವಕರು ಪಟ್ಟಣದೆಡೆಗೆ ದೌಡಾಯಿಸುತ್ತಿರುವುದು ಪ್ರಸ್ತುತ ವಿದ್ಯಮಾನವಾಗಿದೆ. ಇಂತಹ ಸ್ಥಿತಿಯಲ್ಲಿ ಹೈನುಗಾರಿಕೆ ನಿರ್ವಹಣೆ ಬಲು ಕಷ್ಟದಾಯಕವಾಗಿದೆ. ಈ ನಡುವಿನ ಸಂಕ್ರಮಣ ಕಾಲದಲ್ಲಿ ಜಿಲ್ಲೆಯಲ್ಲಿ ೪೧೦೦೦ ಲೀಟರ್‌ನಷ್ಟು ಹಾಲು ಉತ್ಪಾದನೆಯಾಗುತ್ತಿರುವುದು ಸಮಾಧಾನದ ಸಂಗತಿ ಎಂದರು.ಡೈರಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯದರ್ಶಿಗಳಿಗೆ ಕನಿಷ್ಠ ವೇತನ ದೊರೆಯುವಂತೆ ಸರ್ಕಾರಕ್ಕೆ ಆಗ್ರಹಿಸುವ ಹೋರಾಟದಲ್ಲಿ ನಾನು ಜತೆಗಿರುವೆ ಎಂದು ಭರವಸೆ ನೀಡಿದ ಅವರು, ಇನ್ನಾದರೂ ಸರ್ಕಾರ ಮತ್ತು ಹಾಲು ಉತ್ಪಾದಕರ ಸಂಘಟನೆಗಳ ನಡುವೆಯೂ ಇರದ ಹೊಂದಾಣಿಕೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.ಧಾರವಾಡ ಹಾಲು ಒಕ್ಕೂಟದ ಶಿರಸಿ ಉಪವಿಭಾಗದ ಜಿಲ್ಲಾ ಮುಖ್ಯಸ್ಥ ಎಸ್.ಎಸ್. ಬಿಜೂರ ಮಾತನಾಡಿ, ಹೈನುಗಾರಿಕೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಉತ್ಪಾದಕರ ಸಂಖ್ಯೆ ಅಧಿಕವಾಗಿಸಬೇಕು. ಹಾಲು ಉತ್ಪಾದಕರ ಸಂಘಗಳು ತಾವು ಗಳಿಸಿದ ಲಾಭಾಂಶದ ಹೆಚ್ಚಿನ ಪಾಲನ್ನು ಉತ್ಪಾದಕರಿಗೆ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.ಕಲ್ಯಾಣ ಸಂಘದ ನಿರ್ದೇಶಕ ಸುಬ್ಬಯ್ಯ ಭಟ್ಟ, ಅಧ್ಯಕ್ಷತೆ ವಹಿಸಿದ್ದ ಹಿತ್ಲಳ್ಳಿ ಹಾ.ಉ. ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಶಂಕರ ಹೆಗಡೆ, ವಿಸ್ತರಣಾ ಸಮಾಲೋಚಕ ಪ್ರವೀಣ ಬಳ್ಳಾರಿ, ಮಹಾಬಲೇಶ್ವರ ಹೆಗಡೆ ಗುಂಡಾನಜಡ್ಡಿ, ವೀಣಾ ಹೆಬ್ಬಾರ, ಸಂಧ್ಯಾ ಡಿ.ಎಚ್., ಗಣಪತಿ ಪಟಗಾರ, ವಿಶ್ವ ಭಟ್ಟ ಇದ್ದರು.