ಸಾರಾಂಶ
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಕಂಟಕ ಎದುರಾಗಿದೆ.
ಮಂಗಳೂರು : ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಕಂಟಕ ಎದುರಾಗಿದೆ.
ಮಂಗಳೂರು ಇತ್ತೀಚಿನ ದಿನಗಳಲ್ಲಿ ಸಾಲು, ಸಾಲು ಹತ್ಯೆಗಳಿಂದ ನಲುಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಅವರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾದ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಸಹಿತ 36 ಮಂದಿಯನ್ನು ಗಡೀಪಾರು ಮಾಡುವ ಕುರಿತು ಪೊಲೀಸ್ ಇಲಾಖೆ ಕಾನೂನು ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ.
ಈ ಸಂಬಂಧ ಗುರುವಾರವೇ ವಿಚಾರಣೆಗೆ ಹಾಜರಾಗುವಂತೆ ಮಹೇಶ್ ಶೆಟ್ಟಿ ತಿಮರೋಡಿಗೆ ಪೊಲೀಸರು ನೋಟಿಸ್ ನೀಡಿದ್ದರು. ಗುರುವಾರ ವಿಚಾರಣೆಗೆ ಅವರು ಹಾಜರಾಗಿರಲಿಲ್ಲ. ಶುಕ್ರವಾರ ಅವರು ಇನ್ನೊಂದು ಪ್ರಕರಣದ ಜೊತೆಗೆ (ಬಂಧನ ವೇಳೆ ಬ್ರಹ್ಮಾವರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣ) ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಸುಮಾರು ಒಂದು ಗಂಟೆ ಕಾಲ ಅವರ ವಿಚಾರಣೆ ನಡೆಸಲಾಯಿತು. ಗಡೀಪಾರು ಪ್ರಕರಣದ ಕುರಿತು ವಿಚಾರಣೆ ನಡೆದಿದೆ. ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಧರ್ಮಸ್ಥಳ ವಿರುದ್ಧದ ವಿಡಿಯೋ ಡಿಲೀಟ್‌ಗೆ ಕೋರ್ಟ್ ಆದೇಶ
ಬೆಂಗಳೂರು: ಬುರುಡೆ ಪ್ರಕರಣ ಸಂಬಂಧ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತವರ ಸಹೋದರ ಹರ್ಷೇಂದ್ರ ಕುಮಾರ್ ಕುಟುಂಬದವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮತ್ತು ಪ್ರಸಾರ ಮಾಡಿರುವ ಮಾನಹಾನಿ ಸುದ್ದಿ-ವಿಡಿಯೋಗಳ ಲಿಂಕ್‌ಗಳನ್ನು ತೆರವುಗೊಳಿಸಲು ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಯೂಟ್ಯೂಬರ್ ಎಂ.ಡಿ. ಸಮೀರ್ ಸೇರಿದಂತೆ ರಾಜ್ಯದ ಅನೇಕ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಿದೆ.