ಗೆಲುವಿನ ವಿರೋಧ ಪದ ಸೋಲಲ್ಲ, ಯಶಸ್ಸಿನ ಮೊದಲ ಮೆಟ್ಟಿಲು ಸೋಲು: ಪ್ರೊ.ಎಸ್. ಇಂದುಮತಿ

| Published : Dec 22 2024, 01:33 AM IST

ಗೆಲುವಿನ ವಿರೋಧ ಪದ ಸೋಲಲ್ಲ, ಯಶಸ್ಸಿನ ಮೊದಲ ಮೆಟ್ಟಿಲು ಸೋಲು: ಪ್ರೊ.ಎಸ್. ಇಂದುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ ಚಟುವಟಿಕೆಯಲ್ಲಿ ಸಾಧನೆ ಮಾಡಿದ ಶಿಕ್ಷಕಿ ರೂಪಶ್ರೀ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ತೇರ್ಗಡೆಯಾದ ವಿದ್ಯಾರ್ಥಿ ಧನುಷ್ ಹಾಗೂ ಪ್ರೊ. ಇಂದುಮತಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಸೋಲು ಎಂಬುದು ಗೆಲುವಿನ ವಿರೋಧ ಪದವಲ್ಲ. ಬದಲಾಗಿ ಅದು ಯಶಸ್ಸಿನ ಮೊದಲ ಮೆಟ್ಟಿಲು, ನಾವು ನಮ್ಮಲ್ಲಿರುವ ಆತ್ಮ ವಿಶ್ವಾಸವನ್ನು ಉತ್ತೇಜಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಪ್ರೊ.ಎಸ್. ಇಂದುಮತಿ ಹೇಳಿದರು.

ನಗರದ ಕಲಾಮಂದಿರದಲ್ಲಿ ಏರ್ಪಡಿಸಿದ್ದ ರೋಟರಿ ಎಂ.ಎಸ್.ಇ.ಸಿ.ಟಿ ಮತ್ತು ಕಮಲಾ ರಂಜಿತ್ ಎಜುಕೇಷನ್ ಸೊಸೈಟಿಯ ದಿ ಆಕ್ಮಿ ಶಾಲೆಯ 24ನೇ ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೀವನದ ಪ್ರತಿಯೊಂದು ಸಂದರ್ಭದಲ್ಲಿ ಗೆಲುವು ಸೋಲುಗಳು ಸಾಮಾನ್ಯವಾಗಿರುತ್ತವೆ. ಆದರೆ ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳದೆ ಸ್ವಯಂ ಪ್ರೇರಣೆಗೆ ಹೆಚ್ಚಿನ ಮಹತ್ವ ನೀಡಬೇಕು. ನಾವು ಎಷ್ಟು ಸ್ವಯಂ ಪ್ರೇರಣೆಗೆ ಮಹತ್ವ ನೀಡುತ್ತೇವೆಯೋ ಅಷ್ಟು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಕಲಿಕೆ ನಿರಂತರವಾಗಿಬೇಕು ಹಾಗೂ ದೇಶದ ಮಹಾನ್ ವ್ಯಕ್ತಿಗಳನ್ನು ಸ್ಮರಿಸುತ್ತಾ ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ರಟನ್ ಟಾಟಾ ಅವರನ್ನು ಬದುಕಿನ ಪ್ರೇರಣಾ ಶಕ್ತಿಯಾಗಿ ಸ್ವೀಕರಿಸಬಹುದು ಎಂದು ಅವರು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಿಗೆ ಹಿತವಲ್ಲದ ಆಹಾರದ ಬಳಕೆ ಕಡಿಮೆ ಮಾಡಿ ಹಿತ ಆಹಾರವನ್ನು ಸೇವಿಸಿ ಆರೋಗ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಬೇಕೆಂದು ಹೇಳಿದರು.

ಅತಿಥಿಯಾಗಿದ್ದ ಜೆ.ಎಸ್.ಎಸ್. ಆಸ್ಪತ್ರೆಯ ಸರ್ಜಿಕಲ್ ಆಂಕೋಲಾಜಿಸ್ಟ್ ರವಿ ಕೃಷ್ಣಪ್ಪ ಮಾತನಾಡಿ, ಇತ್ತೀಚಿನ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಅವುಗಳ ಬಳಕೆ ಕಡಿಮೆ ಮಾಡಬೇಕೆಂದರೆ ಮೊದಲು ಮಕ್ಕಳ ಪೋಷಕರು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಅದಾಗಲೇ ಮಕ್ಕಳು ಓದಿನ ಕಡೆಗೆ ಗಮನ ನೀಡಲು ಸಾಧ್ಯವಾಗುತ್ತದೆ ಎಂದರು.

ಕಮಲಾ ರಂಜಿತ್ ಎಜುಕೇಷನಲ್ ಸೊಸೈಟಿಯ ಕಾರ್ಯದರ್ಶಿ ಆರ್. ಅರುಣ್ ಸಿಂಗ್, ಸಮಿತಿ ಸದಸ್ಯರಾದ ಆರ್. ಸುಭಾಷಿಣಿ ಹಾಗೂ ಪ್ರವೀಣ್ ಸಿಂಗ್ ಹಾಗೂ ಆಕ್ಮಿ ಶಾಲೆಯ ಪ್ರಾಂಶುಪಾಲೆ ಎಸ್. ಶ್ವೇತ ಚೌಹಾಣ್, ಮುಖ್ಯ ಶಿಕ್ಷಕಿ ಶ್ರೀದೇವಿ ಇದ್ದರು.

ಶೈಕ್ಷಣಿಕ ಚಟುವಟಿಕೆಯಲ್ಲಿ ಸಾಧನೆ ಮಾಡಿದ ಶಿಕ್ಷಕಿ ರೂಪಶ್ರೀ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ತೇರ್ಗಡೆಯಾದ ವಿದ್ಯಾರ್ಥಿ ಧನುಷ್ ಹಾಗೂ ಪ್ರೊ. ಇಂದುಮತಿ ಅವರನ್ನು ಸನ್ಮಾನಿಸಲಾಯಿತು.

ನಂತರದಲ್ಲಿ ಗಣೇಶನ ಸ್ತುತಿಯೊಂದಿಗೆ ಮಕ್ಕಳು ಪ್ರಸ್ತುತಪಡಿಸಿದ ರಾಮಾಯಣ ನೃತ್ಯರೂಪಕ, ಅರ್ಜುನ ಆನೆ ಸ್ಮರಣಾತ್ಮಕ ನೃತ್ಯ, ಹೆಮ್ಮೆಯ ಉದ್ಯಮಿ ರತನ್ ಟಾಟಾ ಅವರಿಗೆ ಗೌರವ ಸಲ್ಲಿಸುವ ನೃತ್ಯ ರೂಪಕಗಳು ಹಾಗೂ ಇನ್ನಿತರ ಪುಟಾಣಿ ಮಕ್ಕಳ ನೃತ್ಯರೂಪಕದೊಂದಿಗೆ 14 ವರ್ಣರಂಜಿತ ಸಾಂಸ್ಕೃತಿಕ ಕಲಾತ್ಮಕ ಕಾರ್ಯಕ್ರಮಗಳು ವಾರ್ಷಿಕೋತ್ಸವಕ್ಕೆ ಮೆರಗು ನೀಡಿದವು.

ಸಂಸ್ಥೆಯ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಪಾಲ್ಗೊಂಡಿದ್ದರು.