ತಹಸೀಲ್ದಾರ್ ಸಮ್ಮುಖದಲ್ಲಿ ದೇವಸ್ಥಾನ ಪ್ರವೇಶ ಮಾಡಿದ ದಲಿತರು

| Published : Jul 06 2025, 11:48 PM IST

ತಹಸೀಲ್ದಾರ್ ಸಮ್ಮುಖದಲ್ಲಿ ದೇವಸ್ಥಾನ ಪ್ರವೇಶ ಮಾಡಿದ ದಲಿತರು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ತೂಬಗೆರೆ ಹೋಬಳಿಯ ಗೂಳ್ಯ ಗ್ರಾಮದಲ್ಲಿ ಪುರಾತನ ವೇಯಿಗಣ್ಣಮ್ಮ ದೇವಾಲಯವಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ಊರಿನ ಸರ್ವರೂ ಸೇರಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಾರೆ. ಆದರೆ, ಇಂದಿಗೂ ಈ ದೇವಾಲಯಕ್ಕೆ ದಲಿತರಿಗೆ ಪ್ರವೇಶ ಇರಲಿಲ್ಲ, ದೇಗುಲದ ಆರ್ಚಕ ಬಚ್ಚೇಗೌಡ, ದಲಿತರು ದೇವಾಲಯ ಪ್ರವೇಶಿಸದಂತೆ ನಿಂದನಾತ್ಮಕವಾಗಿ ಹೀಯಾಳಿಸಿದ ಬಗ್ಗೆ ದೂರು ಕೇಳಿ ಬಂದಿತ್ತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತಾಲೂಕಿನ ತೂಬಗೆರೆ ಹೋಬಳಿಯ ಗೂಳ್ಯ ಗ್ರಾಮದಲ್ಲಿ ಪುರಾತನ ವೇಯಿಗಣ್ಣಮ್ಮ ದೇವಾಲಯವಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ಊರಿನ ಸರ್ವರೂ ಸೇರಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಾರೆ. ಆದರೆ, ಇಂದಿಗೂ ಈ ದೇವಾಲಯಕ್ಕೆ ದಲಿತರಿಗೆ ಪ್ರವೇಶ ಇರಲಿಲ್ಲ, ದೇಗುಲದ ಆರ್ಚಕ ಬಚ್ಚೇಗೌಡ, ದಲಿತರು ದೇವಾಲಯ ಪ್ರವೇಶಿಸದಂತೆ ನಿಂದನಾತ್ಮಕವಾಗಿ ಹೀಯಾಳಿಸಿದ ಬಗ್ಗೆ ದೂರು ಕೇಳಿ ಬಂದಿತ್ತು.

ಈ ಕುರಿತು ಗ್ರಾಮದ ಶಕುಂತಲಮ್ಮ ಜಿಲ್ಲಾಧಿಕಾರಿಗಳಿಗೆ ಗ್ರಾಮದಲ್ಲಿನ ಅಸ್ಪೃಶ್ಯತೆ ಆಚರಣೆ ತೊಲಗಿಸುವಂತೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ಡಿವೈಎಸ್ಪಿ ರವಿ.ಪಿ, ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸಾಧಿಕ್ ಪಾಷ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಪ್ರೇಮ, ಸಹಾಯಕ ನಿರ್ದೇಶಕ ಉಮಾಪತಿ, ರಾಜಸ್ವ ನಿರೀಕ್ಷಕ ನರಸಿಂಹ ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅಧಿಕಾರಿಗಳು, ದೇವಸ್ಥಾನ ಸಾರ್ವಜನಿಕರ ಸ್ವತ್ತಾಗಿದ್ದು ಯಾರು ಬೇಕಾದರೂ ಬಂದು ಪೂಜೆ ಸಲ್ಲಿಸಬಹುದು, ಅಸ್ಪೃಶ್ಯತೆ ಆಚರಣೆ ಸಂವಿಧಾನ ವಿರೋಧಿಯಾಗಿದ್ದು, ತಾರತಮ್ಯ ನಡೆಸುವವರು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಎಲ್ಲರೂ ಸೋದರರಂತೆ ಬದುಕಬೇಕು. ಇಂತಹ ಅನಿಷ್ಟ ಪದ್ಧತಿ ತೊಲಗಿಸಲು ಕೈ ಜೋಡಿಸಬೇಕೆಂದು ಕರೆ ನೀಡಿದರು.

ತಹಸೀಲ್ದಾರ್‌ ಸಮ್ಮುಖದಲ್ಲಿ ಸಭೆ; ದೇಗುಲ ಪ್ರವೇಶ

ವೇಯಿಗಣ್ಣಮ್ಮ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಣೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ವಿಭಾ ವಿದ್ಯಾ ರಾಥೋಡ್ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿದ ಬಳಿಕ ದಲಿತರು ದೇವಸ್ಥಾನ ಪ್ರವೇಶಿಸಿದರು. ದೇವರಿಗೆ ಪೂಜೆ ಮಾಡಿಸಿದ ದಲಿತರು ಗ್ರಾಮದಲ್ಲಿನ ಅನಿಷ್ಟ ಪದ್ಧತಿಗೆ ಅಂತ್ಯವಾಡಿದರು.

ದಲಿತರ ಪ್ರವೇಶ; ಅನಾಥವಾದ ದೇವರು!

ದಲಿತರು ದೇವಾಲಯ ಪ್ರವೇಶ ಮಾಡಿದ ಬೆನ್ನಲ್ಲೇ ಸವರ್ಣೀಯರು ದೇವಸ್ಥಾನದ ಬಾಗಿಲು ಮುಚ್ಚದೆ ಕೆಲಕಾಲ ಅನಾಥವಾಗಿ ಬಿಟ್ಟು ಹೋದ ಘಟನೆ ನಡೆದಿತ್ತು ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹೆಸರು ಹೇಳಲಿಚ್ಛಸದ ದಲಿತ ವ್ಯಕ್ತಿಯೊಬ್ಬರು, ಹತ್ತಾರು ವರ್ಷಗಳಿಂದ ನಮ್ಮನ್ನು ದೇವಾಲಯದ ಒಳಗೆ ಬಿಡುತ್ತಿರಲಿಲ್ಲ, ದೇವಸ್ಥಾನದ ಜೀರ್ಣೋದ್ದಾರಕ್ಕೆ ನಮ್ಮ ಸಮುದಾಯವೂ ಹಣ ನೀಡಿದೆ. ಆದರೂ ನಾವು ನಮ್ಮನ್ನು ಒಳಗೆ ಬಿಡಿ ಎಂದು ಕೇಳಿರಲಿಲ್ಲ. ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ ದಲಿತ ಹೆಣ್ಣು ಮಗಳೊಬ್ಬರು ಈ ಅನಿಷ್ಟ ಆಚರಣೆಯನ್ನು ಸರ್ಕಾರದ ಗಮನಕ್ಕೆ ತಂದ ಹಿನ್ನೆಲೆ ಅಧಿಕಾರಿಗಳು ಬಂದು ಶಾಂತಿ ಸಭೆ ನಡೆಸಿದ ಬಳಿಕ, ದೇವಾಲಯದ ಬಾಗಿಲು ಮುಚ್ಚದೆ ದೇವಸ್ಥಾನವನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ. ಹಗಲು ರಾತ್ರಿ ದೇವಸ್ಥಾನದ ಬಾಗಿಲು ಮುಚ್ಚದೆ ದೇವಾಲಯದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಅದನ್ನು ದಲಿತರ ತಲೆಗೆ ಕಟ್ಟುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ವೇಯಿಗಣ್ಣಮ್ಮ ದೇವಾಲಯದಲ್ಲಿ ಸವರ್ಣೀಯರು 100 ವರ್ಷಗಳಿಂದಲೂ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಇದುವರೆಗೂ ದಲಿತರಿಗೆ ಪ್ರವೇಶ ನೀಡುತ್ತಿರಲಿಲ್ಲ. ಪೂಜಾರಿ ಜಾತಿ ನಿಂದನೆ ಮಾಡಿ ದಲಿತರನ್ನು ದೇಗುಲದ ಬಾಗಿಲಲ್ಲೇ ನಿಲ್ಲಿಸುತ್ತಿದ್ದ. ನೀವು ಒಳಗೆ ಬಂದರೆ ಮೈಲಿಗೆಯಾಗುತ್ತದೆ ಎಂದು ಹೀಯಾಳಿಸುತ್ತಿದ್ದ. ಇದರಿಂದ ಮನನೊಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದೆ.’

- ಶಕುಂತಲಮ್ಮ, ದಲಿತ ಮಹಿಳೆ‘ದೇವಾಲಯ ಪ್ರವೇಶ ನೀಡದೆ ಇದ್ದುದರ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಅಸ್ಪೃಶ್ಯತೆಯನ್ನು ಯಾವುದೇ ರೀತಿಯಲ್ಲೂ ಆಚರಿಸುವಂತಿಲ್ಲ ಎಂಬ ಅಂಶವನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಯಾರಿಗೂ ದೇಗುಲ ಪ್ರವೇಶ ನಿರ್ಬಂಧಿಸುವಂತಿಲ್ಲ ಎಂದೂ ಜನರಿಗೆ ತಿಳಿವಳಿಕೆ ನೀಡಲಾಗಿದೆ.’

- ವಿಭಾ ವಿದ್ಯಾ ರಾಥೋಡ್‌, ತಹಸೀಲ್ದಾರ್‌, ದೊಡ್ಡಬಳ್ಳಾಪುರ