ಶೋಷಿತರ ಉನ್ನತಿಗೆ ದಲಿತ ಚಳವಳಿ ಅವಶ್ಯ-ಸಾಹಿತಿ ಸತೀಶ ಕುಲಕರ್ಣಿ

| Published : Mar 29 2024, 12:48 AM IST

ಸಾರಾಂಶ

ಸಮಾಜದಲ್ಲಿ ದಲಿತರು ಸೇರಿದಂತೆ ಅನೇಕ ಸಮುದಾಯಗಳ ಜನರು ಶೋಷಣೆಯಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ರೇಷನ್ ಕಾರ್ಡ್‌, ಆಧಾರ್‌ ಕಾರ್ಡ್‌ ಹೊಂದಲು ಸಹ ಪರದಾಡುವಂತ ಸ್ಥಿತಿ ಇದೆ. ಶೋಷಿತರಾಗಿರುವ ಕಟ್ಟಕಡೆಯ ಸಮಾಜಕ್ಕೆ ದಲಿತ ಚಳವಳಿಯ ಅಗತ್ಯವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಹಾವೇರಿ: ಸಮಾಜದಲ್ಲಿ ದಲಿತರು ಸೇರಿದಂತೆ ಅನೇಕ ಸಮುದಾಯಗಳ ಜನರು ಶೋಷಣೆಯಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ರೇಷನ್ ಕಾರ್ಡ್‌, ಆಧಾರ್‌ ಕಾರ್ಡ್‌ ಹೊಂದಲು ಸಹ ಪರದಾಡುವಂತ ಸ್ಥಿತಿ ಇದೆ. ಶೋಷಿತರಾಗಿರುವ ಕಟ್ಟಕಡೆಯ ಸಮಾಜಕ್ಕೆ ದಲಿತ ಚಳವಳಿಯ ಅಗತ್ಯವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಇಲ್ಲಿನ ರಾಜೇಂದ್ರನಗರದಲ್ಲಿನ ಎಸ್‌ಬಿಐ ಎದುರಿನ ಕಟ್ಟಡದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್ ಚಳವಳಿ ಹುಟ್ಟಿಕೊಂಡಿತು. ದಲಿತ ಪ್ಯಾಂಥರ್ಸ್ ಚಳವಳಿಯ ಪ್ರಭಾವ ಕರ್ನಾಟಕದ ದಲಿತ ಚಳವಳಿ ಮೇಲೆ ಆಯಿತು. ೭೦ರ ದಶಕದಲ್ಲಿ ಪ್ರೊ. ಬಿ. ಕೃಷ್ಣಪ್ಪ ಅವರು ಸಮಾನ ಮನಸ್ಕ ಗೆಳೆಯರೊಂದಿಗೆ ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿ ಶೋಷಣೆಗೆ ಒಳಗಾದ ಜನರ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದ ಫಲದಿಂದ ಅನೇಕರಿಗೆ ನ್ಯಾಯ ಸಿಕ್ಕಿತು ಎಂದರು.

ಸಾಹಿತಿಗಳಾದ ಸಿದ್ದಲಿಂಗಯ್ಯ, ಚಂಪಾ, ದೇವನೂರು ಮಹದೇವ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಅನೇಕರು ಕಥೆ, ಕವನ ಮತ್ತು ಹಾಡುಗಳ ಮೂಲಕ ಜಾಗೃತಿ ಮೂಡಿಸುತ್ತಾ ದಲಿತ ಚಳವಳಿಗೆ ಶಕ್ತಿಯಾಗಿದ್ದರು. ಬಂಡಾಯ ಸಾಹಿತ್ಯ ಸಂಘಟನೆಯು ದಲಿತ ಚಳವಳಿಗೆ ಕೈಜೋಡಿಸುವ ಮೂಲಕ ಹೊಸಶಕ್ತಿ ನೀಡಿತ್ತು. ಶೋಷಿತರ ಉನ್ನತಿಗೆ ದಲಿತ ಚಳವಳಿ ಅತಿ ಅವಶವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಪತ್ರಕರ್ತ ಮಾಲತೇಶ ಅಂಗೂರ ಮಾತನಾಡಿ, ದಲಿತ ಚಳವಳಿಯಲ್ಲಿ ಮೊದಲಿನಂತೆ ಕಾವಿಲ್ಲ. ಒಗ್ಗಟ್ಟಿಲ್ಲ ಎನ್ನುವುದು ನಿಜ. ಆದರೆ ದಲಿತರಿಗೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಎಲ್ಲ ಸಂಘಟನೆಗಳು ಒಟ್ಟಾಗಿ ನಿಲ್ಲುವುದೇ ಒಂದು ಆಶಾದಾಯಕ ಬೆಳವಣಿಗೆ. ಯಾವುದೇ ಸಂಘಟನೆ ಇರಲಿ, ಆ ಸಂಘಟನೆಗೆ ಸಾಂಸ್ಕೃತಿಕ ನೆಲಗಟ್ಟು ಇದ್ದಾಗ ಬಹುಕಾಲ ಉಳಿಯಲು ಸಾಧ್ಯ. ಹಾವೇರಿ ಜಿಲ್ಲೆಯ ದಸಂಸ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಚಳವಳಿ ಮರುಜೀವ ನೀಡಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಂಜಯ ಗಾಂಧಿ ಸಂಜೀವಣ್ಣನವರ ಮಾತನಾಡಿ, ಪ್ರೊ. ಬಿ. ಕೃಷ್ಣಪ್ಪ ಅವರ ಆಶಯದಂತೆ, ಸಮಿತಿಯ ರಾಜ್ಯ ಮುಖಂಡರ ಮಾರ್ಗದರ್ಶನಲ್ಲಿ ಮುನ್ನಡೆಸಲಾಗುತ್ತಿದೆ. ನೊಂದ ದಲಿತ ಶೋಷಿತರ ಪರವಾಗಿ ಸದಾ ನಿಂತಿದೆ. ಇದೀಗ ಜನಸಂಪರ್ಕ ಕಾರ್ಯಾಲಯ ಆರಂಭಿಸಲಾಗಿದೆ. ಇದರ ಪ್ರಯೋಜನ ನೊಂದವರು ಪಡೆದುಕೊಳ್ಳಬೇಕು ಎಂದರು.

ದಸಂಸ ಪ್ರಮುಖರಾದ ರಮೇಶ ಜಾಲಿಹಾಳ, ಸುಮಂಗಲ ರಾರಾವಿ, ಆನಂದ್ ಮುರುಡಪ್ಪನವರ್, ಕೆ.ಆರ್. ಉಮೇಶ್, ಶಿವಣ್ಣ ಕನವಳ್ಳಿ, ರಮೇಶ ಮಮದಾಪುರ, ವಿಜಯ್ ಕೆಳಗಿನ್ಮನಿ, ರವಿ ಹುಣಿಸಿಮರದ, ನಾಗರಾಜ್ ಕರಿಯಮ್ಮನವರ, ರಾಜು ಮೇಗಳಮನಿ, ಮಾಲತೇಶ್ ಕೆಂಚಮ್ಮನವರ್, ಮರಿಯಪ್ಪ ಬಂದಮ್ಮನವರ್, ಲಕ್ಷ್ಮಣ ಕನವಳ್ಳಿ, ಪರಮೇಶ್ ಸವಣೂರು, ಮೈಲೆಪ್ಪ ಗೂರಪ್ಪನವರ, ನಗೀನಾ ಬಾನು, ಗುತ್ತಮ್ಮ ಮಾಳಗಿ, ರೇಖಾ ಅಸುಂಡಿ, ಶೇಖವ್ವ ಹರಿಜನ್, ಅನ್ನಪೂರ್ಣಾ ಒದ್ದಟ್ಟಿ, ಫರೀದಾ ನದಿಮುಲ್ಲಾ, ಲಕ್ಷ್ಮಿ ಹಾವೇರಿ, ಜಯವ್ವ ಹರಿಜನ್ ಮತ್ತಿತರರು ಇದ್ದರು.