ದಲಿತ ಮಕ್ಕಳ ಮಲದಗುಂಡಿಗಿಳಿಸಿ ದೌರ್ಜನ್ಯ: ಆಶೋಕ್

| Published : Dec 19 2023, 01:45 AM IST

ಸಾರಾಂಶ

ಹಾಸ್ಟೆಲ್‌ನಲ್ಲಿ ಸರಿಯಾದ ಊಟ ನೀಡುತ್ತಿಲ್ಲ, ಎಲ್ಲ ಮಕ್ಕಳಿಗೂ ಸೇರಿ ಕೇವಲ 4 ಲೀಟರ್ ಹಾಲನ್ನಷ್ಟೇ ನೀಡಿದ್ದಾರೆ. ಇನ್ನು, ಡಿ.1ರಂದು ಘಟನೆ ನಡೆದಿದೆಯಾದರೂ ಆದರೆ ಜಿಲ್ಲಾ ಮಂತ್ರಿ ಭೈರತಿ ಸುರೇಶ್ ಡಿ.18ಕ್ಕೆ ಭೇಟಿ ನೀಡಿ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ಆರ್‌.ಅಶೋಕ್‌ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಕೋಲಾರ

ವಸತಿ ಶಾಲೆಯಲ್ಲಿ ದಲಿತ ಮಕ್ಕಳನ್ನು ಮಲದಗುಂಡಿಯಲ್ಲಿ ಇಳಿಸಿ ಅವರ ಮೇಲೆ ಅಮಾನವೀಯವಾಗಿ ದೌರ್ಜನ್ಯವೆಸಗಿದ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆ ದಿದ್ದು, ಸರ್ಕಾರವಿನ್ನೂ ಬದುಕಿದೆಯೋ, ಸತ್ತಿದೆಯೋ ಎಂಬಂತಾಗಿದೆ ಎಂದು ವಿಧಾನಸಭೆ ವಿಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದರು.ಪ್ರಕರಣ ಸಂಬಂಧ ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿಯಲ್ಲಿ ದಲಿತ ಮಹಿಳೆಯ ಮೇಲೆ ನಡೆದ ದೌರ್ಜನ್ಯ ಪ್ರಕರಣ ಹಸಿಯಾಗಿದೆ. ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಮಗು ಸತ್ತರೂ ಪಾಲಕರಿಂದ ದುಡ್ಡು ವಸೂಲಿಗೆ ಮುಂದಾಗಿದ್ದಾರೆ. ಅತ್ತ ನಂಜನಗೂಡಲ್ಲಿ ಹೊಲಕ್ಕೆ ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರವಾಗಿದೆ. ಇದೆಲ್ಲವನ್ನೂ ಗಮನಿಸಿದರೆ ರಾಜ್ಯ ದಲ್ಲಿ ಕಾನೂನಿನ ಬಗ್ಗೆ ಭಯವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹರಿಹಾಯ್ದ ಅವರು, ಇಷ್ಟಾದರೂ ಈ ಸರ್ಕಾರ ಎಚ್ಚೆತ್ತು ಕೊಳ್ಳುತ್ತಲೇ ಇಲ್ಲ. ಬದಲಿಗೆ ಬರಿ ವರ್ಗಾವಣೆ ದಂಧೆಯಲ್ಲಿ ಸರ್ಕಾರ ಮುಳುಗಿ ಹೋಗಿದೆ ಎಂದು ಲೇವಡಿ ಮಾಡಿದರು.

ಇನ್ನು, ಮೊರಾರ್ಜಿ ವಸತಿ ಶಾಲೆಯಲ್ಲಿ ದಲಿತ ಮಕ್ಕಳ ಮೇಲೆ ಈ ಅನ್ಯಾಯ ಹಾಗೂ ದೌರ್ಜನ್ಯ ನಡೆದಿರುವುದು ಖಂಡನೀಯ. ಡಿ.1ರಂದೇ ಘಟನೆ ನಡೆದಿದೆ. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಬಳಿ ಪ್ರಕರಣದ ವಿಡಿಯೋ ಇದೆ ಇಷ್ಟಾದರೂ ಪ್ರಕರಣವನ್ನು ಈವರೆಗೂ ಮುಚ್ಚಿ ಹಾಕಿದ್ದಾರೆ ಎಂದು ಆಪಾದಿಸಿದರು.ಮಕ್ಕಳ ಅಳಲು: ನಾನು ಮಕ್ಕಳೊಂದಿಗೆ ಮಾತನಾಡಿದಾಗ, ‘ನಮಗೆ ಕಾಡಿನಲ್ಲಿ ಬಿದಿರು ಕಡಿದುಕೊಂಡು ಬರಲು ಹೇಳಿದ್ದಾರೆ. ಪಿಟ್‌ನಲ್ಲಿ ಇಳಿಯುವಾಗ ಪ್ರಾಂಶುಪಾಲರ ಬಳಿ ಮಕ್ಕಳು ಮಾಸ್ಕ್ ಕೇಳಿದ್ದರೂ ನೀಡಿಲ್ಲ. ಅಮಾನವಿಯವಾಗಿ ನಡೆಸಿಕೊಂಡಿದ್ದಾರೆ, ಪ್ಲಾಸ್ಟಿಕ್ ಪೇಪರ್ ಹಾಕಿ ಕ್ಲೀನ್ ಮಾಡಿ ಎಂದು ತಿಳಿಸಿದ್ದಾರೆ’ ಎಂದು ಮಕ್ಕಳು ತಮ್ಮ ಅಳಲು ತೋಡಿಕೊಂಡರು ಎಂದವರು ದೂರಿದರು.ಸಚಿವರ ನಿರ್ಲಕ್ಷ್ಯ: ಹಾಸ್ಟೆಲ್‌ನಲ್ಲಿ ಸರಿಯಾದ ಊಟ ನೀಡುತ್ತಿಲ್ಲ, ಎಲ್ಲ ಮಕ್ಕಳಿಗೂ ಸೇರಿ ಕೇವಲ 4 ಲೀಟರ್ ಹಾಲನ್ನಷ್ಟೇ ನೀಡಿದ್ದಾರೆ. ಇನ್ನು, ಡಿ.1ರಂದು ಘಟನೆ ನಡೆದಿದೆಯಾದರೂ ಆದರೆ ಜಿಲ್ಲಾ ಮಂತ್ರಿ ಭೈರತಿ ಸುರೇಶ್ ಡಿ.18ಕ್ಕೆ ಭೇಟಿ ನೀಡಿ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ಕಿಡಿಕಾರಿದರು.ಹಾಸ್ಟೆಲ್‌ನಲ್ಲೆ ರಕ್ಷಣೆಯಿಲ್ಲ!: ಇನ್ನು, ಹಾಸ್ಟೆಲ್‌ನಲ್ಲಿ ಬಾಲಕಿಯೊಬ್ಬಳ ಖಾಸಗಿ ವಿಡಿಯೋ ಚಿತ್ರೀಕರಣ ಆಗಿದೆ, ಹೇಗೆ ವಿಡಿಯೋ ಮಾಡಿದರು? ವಸತಿ ನಿಲಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲವೇ? ಇಷ್ಟೆಲ್ಲಾ ಆದರೂ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಂತಿಲ್ಲ ಎಂದು ಅಶೋಕ್‌ ಆಪಾದಿಸಿದರು.

ನ್ಯಾಯಾಂಗ ತನಿಖೆಯಾಗಲಿ : ಇದು ನಾಗರೀಕ ಸಮಾಜ ಒಪ್ಪುವಂಥದಲ್ಲ ಎಂದು ತೀವ್ರವಾಗಿ ಖಂಡಿಸಿದ ಅವರು, ಪ್ರಕರಣವನ್ನು ಸಿಓಡಿ ತನಿಖೆಗೆ ಕೊಟ್ಟು ಸರ್ಕಾರ ಸುಮ್ಮನಾಗುತ್ತದೆ. ಆದರೆ ಜನರಿಗೆ ನ್ಯಾಯಾಂಗ ತನಿಖೆ ಮೇಲೆ ಮಾತ್ರ ನಂಬಿಕೆ ಇದೆ, ಸಿಟ್ಟಿಂಗ್ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ಆಗಬೇಕು ಎಂದವರು ಆಗ್ರಹಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿ, ಮಾಜಿ ಶಾಸಕ ಮಂಜುನಾಥಗೌಡ, ಅಧಿಕಾರಿಗಳು ಇದ್ದರು.