ಸಾರಾಂಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ತಾಲೂಕಿನ ವಿವಿಧ ದಲಿತಪರ ಸಂಘಟನೆ ಒಕ್ಕೂಟದಿಂದ ತಹಸೀಲ್ದಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.ಅನೇಕ ರಾಜಕಾರಣಿಗಳು ಮಹಾ ಮಾನವತಾವಾದಿ, ದೇಶ ಕಂಡ ಅಪ್ರತಿಮ, ದೀನದಲಿತರ ಉದ್ಧಾರಕ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರ ಹೆಸರಿಗೆ ಧಕ್ಕೆ ತರುವಂತ ಕೆಲಸ ಆಗಾಗ ಮಾಡುತ್ತಲೇ ಬರುತ್ತಿದ್ದಾರೆ. ಈಗ ಆ ಸಾಲಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದ್ದಾರೆ. ಅಂಬೇಡ್ಕರ್ ಹೆಸರನ್ನು ಬಳಸುವುದು ಕೆಲವರಿಗೆ ವ್ಯಸನವಾಗಿದೆ ಎಂದು ಬಹಳಷ್ಟು ಹಗುರವಾಗಿ ಮಾತನಾಡಿದ್ದಾರೆ. ಇದನ್ನು ಖಂಡಿಸುತ್ತೇವೆ ಅಮಿತ್ ಶಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ದಲಿತಪರ ಸಂಘಟನೆಯವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮರಿಸ್ವಾಮಿ ಕನಕಗಿರಿ, ನಿರುಪಾದಿ ಮಾದರ, ವಿನಾಯಕ ಮದ್ನಾಳ, ಛತ್ರಪ್ಪ ಮೇಗೂರು, ಶಂಕರ ಕಲ್ಲಬಾವಿ, ಬಸವರಾಜ ಬೇವಿನಕಟ್ಟಿ, ಯಮನೂರ ಮೇಲಿನಮನಿ, ಶರಣಪ್ಪ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ಸಂರಕ್ಷ ಸಮಿತಿ ಕುಷ್ಟಗಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕುಷ್ಟಗಿ, ಜಾಂಬವ ಯುವಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸೇರಿದಂತೆ ಅನೇಕ ಸಂಘಟನೆಗಳ ಪದಾಧಿಕಾರಿಗಳು ಇದ್ದರು.ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಶಿಕ್ಷೆ:ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ) 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಶಾಂತೇಶಕುಮಾರ ಚಲವಾದಿ ಮೇಲಿನ ಆರೋಪ ಸಾಬೀತಾಗಿದೆ.ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯ ಕಕ್ಕಿಹಳ್ಳಿ ಗ್ರಾಮದ ಕಲ್ಲುಕ್ವಾರಿ ಹತ್ತಿರ ಆರೋಪಿ ಪಾರಿವಾಳ ಹಾರಿಸಲು ಬಂದು ಬಾಲಕಿಯನ್ನು ಮಾತನಾಡಿಸಿ ಮದುವೆಯಾಗುತ್ತೇನೆಂದು ನಂಬಿಸಿ ಅಪಹರಿಸಿಕೊಂಡು ಗಂಗಾವತಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಬೆಂಗಳೂರಿಗೆ ಹೋಗಿ ಅಲ್ಲಿನ ಅಡಿಗೇರ ಹಳ್ಳಿಯ ಲೇಔಟ್‌ನಲ್ಲಿ ತಾವು ಗಂಡ-ಹೆಂಡತಿ ಎಂದು ಸುಳ್ಳು ಹೇಳಿ ಬಾಡಿಗೆ ರೂಮ್ ಪಡೆದು 79 ದಿನಗಳ ವರೆಗೆ ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಮಾಡಿರುವ ಬಗ್ಗೆ ಆರೋಪಿಸಲಾಗಿತ್ತು. ಕುಕನೂರ ಪೊಲೀಸ್ ಠಾಣೆಯ ಪಿ.ಎಸ್.ಐ. ದೂರು ಸ್ವೀಕರಿಸಿದ್ದು, ಪ್ರಕರಣದ ತನಿಖೆಯನ್ನು ಯಲಬುರ್ಗಾ ಸಿಪಿಐ ವೀರಾರೆಡ್ಡಿ ನಿರ್ವಹಿಸಿದ್ದು, ತನಿಖೆಯಲ್ಲಿ ಆರೋಪಿಯ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಶಾಂತೇಶಕುಮಾರ ಚಲವಾದಿ ಮೇಲಿನ ಆರೋಪ ಸಾಬೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ₹31,000 ದಂಡ ಭರಿಸುವಂತೆ ಆದೇಶಿಸಿ ಕುಮಾರ ಡಿ.ಕೆ. ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರು (ಪೋಕ್ಸೊ) ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು.