ಹಿಂದುಳಿದ ವರ್ಗಗಳ ಕಲ್ಯಾಣ ನಿಗಮಗಳಿಗೆ ಅನುದಾನಕ್ಕೆ ಬಿಜೆಪಿ ಆಗ್ರಹ

| Published : Dec 14 2024, 12:49 AM IST

ಹಿಂದುಳಿದ ವರ್ಗಗಳ ಕಲ್ಯಾಣ ನಿಗಮಗಳಿಗೆ ಅನುದಾನಕ್ಕೆ ಬಿಜೆಪಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಸೂಕ್ತ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಸೂಕ್ತ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರಮುಖರು ಹಾಗೂ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿದ ಪ್ರತಿಭನಾಕಾರರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಹಿಂದುಳಿದ ಸಮೂಹಗಳ ನೆರವಿನಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಅವರನ್ನೇ ಕಡೆಗಣಿಸುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಘೋಷಿಸಿರುವ ಭಾಗ್ಯಗಳನ್ನು ಪೂರೈಸುವ ಏಕಮಾತ್ರ ಉದ್ದೇಶದಿಂದ ವಿವಿಧ ನಿಗಮಗಳ ಹಣವನ್ನು ‘ಭಾಗ್ಯ’ಗಳಿಗೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ತಾವೇ ಘೋಷಿಸಿದ ಭಾಗ್ಯಗಳಿಗೆ ಅಗತ್ಯ ಹಣವನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವೆಂದು ವ್ಯಂಗ್ಯವಾಡಿದ ಅವರು, ವಾಲ್ಮೀಕಿ ನಿಗಮದ ಭ್ರಷ್ಟಾಚಾರದಿಂದ ಸಚಿವರೊಬ್ಬರು ಜೈಲಿಗೆ ಹೋಗಿ ಬರುವಂತಾಗಿದೆ. ಮುಡಾ ಹಗರಣದ ಆರೋಪಗಳು ತಮ್ಮ ವಿರುದ್ಧ ತಿರುಗುತ್ತಿರುವಂತೆಯೇ 14 ನಿವೇಶನಗಳನ್ನು ಏಕಾಏಕಿ ಹಿಂದಕ್ಕೆ ನೀಡಿದ ಬೆಳವಣಿಗೆಯೂ ನಡೆದಿದೆ ಎಂದು ಟೀಕಿಸಿದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಸೇರಿದ ವಾಲ್ಮೀಕಿ, ಕಾಡುಗೊಲ್ಲರು ಸೇರಿದಂತೆ ವಿವಿಧ ಸಮೂಹಗಳ ಅಭಿವೃದ್ಧಿಗೆ ಇರುವ ನಿಗಮ ಮಂಡಳಿಗಳಿಗೆ ಕಾಂಗ್ರೆಸ್ ಸರ್ಕಾರ ಅನುದಾನ ಒದಗಿಸುವಲ್ಲಿ ತಾರತಮ್ಯ ಧೋರಣೆಯನ್ನು ತಳೆದಿದೆ. ಹಿಂದೆ ನಿಗಮ ಮಂಡಳಿಗಳಿಗೆ 576 ಕೋಟಿ ರು. ಅನುದಾನವನ್ನು ಒದಗಿಸಲಾಗಿತ್ತು. ಕಳೆದ 2023- 24ನೇ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ 340 ಕೊಟಿ ರು.ಗಳನ್ನಷ್ಟೇ ನೀಡಿದ್ದು, ಇದರಲ್ಲಿ ಕೇವಲ 170 ಕೋಟಿಯಷ್ಟು ಬಳಕೆಯಾಗಿದೆಯೆಂದು ಆರೋಪಿಸಿದರು. ಗಂಗಾಕಲ್ಯಾಣ ಯೋಜನೆಯಡಿ 2 ಹೆಕ್ಟೇರ್ ಒಳಗಿನ ಬಡ ರೈತರಿಗೆ ಅಗತ್ಯ ನೆರವು ಒದಗಿಸಲು ಅರ್ಜಿಗಳನ್ನು ಸ್ವೀಕರಿಸಲಾಗಿದ್ದರೂ ಬಿಡುಗಡೆ ಮಾಡಿಲ್ಲವೆಂದು ಟೀಕಿಸಿದರು. ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಮಾತನಾಡಿ ಬಜೆಟ್‌ನಲ್ಲಿ ಘೋಷಿಸುವ ಮೊತ್ತಕ್ಕೂ, ವಾಸ್ತವವಾಗಿ ಬಿಡುಗಡೆ ಮಾಡುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದರಿಂದ ಹಿಂದುಳಿದ, ಅತೀ ಹಿಂದುಳಿದ, ಅಲೆಮಾರಿ ಸಮುದಾಯಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಇತರ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ ಎಂದರು.ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಮುಖಂಡ ಶಾಂತೆಯಂಡ ರವಿ ಕುಶಾಲಪ್ಪ, ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಪ್ರದೀಪ್ ಪೂಜಾರಿ, ನಗರಾಧ್ಯಕ್ಷ ಗಜ ಭಗವತಿ, ಸುಂಟಿಕೊಪ್ಪ ಅಧ್ಯಕ್ಷ ಪಿ.ಆರ್. ಸುನಿಲ್, ವಿರಾಜಪೇಟೆ ಪೊಟ್ಟಂಡ ನವೀನ್ ಉತ್ತಪ್ಪ, ಉಪಾಧ್ಯಕ್ಷ ಗಿರೀಶ್, ಸೋಮವಾರಪೇಟೆ ಉಪಾಧ್ಯಕ್ಷ ಗಂಗಾಧರ ಪಿ.ಎನ್, ಮಡಿಕೇರಿ ತಾಪಂ ಮಾಜಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಪಿ.ಎಂ. ರವಿ, ಪ್ರಮುಖರಾದ ಆರ್.ಕೆ. ಚಂದ್ರು, ಬಿ.ಕೆ. ಅರುಣ್ ಕುಮಾರ್, ಕನ್ನಂಡ ಸಂಪತ್, ಬಿ.ಕೆ. ಜಗದೀಶ್, ಸುರೇಶ್ ಸಿದ್ದಾಪುರ, ಕೆ.ಎಸ್. ರಮೇಶ್, ಅರುಣ್ ಶೆಟ್ಟಿ, ಸಜಿಲ್ ಕೃಷ್ಣ, ಬೊಳ್ಳಜಿರ ಬಿ. ಅಯ್ಯಪ್ಪ, ಬಿ.ಪಿ. ಡಿಶು, ಕುಶಾಲಪ್ಪ ಮತ್ತಿತರರು ಪಾಲ್ಗೊಂಡಿದ್ದರು.