ಅಡಕೆ ಇಳುವರಿ ಕುಂಠಿತ, ಬೆಳೆಗಾರರಲ್ಲಿ ಆತಂಕ

| Published : Jul 07 2025, 11:48 PM IST

ಸಾರಾಂಶ

ಹೊನ್ನಾವರ ತಾಲೂಕಿನಲ್ಲಿ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಅಡಕೆ ಸಿಂಗಾರ ಒಡೆದಿರುವುದು ಬೆಳೆಗಾರರನ್ನು ಆತಂಕಕ್ಕೆ ಈಡು ಮಾಡಿದೆ. ಅವಧಿಗಿಂತ ಮುಂಚಿತವಾಗಿ ಮಳೆ ಬಂದಿರುವುದೇ ಕಾರಣ ಇರಬಹುದು ಎಂದು ರೈತರು ಅಂದಾಜಿಸಿದ್ದಾರೆ.

ಹೊನ್ನಾವರ: ತಾಲೂಕಿನಲ್ಲಿ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಅಡಕೆ ಸಿಂಗಾರ ಒಡೆದಿರುವುದು ಬೆಳೆಗಾರರನ್ನು ಆತಂಕಕ್ಕೆ ಈಡು ಮಾಡಿದೆ. ಅವಧಿಗಿಂತ ಮುಂಚಿತವಾಗಿ ಮಳೆ ಬಂದಿರುವುದೇ ಕಾರಣ ಇರಬಹುದು ಎಂದು ರೈತರು ಅಂದಾಜಿಸಿದ್ದಾರೆ.

ತಾಲೂಕಿನ ರೈತರು ಹೆಚ್ಚಾಗಿ ಅವಲಂಬಿಸಿರುವುದೇ ಅಡಕೆ ಬೆಳೆಯ ಮೇಲೆ. ಶರಾವತಿ ನದಿಯ ಇಕ್ಕೆಲಗಳಲ್ಲಿಯೂ ಕಾಣುವುದು ತೆಂಗು ಮತ್ತು ಕಂಗುಗಳು. ಅಡಕೆ ಬೆಳೆಯಿಂದ ಬಂದ ಹಣದಿಂದಲೇ ಜೀವನ ನಿರ್ವಹಣೆ ಮಾಡುವ ಪರಿಸ್ಥಿತಿ ಇದೆ. ಉತ್ತಮ ಇಳುವರಿ ಬರಲಿ ಎಂದು ರೈತರು ಗೊಬ್ಬರ, ಮಣ್ಣು ಹಾಕುತ್ತಾರೆ. ಆದರೂ ಈ ವರ್ಷ ಅಡಕೆ ಬೆಳೆಯ ಫಸಲು ಕಡಿಮೆ ಆಗಿರುವುದು ರೈತರ ಚಿಂತೆ ಹೆಚ್ಚಿಸಿದೆ.

ಮುಂಗಾರು ಮಳೆ ಆರಂಭವಾಯಿತು ಎಂದಾಕ್ಷಣ ಅಡಕೆ ಬೆಳೆಗೆ ಕೊಳೆ ರೋಗದ ಬಾಧೆ ಕಾಡುತ್ತದೆ. ರೈತರು ಕೊಳೆರೋಗ ಬರದಂತೆ ತಡೆಗಟ್ಟಲು ಮೈಲುತುತ್ತೆ ಮತ್ತು ಸುಣ್ಣದ ಮಿಶ್ರಣ ಮಾಡಿ ಅಡಕೆ ಮರಕ್ಕೆ ಸಿಂಪಡಣೆ ಮಾಡುತ್ತಾರೆ. ಆದರೆ ಈ ವರ್ಷ ಅಡಕೆ ಮುಗುಡು ಅಥವಾ ಅಡಕೆ ಸಿಂಗಾರ ಒಡೆದು ಬರುವ ಅಡಕೆ ತುಂಬಾ ಕಡಿಮೆ ಪ್ರಮಾಣದಲ್ಲಿ ಇದೆ. ಪ್ರತಿವರ್ಷ ಬೇಕಾಗುವಷ್ಟು ಮೈಲುತುತ್ತು ಹಾಗೂ ಸುಣ್ಣದ ಮಿಶ್ರಣ ಬೇಕಾಗುತ್ತಿಲ್ಲ.

ಕೂಲಿ ಕಾರ್ಮಿಕರ ಕೊರತೆ: ಇನ್ನು ಜೂನ್, ಜುಲೈನಲ್ಲಿ ಕೊಳೆರೋಗಕ್ಕೆ ಮದ್ದು ಹೊಡೆಸುವ ಭರಾಟೆ ಜೋರಾಗಿಯೇ ಇರುತ್ತದೆ. ಆದರೆ ವರ್ಷದಿಂದ ವರ್ಷಕ್ಕೆ ಈ ಕಸುಬು ಮಾಡುವವರ ಪ್ರಮಾಣವೂ ಕಡಿಮೆ ಆಗುತ್ತಿದೆ. ಗೊನೆ ಕೊಯ್ಯಲು ಹಾಗೂ ಮದ್ದು ಸಿಂಪಡಣೆ ಮಾಡಲು ಅನುಭವಿ ಕೂಲಿ ಕಾರ್ಮಿಕರು ಸಕಾಲದಲ್ಲಿ ಸಿಗದೇ ಇರುವುದರಿಂದಲೂ ರೈತರಿಗೆ ನಷ್ಟ ಉಂಟಾಗುತ್ತಿದೆ.

ಅಡಕೆ ಬೆಳೆಗೆ ಇಲ್ಲ ಸ್ಥಿರವಾದ ಬೆಲೆ: ಇನ್ನು ವರ್ಷ ಪೂರ್ತಿ ಅಡಕೆ ಬೆಳೆದರೂ ಸರಿಯಾದ ದರ ಸಿಗದೆ ಇರುವ ತೊಂದರೆಯೂ ರೈತರಿಗೆ ಇದೆ. ಮಾರುಕಟ್ಟೆಯಲ್ಲಿ ದರ ಬದಲಾವಣೆ ಆಗುವುದು ಸಾಮಾನ್ಯ. ಆದರೂ ನಿರ್ದಿಷ್ಟವಾಗಿ ಒಂದು ದರ ಇದ್ದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಹೊನ್ನಾವರ ತಾಲೂಕಿನಲ್ಲಿ ಬಹುತೇಕ ಅಡಕೆ ಬೆಳೆಗಾರರು ಗುಂಟೆ ಲೆಕ್ಕಾಚಾರದಲ್ಲಿ ಜಮೀನನ್ನು ಹೊಂದಿರುವವರು. ಕೆಲವು ರೈತರು ಮಾತ್ರ ಎಕರೆ ಲೆಕ್ಕದಲ್ಲಿ ಜಮೀನು ಹೊಂದಿರಬಹುದು. ಗುಂಟೆ ಲೆಕ್ಕದಲ್ಲಿ ಹೊಂದಿರುವ ರೈತರಿಗೆ ಬೆಳೆಯೂ ಕಡಿಮೆ ಆಗಿ, ದರವೂ ಸರಿಯಾಗಿ ಸಿಗದೇ ಇದ್ದರೆ ಹೇಗೆ ಅನ್ನುವ ಭಯ ಆವರಿಸಿದೆ.

ಇಳುವರಿ ಕುಂಠಿತವಾಗಿರುವ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಧ್ಯಯನ ನಡೆಸಿ ತಮಗೆ ಮಾರ್ಗದರ್ಶನ ನೀಡಬೇಕು ಎಂದು ಅಡಕೆ ಬೆಳೆಗಾರರು ಮನವಿ ಮಾಡಿದ್ದಾರೆ.

ಮೈಲುತುತ್ತ ಬಳಕೆ: ಪ್ರತಿ ವರ್ಷ ನಮ್ಮ ಮನೆಯ ತೋಟಕ್ಕೆ ಮೈಲುತುತ್ತು 8ರಿಂದ 10 ಕೆಜಿ ಬೇಕಾಗುತ್ತಿತ್ತು. ಆದರೆ ಈ ವರ್ಷ ಕೇವಲ 5 ಕೆಜಿ ಸಾಕಾಗಿದೆ. ಅರ್ಧದಷ್ಟು ಮೈಲುತುತ್ತು ಬಳಕೆ ಆಗಿದೆ. ಅಡಕೆ ಗೊನೆ ಬಿಟ್ಟಿರುವುದು ತೀರಾ ಕಡಿಮೆ ಆಗಿರುವುದೇ ಇದಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಅನಿಸುತ್ತದೆ ಎಂದು ಅಡಕೆ ಬೆಳೆಗಾರರು ಸತ್ಯನಾರಾಯಣ ಹೆಗಡೆ ಹೇಳುತ್ತಾರೆ.