ಸಾರಾಂಶ
ಕನ್ನಡಪ್ರಭವಾರ್ತೆ ಹಾಸನ
ಜಿಲ್ಲೆಯಲ್ಲಿ ಅನಾಥ, ಪರಿತ್ಯಕ್ತ ಮತ್ತು ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಮಕ್ಕಳ ರಕ್ಷಣಾ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಖಾಯಮೇತರ ನೌಕರರ ಸಂಘದ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಖಾಯಂಮೇತರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕಾಂತರಾಜು ಮಾತನಾಡಿ, ಮಕ್ಕಳ ಸಂರಕ್ಷಣೆ ಸಂವಿಧಾನಬದ್ಧ ಜವಾಬ್ದಾರಿಯಾಗಿದ್ದು ಸಮಾಜದಲ್ಲಿ ನಿರ್ಲಕ್ಷ್ಯ, ಶೋಷಣೆ, ದೌರ್ಜನ್ಯಗಳಿಗೆ ಒಳಗಾಗಿ ಹಕ್ಕು ಮತ್ತು ಅವಕಾಶಗಳಿಂದ ವಂಚಿತರಾದ ಮಕ್ಕಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಬಾಲನ್ಯಾಯ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಕಾಯ್ದೆಯ ಅಡಿಯಲ್ಲಿ ಅಸಹಾಯಕ, ಪಾಲನೆ, ಪೋಷಣೆ ಮತ್ತು ರಕ್ಷಣೆಯ ಅವಶ್ಯಕತೆ ಇರುವ ಮಕ್ಕಳು ಹಾಗೂ ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳಿಗೆ ರಕ್ಷಣೆ ಹಾಗೂ ಪುನರ್ವಸತಿ ಒದಗಿಸಲಾಗುತ್ತಿದೆ. ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ದೃಷ್ಠಿಯಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು, ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.ಮಕ್ಕಳ ರಕ್ಷಣಾ ವ್ಯವಸ್ಥೆಗಳಾದ ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ವಿಶೇಷ ಪೊಲೀಸ್ ಘಟಕಗಳೊಂದಿಗೆ ಸಹಕರಿಸಿ ಸಂಕಷ್ಟ ಪರಿಸ್ಥಿತಿಯಲ್ಲಿರುವ, ಹಕ್ಕುಗಳಿಂದ ವಂಚಿತರಾದ ಮಕ್ಕಳಿಗೆ ರಕ್ಷಣೆ ಒದಗಿಸಿ, ಪುನರ್‍ವಸತಿ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಮಕ್ಕಳ ಹಕ್ಕುಗಳ ಸಂರಕ್ಷಣಾ ಕ್ಷೇತ್ರವು ಶಾಸನಬದ್ಧ, ಅತೀ ಸೂಕ್ಷ್ಮ ಅಲ್ಲದೆ ಅತ್ಯಗತ್ಯ ಸೇವೆಯಾಗಿದ್ದು, ಕಾಯ್ದೆಯಲ್ಲಿನ ನಿಯಮಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾ ಹಂತದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ನಿರ್ವಹಿಸುತ್ತಿವೆ ಆದರೆ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದರು. ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಯು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಖಾಯಂ ಸ್ವರೂಪದ ಕಾರ್ಯಚಟುವಟಿಕೆಯಾಗಿದ್ದು, ಪ್ರಸ್ತುತ ಕೇಂದ್ರ ಪುರಸ್ಕೃತ ಮಿಷನ್ ವಾತ್ಸಲ್ಯ ಯೋಜನೆಯಡಿ ಮಕ್ಕಳ ರಕ್ಷಣಾ ಕಾರ್ಯಚಟುವಟಿಕೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಜಿಲ್ಲೆಗಳಲ್ಲಿ ಬಾಲನ್ಯಾಯ ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಮುಂತಾದ ಮಕ್ಕಳ ಸಂಬಂಧಿ ಕಾಯ್ದೆಗಳ ಅನುಷ್ಠಾನ ಮಾಡುವ ಹಾಗೂ ಕಾಯ್ದೆಯ ಶಾಸನಾತ್ಮಕ ಅಸಾಂಸ್ಥಿಕ ಸೇವೆಗಳಾದ ದತ್ತು ಯೋಜನೆ, ಪೋಷಕತ್ವ ಯೋಜನೆ, ಪ್ರಾಯೋಜಕತ್ವ ಯೋಜನೆ, ಅನುಪಾಲನಾ ಸೇವೆ ಹಾಗೂ ಸಾಂಸ್ಥಿಕ ಸೇವೆಗಳಾದ ಶಿಶು ಮಂದಿರ, ಬಾಲಮಂದಿರ, ವೀಕ್ಷಣಾಲಯ, ವಿಶೇಷ ಗೃಹಗಳ ಮೂಲಕ ಅಸಹಾಯಕ ಮಕ್ಕಳಿಗೆ ರಕ್ಷಣೆ ಮತ್ತು ಪುನರ್ವಸತಿ ಒದಗಿಸಿ, ಮಕ್ಕಳಿಗೆ ಅಂತಿಮವಾಗಿ ಕುಟುಂಬಗಳಿಗೆ ಸೇರಿಸಲು ಶ್ರಮಿಸುವುದು. ಮಕ್ಕಳನ್ನು ಕುಟುಂಬಗಳಿಗೆ ಸೇರಿಸುವ ಪೂರ್ವದಲ್ಲಿ ಸಾಮಾಜಿಕ ತನಿಖಾ ವರದಿ ಹಾಗೂ ವೈಯಕ್ತಿಕ ಪೋಷಣಾ ಯೋಜನೆ ಮಾಡುವುದು ಅವಶ್ಯಕತೆ ಇದ್ದು ಅನುಭವಿ ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅವಶ್ಯಕತೆ ಇರುತ್ತದೆ ಎಂದು ಹೇಳಿದರು. ಮಕ್ಕಳ ರಕ್ಷಣಾ ಕಾರ್ಯಚಟುವಟಿಕೆಗಳು ಅತೀ ಸೂಕ್ಷ್ಮ, ಖಾಯಂ ಸ್ವರೂಪದ, ಶಾಸನಾತ್ಮಕ ಹಾಗೂ ಅತ್ಯಗತ್ಯ ಸೇವೆ ಆಗಿರುವುದರಿಂದ ಕೇಂದ್ರ ಸರ್ಕಾರದ ಮಕ್ಕಳ ರಕ್ಷಣಾ ಯೋಜನೆಯಲ್ಲಿ ಅನುಭವಿ, ಖಾಯಂ ಅಥವಾ ಕೌಶಲ್ಯಭರಿತ ಸಿಬ್ಬಂದಿಯನ್ನು ಆಯಾ ರಾಜ್ಯ ಸರ್ಕಾರಗಳು ಹೆಚ್ಚಿನ ಗೌರವ ಧನ ನೀಡಿ ನೇಮಕಾತಿ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಮಕ್ಕಳ ರಕ್ಷಣೆಗಾಗಿ ಪದವೀಧರರ ಹಾಗೂ ಸ್ನಾತಕೋತ್ತರ ಪದವೀಧರರನ್ನು ಹೊರಗುತ್ತಿಗೆ ವಿಧಾನದಲ್ಲಿ ನೇಮಿಸಿಕೊಳ್ಳಲಾಗಿದೆ, ಮಕ್ಕಳ ರಕ್ಷಣೆಯ ಸಂವಿಧಾನಾತ್ಮಕ, ಶಾಸನಾತ್ಮಕ ಜವಾಬ್ದಾರಿಯನ್ನು ಅಪಾಯಕಾರಿ ಸನ್ನಿವೇಶಗಳನ್ನೂ ಲೆಕ್ಕಿಸದೇ ಮಕ್ಕಳಿಗಾಗಿ ದುಡಿಯುತ್ತಿರುವ ಮಕ್ಕಳ ರಕ್ಷಣಾ ಸಿಬ್ಬಂದಿಗೆ ವೇತನ ನೇರವಾಗಿ ಪಾವತಿಸುವುದು, ಸೇವಾ ಭದ್ರತೆ, ವೇತನ ಹೆಚ್ಚಳ ಹಾಗೂ ಸಿಬ್ಬಂದಿ ಸೇವೆ ಮತ್ತು ಅನುಭವ ಪರಿಗಣಿಸಿ ಇಲಾಖೆಯಡಿ ವಿಲೀನ ಮಾಡುವ ಮೂಲಕ ಖಾಯಂ ಮಾಡಬೇಕಾಗಿ ಮನವಿ ಮಾಡಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಎಸ್. ಶಿವಣ್ಣ, ಸಿ. ಸರಸ್ವತಿ, ಕೆ.ಜಿ. ದಿಲೀಪ್, ಬಾಲಮಂದಿರದ ಸರಸ್ವತಿ, ಇಂದಿರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.