ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸುವುದಾಗಿ ತಹಸೀಲ್ದಾರ್ ಮಂಗಳಾ ಎಂ. ಅವರು ತಿಳಿಸಿದರು.ತಾಲೂಕು ಆಡಳಿತ ಕಾರ್ಯಾಲಯದಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರನ್ನುದ್ದೇಶಿಸಿ ಮಾತನಾಡಿ, ಸರ್ಕಾರದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ತಾಲೂಕು ಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ.
ಆ.15 ರಂದು ಧ್ವಜಾರೋಹಣ ಮತ್ತು ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುವುದು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಗದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ತಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಾಧಕರಿಗೆ ಸನ್ಮಾನಗಳು ಜರುಗುವವು. ಶಾಲಾ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ತಾಲೂಕಿನ ಎಲ್ಲ ಇಲಾಖಾ ಅಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಕೈ ಜೋಡಿಸಬೇಕೆಂಬ ಮಹತ್ವದ ನಿರ್ಣಯಗಳನ್ನು ತಹಸೀಲ್ದಾರ್ ಮಂಗಳಾ ಎಂ.ಅವರ ಅಧ್ಯಕ್ಷತೆಯಲ್ಲಿ ಕೈಗೊಳ್ಳಲಾಯಿತು.ಪೂರ್ವಭಾವಿ ಸಭೆಯಲ್ಲಿ ಪಿಡಬ್ಲ್ಯುಡಿ ಇಲಾಖೆಯ ಎ.ಕೆ.ಮಕಾನದಾರ, ಪಶು ಇಲಾಖೆಯ ಅಧಿಕಾರಿ ಡಾ.ಸುರೇಶ ಜಾಧವ, ಉಪ ನೋಂದಣಿ ಅಧಿಕಾರಿ ಎಂ.ಎಸ್.ಗಾಣೀಗೇರ, ಪಿಯು ಕಾಲೇಜು ಪ್ರಾಚಾರ್ಯ ವಿಠ್ಠಲ ಕಳಸಾ ಸೇರಿದಂತೆ ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ, ಪುರಸಭೆ, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ತಾಪಂ ಇಲಾಖಾ ಅಧಿಕಾರಿಗಳು ಹಾಜರಿದ್ದರು.
--ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಬಳಕ ನಿಷೇಧ
ಕಮತಗಿ:ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ರಾಷ್ಟ್ರ ಧ್ವಜಗಳ ಮಾರಾಟ ಮತ್ತು ಬಳಕೆ ನಿಷೇಧಿಸಲಾಗಿದೆ. ಈಗಾಗಲೇ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿದ್ದು, ಅಂತವುಗಳನ್ನು ತಯಾರಿಸಿ, ಸಂಗ್ರಹಣೆ, ವಿತರಣೆ,ಮಾರಾಟ ಹಾಗೂ ಬಳಕೆಯನ್ನು ಪಟ್ಟಣ ಪಂಚಾಯಿತ ನಿಷೇಧಿಸಿದೆ. ಪ್ಲಾಸ್ಟಿಕ್ ಧ್ವಜ ಸೇರಿದಂತೆ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಮಾರಾಟ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಫ್ ಎನ್ ಹುಲ್ಲಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.