ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಲಿತ ದೌರ್ಜನ್ಯ ಪ್ರಕರಣಗಳ ಸಂದರ್ಭ ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಸರಿಯಾಗಿ ಪರಿಶೀಲನೆ ನಡೆಸದೆ, ಸೂಕ್ತ ಕ್ರಮ ವಹಿಸದೆ, ದೌರ್ಜನ್ಯ ನಡೆಸಿದವರ ಪರ ವಹಿಸುವ ಸಂಗತಿಗಳೂ ನಡೆಯುತ್ತಿದೆ. ಇದರಿಂದ ದಲಿತರಿಗೆ ಅನ್ಯಾಯವಾಗುತ್ತಿದೆ. ಕಾಯ್ದೆಯ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಠಾಣಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿ ಪ್ರಕರಣದ ಬಗ್ಗೆ ಸಮಪರ್ಕ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ದಲಿತ ಮುಖಂಡರಿಂದ ವ್ಯಕ್ತವಾಗಿದೆ.ಮಂಗಳೂರು ಪೊಲೀಸ್ ಕಮಿಷನರ್‌ರ ಕಚೇರಿಯಲ್ಲಿ ಭಾನುವಾರ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿ ಹಾಗೂ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಮಾಸಿಕ ಕುಂದುಕೊರತೆಯ ಜಂಟಿ ಸಭೆಯಲ್ಲಿ ದಲಿತ ಮುಖಂಡ ದೇವದಾಸ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.ಅಸ್ಪೃಶ್ಯತೆ ನಿರ್ಮೂಲನೆಯ ಉದ್ದೇಶದಿಂದ ರಚಿಸಲ್ಪಟ್ಟ ದಲಿತ ದೌರ್ಜನ್ಯ ಕಾಯ್ದೆಯು ತಿದ್ದುಪಡಿಯೊಂದಿಗೆ ಅನುಷ್ಠಾನಗೊಂಡಿದೆ. ಆದರೂ ದಲಿತರ ಮೇಲೆ ದೌರ್ಜನ್ಯ ನಡೆದ ವೇಳೆ ಪ್ರಕರಣದ ಕೂಲಂಕಷ ತನಿಖೆ ನಡಸದೆ ಹಿಂಬರಹ ನೀಡಿ ಪ್ರಕರಣ ಮುಕ್ತಾಯಗೊಳಿಸುವ ಕಾರ್ಯ ನಡೆಯುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ರಾಜಯ್ಯ ಎಂಬವರ ಮೇಲೆ ಪಕ್ಕದ ಮನೆಯವರು ದೌರ್ಜನ್ಯ ಎಸಗಿ ಜಾತಿ ನಿಂದನೆ ಮಾಡಿದ ಕುರಿತು ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಸರಿಯಾಗಿ ಪರಿಶೀಲನೆ ಮಾಡದೆ ಹಿಂಬರಹ ನೀಡಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತರ ಗಮನಕ್ಕೂ ತರಲಾಗಿದೆ. ಇಂತಹ ಪ್ರಕರಣಗಳು ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ನಡೆಯುತ್ತಿದೆ ಎಂದು ದೇವದಾಸ್ ಆಕ್ಷೇಪಿಸಿದರು.
ದಲಿತ ದೌರ್ಜನ್ಯ ಪ್ರಕರಣ ದಾಖಲಾದ ಸಂದರ್ಭ ಎಸಿಪಿ ಮಟ್ಟದ ಅಧಿಕಾರಿ ತನಿಖೆ ನಡೆಸುತ್ತಾರೆ. ಈ ಸಂದರ್ಭ ಎರಡೂ ಕಡೆಯ ವಾದಗಳನ್ನು ಆಲಿಸಲಾಗುತ್ತದೆ. ಆ ನಿಟ್ಟಿನಲ್ಲಿಯೇ ಕ್ರಮವನ್ನು ವಹಿಸಲಾಗುತ್ತದೆ. ಠಾಣಾ ಮಟ್ಟದಲ್ಲಿ ಯಾವುದೇ ಲೋಪ ಆಗಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ಡಿಸಿಪಿ ಸಿದ್ದಾರ್ಥ ಗೋಯಲ್ ಸ್ಪಷ್ಟಪಡಿಸಿದರು.112 ಸಂಖ್ಯೆಯಿಂದ ಸಿಗದ ಸ್ಪಂದನೆ!: ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್‌ನ ದರೋಡೆ ಪ್ರಕರಣದ ಸಂದರ್ಭ ಸಮೀಪದ ಮಹಿಳೆಯೊಬ್ಬರು 112ಕ್ಕೆ ಕರೆ ಮಾಡಿದರೂ ಸ್ಪಂದನೆ ದೊರಕಿಲ್ಲ. ಸಹಕಾರಿ ಬ್ಯಾಂಕ್‌ನಲ್ಲಿ ಸೂಕ್ತವಾದ ಸಿಸಿಟಿವಿ ಹಾಗೂ ಸೈರನ್ ವ್ಯವಸ್ಥೆ ಇಲ್ಲದಿರುವುದು, ವಾಚ್‌ಮೆನ್ ನೇಮಕ ಮಾಡದಿರುವ ಮೂಲಕ ತೀರಾ ನಿರ್ಲಕ್ಷ್ಯ ವಹಿಸಲಾಗಿದೆ. ಈ ಬಗ್ಗೆ ಸಹಕಾರಿ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಗಿರೀಶ್ ಕುಮಾರ್ ಎಂಬವರು ಆಗ್ರಹಿಸಿದರು.
ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸುವ ಕಾರ್ಯ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡಿದೆ. ಇಂತಹ ಪ್ರಕರಣದಲ್ಲಿ ಈ ರೀತಿಯಾಗಿ ನಿರ್ಲಕ್ಷ್ಯ ಆಗಿದೆ ಎಂದಾಗಿದಲ್ಲಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಘಟನೆಯ ಬಳಿಕ ಈಗಾಗಲೇ ಪೊಲೀಸ್ ಆಯುಕ್ತರು ನಗರದ ಎಲ್ಲ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಬ್ಯಾಂಕ್‌ಗಳ ಸಭೆ ನಡೆಸಿ ಸೂಕ್ತ ಭದ್ರತಾ ವ್ಯವಸ್ಥೆಗೆ ಸೂಚನೆ ನೀಡಿದ್ದಾರೆ ಎಂದರು.ತ್ಯಾಜ್ಯ ಘಟಕದ ಸಮಸ್ಯೆ:
ಬಾಳೆಪುಣಿಯ ಸುಮಾರು 15 ಕೊರಗ ಕುಟುಂಬಗಳು ವಾಸವಿರುವ ಪ್ರದೇಶದಲ್ಲಿ ತ್ಯಾಜ್ಯ ಘಟಕವನ್ನು ಸ್ಥಾಪಿಸುವ ಮೂಲಕ ಅಲ್ಲಿನ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಪಂ ಸಿಇಒಗೆ ದೂರು ನೀಡಿದರೂ ಕ್ರಮವಾಗಿಲ್ಲ. ಅಲ್ಲಿನ ಕುಡಿಯುವ ನೀರಿನ ಬಾವಿ ಹಾಗೂ ಬೋರ್‌ವೆಲ್‌ಗಳಿಗೆ ಘಟಕದ ಕಲುಷಿತ ನೀರು ಸೇರ್ಪಡೆಯಾಗುತ್ತಿದ್ದು, ಅಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ ಎಂದು ದಲಿತ ಮುಖಂಡ ಆನಂದ್ ದೂರಿದರು. ಸ್ಥಳೀಯ ನಿವಾಸಿ ಬಾಬು ಎಂಬವರು ಮಾತನಾಡಿ, ಅಲ್ಲೇ ಪಕ್ಕದಲ್ಲಿರುವ ಅಂಗನವಾಡಿಗೆ ತೆರಳುವ ಇಬ್ಬರು ಮಕ್ಕಳಿಗೆ ತ್ಯಾಜ್ಯದ ಬಳಿ ಓಡಾಡುವ ನಾಯಿ ಕಚ್ಚಿ ಆಸ್ಪತ್ರೆಗೆ ದಾಖಲಾಗುವಂತೆ ಆಗಿದೆ ಎಂದು ದೂರಿದರು.ಅನುದಾನ ದುರುಪಯೋಗ ಆರೋಪ:
ಮೂಲ್ಕಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲನಿ ಅಭಿವೃದ್ಧಿ ಹೆಸರಿನಲ್ಲಿ 2 ಕೋಟಿ ರು. ವೆಚ್ಚದ ರಸ್ತೆ ಕಾಮಗಾರಿಗೆ ಪ್ರಯತ್ನಿಸಲಾಗಿತ್ತು. ಆದರೆ ನೈಜವಾಗಿ ಅದು ಎಸ್‌ಸಿ ಎಸ್‌ಟಿ ಕಾಲನಿ ಅಲ್ಲ ಎಂದು ದಲಿತ ಮುಖಂಡರು ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದ ಹಿನ್ನೆಲೆಯಲ್ಲಿ ಸದ್ಯ ಕಾಮಗಾರಿ ತಡೆ ಹಿಡಿಯಲಾಗಿದೆ. ಈ ರೀತಿಯಾಗಿ ದಲಿತ ಸಮುದಾಯದ ಮೀಸಲು ಹಣ ಪೋಲಾಗದಂತೆ ಇಲಾಖೆಗಳು ಎಚ್ಚರಿಕೆ ವಹಿಸಬೇಕು ಎಂದು ಆನಂದ್ ಎಸ್.ಪಿ. ಹೇಳಿದರು.ಪ್ರಕರಣದ ಬಗ್ಗೆ ಸ್ಥಳ ತನಿಖೆ ಮಾಡಿದಾಗ ಆ ಕಾಲನಿಯಲ್ಲಿ ನಿಗದಿತ ದಲಿತ ಸಮುದಾಯದ ಜನಸಂಖ್ಯೆ ಇಲ್ಲ ಎಂಬ ಕಾರಣಕ್ಕೆ ಕಾಮಗಾರಿ ತಡೆಹಿಡಿಯಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದರು.
ಡಿಸಿಪಿ ರವಿಶಂಕರ್, ಎಎಸ್ಪಿ ರಾಜೇಂದ್ರ, ಪ್ರಭಾರ ಎಎಸ್ಪಿ ಮನೀಷಾ ಇದ್ದರು.